ಪ್ಲಾಸ್ಟಿಕ್ ಬಾಟಲಿ ತರುವ ಮಕ್ಕಳಿಗೆ ₹2 ಪ್ರೋತ್ಸಾಹಧನ!

ಬುಧವಾರ, ಜೂನ್ 26, 2019
29 °C
ಪ್ಲಾಸ್ಟಿಕ್ ಬಳಕೆ ವಿರುದ್ಧ ಗ್ರಾಮ ಪಂಚಾಯ್ತಿ ಅಧ್ಯಕ್ಷನಿಂದ ವಿಭಿನ್ನ ಆಂದೋಲನ

ಪ್ಲಾಸ್ಟಿಕ್ ಬಾಟಲಿ ತರುವ ಮಕ್ಕಳಿಗೆ ₹2 ಪ್ರೋತ್ಸಾಹಧನ!

Published:
Updated:

ಹುಬ್ಬಳ್ಳಿ: ಆ ಊರಿನಲ್ಲಿರುವ ಎರಡು ಶಾಲೆಗಳು ಬೆಳಿಗ್ಗೆ ಆರಂಭವಾಗುವ ಹೊತ್ತಿಗೆ, ವ್ಯಕ್ತಿಯೊಬ್ಬರು ಶಾಲೆ ಬಳಿ ಚೀಲ ಹಿಡಿದು ನಿಂತಿರುತ್ತಾರೆ. ವಿದ್ಯಾರ್ಥಿಗಳು ಆ ಚೀಲಕ್ಕೆ ಮನೆಯಿಂದ ತಂದ ಪ್ಲಾಸ್ಟಿಕ್ ಬಾಟಲಿಗಳನ್ನು ಹಾಕುತ್ತಾರೆ. ಇದಕ್ಕೆ ಪ್ರತಿಯಾಗಿ ಮಕ್ಕಳಿಗೆ ಆ ವ್ಯಕ್ತಿ ತಲಾ ₹2 ನೀಡುತ್ತಾರೆ.

ಹುಬ್ಬಳ್ಳಿ ತಾಲ್ಲೂಕಿನ ಅಂಚಟಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ಶಿವಪ್ಪ ಬಿಡ್ನಾಳ ಅವರು, ಪ್ಲಾಸ್ಟಿಕ್ ಮುಕ್ತ ಗ್ರಾಮಕ್ಕಾಗಿ ಹಮ್ಮಿಕೊಂಡಿರುವ ಆಂದೋಲನದ ಮಾದರಿ ಇದು. ಮೂರು ದಿನದ ಹಿಂದಷ್ಟೇ ಆರಂಭವಾಗಿರುವ ಈ ಆಂದೋಲನದಲ್ಲಿ ಇದುವರೆಗೆ 2 ಸಾವಿರ ಪ್ಲಾಸ್ಟಿಕ್ ಬಾಟಲಿಗಳು ಸಂಗ್ರಹವಾಗಿವೆ!

ಬಿ.ಕಾಂ ಪದವೀಧರರಾಗಿರುವ ಬಸವರಾಜ ಅವರ ಈ ಆಂದೋಲನದಲ್ಲಿ, ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ 650 ಮಕ್ಕಳು ಹುರುಪಿನಿಂದ ಪಾಲ್ಗೊಳ್ಳುತ್ತಿದ್ದಾರೆ.

16 ಸಾವಿರ ಬಾಟಲಿ ಸಂಗ್ರಹ ಗುರಿ:

‘ಊರಿನಲ್ಲಿ 1,500 ಮನೆಗಳಿದ್ದು, 8 ಸಾವಿರ ಜನಸಂಖ್ಯೆ ಇದೆ. ಪ್ರತಿ ಮನೆಯಲ್ಲಿ ತಲಾ ಎರಡು ಪ್ಲಾಸ್ಟಿಕ್ ಬಾಟಲಿಗಳಂತೆ ಊರಿನಲ್ಲಿ ಕನಿಷ್ಠ 16 ಸಾವಿರ ಬಾಟಲಿಗಳಿವೆ ಎಂದು ಅಂದಾಜಿಸಲಾಗಿದೆ. ಆರಂಭದಲ್ಲಿ ಪೋಷಕರಿಗೆ ಪ್ಲಾಸ್ಟಿಕ್ ಬಾಟಲಿಗಳನ್ನು ನೀಡುವಂತೆ ಮನವಿ ಮಾಡಿದೆ. ಅದಕ್ಕೆ ಯಾರೂ ಕ್ಯಾರೇ ಎನ್ನಲಿಲ್ಲ. ಆಗ ಮಕ್ಕಳ ಮೂಲಕ ಸಂಗ್ರಹಿಸುವ ಆಲೋಚನೆ ಬಂತು’ ಎಂದು ಬಸವರಾಜ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮರುಬಳಕೆ:

‘ನಿತ್ಯ ಮಕ್ಕಳಿಂದ ಸಂಗ್ರಹಿಸುವ ಪ್ಲಾಸ್ಟಿಕ್ ಬಾಟಲಿ ಹಾಗೂ ಕವರ್‌ಗಳನ್ನು ಒಂದೆಡೆ ಸಂಗ್ರಹಿಸಲಾಗುತ್ತಿದೆ. ಗುರಿ ಮುಟ್ಟಿದ ಬಳಿಕ, ಅಷ್ಟನ್ನೂ ಕರಗಿಸಿ ಊರಿನ ಫುಟ್‌ಪಾತ್‌ಗಳಿಗೆ ಫೇವರ್ ಬ್ಲಾಕ್ ಬದಲಿಗೆ, ಕರಗಿಸಿದ ಪ್ಲಾಸ್ಟಿಕ್ ಅನ್ನು ಡಾಂಬರು ಮಾದರಿಯಲ್ಲಿ ಬಳಸಲಾಗುವುದು’ ಎಂದು ಪ್ಲಾಸ್ಟಿಕ್ ಮರುಬಳಕೆಯ ಬಗ್ಗೆ ತಮ್ಮ ಅಲೋಚನೆಯನ್ನು ಹಂಚಿಕೊಂಡರು.

‘ಐದು ವರ್ಷದ ಹಿಂದೆ ನಮ್ಮೂರಿನಲ್ಲಿ ಇಬ್ಬರಿಗೆ ಕ್ಯಾನ್ಸರ್ ಇತ್ತು. ಇದೀಗ ಕ್ಯಾನರ್ ರೋಗಿಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಪ್ಲಾಸ್ಟಿಕ್ ಬಳಕೆಯೂ ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಲ್ಲೊಂದು. ಜತೆಗೆ, ಪರಿಸರಕ್ಕೂ ಮಾರಕ. ಹಾಗಾಗಿ, ಅದರ ಬಳಕೆಯನ್ನು ನಿಲ್ಲಿಸಿದರೆ ಆರೋಗ್ಯದ ಜತೆಗೆ, ಪರಿಸರವೂ ಉಳಿಯುತ್ತದೆ’ ಎಂದು ಅಭಿಪ್ರಾಯಪಟ್ಟರು.

ಗೌರವಧನದಿಂದ ಪ್ರೋತ್ಸಾಹಧನ

ಪ್ಲಾಸ್ಟಿಕ್ ಬಾಟಲಿ ಸಂಗ್ರಹಿಸಿ ತಂದು ಕೊಡುವ ವಿದ್ಯಾರ್ಥಿಗಳಿಗೆ ಬಸವರಾಜ ಅವರು, ತಮಗೆ ಪಂಚಾಯ್ತಿಯಿಂದ ಪ್ರತಿ ತಿಂಗಳು ಸಿಗುವ ₹4 ಸಾವಿರ ಗೌರವಧನವನ್ನು ಪ್ರೋತ್ಸಾಹ ಧನವಾಗಿ ನೀಡುತ್ತಿದ್ದಾರೆ.

‘ಪ್ರತಿ ವಿದ್ಯಾರ್ಥಿಗೆ ನಿತ್ಯ ₹2 ನೀಡುತ್ತೇನೆ. ಕೆಲವರು ತಮ್ಮ ಬ್ಯಾಂಕ್ ಖಾತೆಗೆ ಪಾವತಿಸಿ ಎಂದು ಹೇಳಿದ್ದಾರೆ. ಮಕ್ಕಳು ತಮ್ಮ ಮನೆಯಲ್ಲಿ ಸಿಗುವ ಬಾಟಲಿಗಳನ್ನಷ್ಟೇ ಅಲ್ಲ, ರಸ್ತೆ ಅಕ್ಕಪಕ್ಕ ಹಾಗೂ ಚರಂಡಿಯಲ್ಲಿ ಬಿದ್ದಿರುವ ಬಾಟಲಿಗಳನ್ನು ಸಹ ತಂದು ಕೊಡುತ್ತಾರೆ. ಇದರ ಜತೆಗೆ, ಅವರಿಗೆ ಪ್ಲಾಸ್ಟಿಕ್ ಬಳಕೆಯ ಅಪಾಯಗಳ ಬಗ್ಗೆ ತಿಳಿ ಹೇಳುತ್ತೇನೆ. ಆ ಮೂಲಕ, ಮಕ್ಕಳ ನೇತೃತ್ವದಲ್ಲಿ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಗುರಿ ಇದೆ’ ಎಂದು ಬಸವರಾಜ ಹೇಳಿದರು.

**

ಪ್ಲಾಸ್ಟಿಕ್ ಬಳಕೆ ವಿರುದ್ಧ ಗ್ರಾಮ ಪಂಚಾಯ್ತಿ ಅಧ್ಯಕ್ಷರ ನೇತೃತ್ವದಲ್ಲೇ ಇಂತಹ ಆಂದೋಲನ ನಡೆದಿರುವುದು ಶ್ಲಾಘನೀಯ. ಗ್ರಾ.ಪಂ.ಗಳ ಮಟ್ಟದಲ್ಲಿ ಇಂತಹ ಅಭಿಯಾನ ಆರಂಭಿಸುವ ಚಿಂತನೆ ಇದೆ
– ಡಾ. ಬಿ.ಸಿ. ಸತೀಶ, ಸಿಇಒ, ಜಿಲ್ಲಾ ಪಂಚಾಯ್ತಿ

**

ಗ್ರಾಮದಲ್ಲಿ ಪ್ಲಾಸ್ಟಿಕ್ ಬಾಟಲಿ ಬದಲಿಗೆ ಕಾಪರ್ ಬಾಟಲಿ, ಸ್ಟೀಲ್ ಲೋಟ, ಪ್ಲಾಸ್ಟಿಕ್ ಬಿಂದಿಗೆ ಬದಲಿಗೆ ಸ್ಟೀಲ್, ಹಿತ್ತಾಳೆ ಹಾಗೂ ತಾಮ್ರದ ಬಿಂದಿಗೆ ಹಾಗೂ ಪ್ಲಾಸ್ಟಿಕ್ ಕವರ್ ಬದಲಿಗೆ ಬಟ್ಟೆ ಬ್ಯಾಗ್ ಬಳಸುವಂತೆ ಜಾಗೃತಿ ಮೂಡಿಸುತ್ತಿದ್ದೇವೆ
- ಬಸವರಾಜ ಶಿವಪ್ಪ ಬಿಡ್ನಾಳ, ಅಧ್ಯಕ್ಷ, ಅಂಚಟಗೇರಿ ಗ್ರಾಮ ಪಂಚಾಯ್ತಿ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !