ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ನಾಡಿನ ಹಸಿರು ಸೈನಿಕರು..!

ಪರಿಸರ ಸಂರಕ್ಷಣೆಗೆ ಪ್ರತಿ ತಿಂಗಳು ತಮ್ಮ ವೇತನದಿಂದ ಹಣ ತಗೆದಿರಿಸುವ ಯುವಕರು
ಅಕ್ಷರ ಗಾತ್ರ

ಗದಗ: ಜಿಲ್ಲೆಯ ನರೇಗಲ್ ಪಟ್ಟಣದ ‘ಹಸಿರು ಸೇನೆ’ ಕಾರ್ಯಕರ್ತರು ಸಾವಿರಾರು ಸಸಿಗಳನ್ನು ನೆಟ್ಟು, ಬರದ ನಾಡಿನಲ್ಲಿ ಸದ್ದಿಲ್ಲದೇ ಹಸಿರು ಕ್ರಾಂತಿ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಕಳೆದೊಂದು ದಶಕದಿಂದ ವಾಡಿಕೆಗಿಂತಲೂ ಕಡಿಮೆ ಮಳೆಯಾಗುತ್ತಿದೆ. ಜಲಮೂಲಗಳು ಒಣಗಿವೆ. ಇದಕ್ಕೆ ಪರಿಸರದ ಮೂಲಕ ಉತ್ತರ ಕಂಡುಕೊಳ್ಳಲು ರೂಪುಗೊಂಡ ಸಂಘಟನೆಯೇ ಗ್ರೀನ್‌ ಆರ್ಮಿ. ಸದ್ಯ ಈ ತಂಡದಲ್ಲಿ ಶಿಕ್ಷಕರು, ಐಟಿ ಉದ್ಯೋಗಿಗಳು,ವ್ಯಾಪರಸ್ಥರು, ಸಾಹಿತಿಗಳು, ವೈದ್ಯರು, ವಕೀಲರು ಇದ್ದಾರೆ.

ಪ್ರತಿ ತಿಂಗಳು ಪ್ರತಿಯೊಬ್ಬರೂ ತಮ್ಮ ವೇತನದಿಂದ ₹100 ಪರಿಸರ ಸಂರಕ್ಷಣೆಗಾಗಿ ತೆಗೆದಿಡುತ್ತಾರೆ. ಈ ಮೊತ್ತವನ್ನು ನಿರ್ವಹಿಸಲು ಪ್ರತ್ಯೇಕ ಬ್ಯಾಂಕ್‌ ಖಾತೆಯನ್ನೂ ಮಾಡಿದ್ದಾರೆ. ಹೀಗೆ ಸಂಗ್ರಹವಾದ ಮೊತ್ತದಿಂದ ಸಸಿಗಳನ್ನು ಖರೀದಿಸುತ್ತಾರೆ. ಮದುವೆ, ಹುಟ್ಟುಹಬ್ಬ, ಜಾತ್ರೆ ಇತರೆ ಕಾರ್ಯಕ್ರಮಗಳು ಇದ್ದಾಗ ಅಲ್ಲಿಗೆ ತೆರಳಿ ಸಸಿಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಭಾನುವಾರ ಮತ್ತು ಇತರೆ ರಜಾ ದಿನಗಳಲ್ಲಿ ತಂಡದ ಸದಸ್ಯರು ಶ್ರಮದಾನ ಮೂಲಕ ಸಸಿಗಳನ್ನು ನೆಡುತ್ತಾರೆ. ತಾವು ನೆಟ್ಟ ಪ್ರತಿಯೊಂದು ಸಸಿಯ ಮೇಲೂ ನಿರಂತರ ನಿಗಾ ಇರಿಸಿ, ಅದನ್ನು ಬೆಳೆಸಿ, ಉಳಿಸುತ್ತಾರೆ.

ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಹಸಿರು ಸೇನೆ ಕಾರ್ಯಕರ್ತರು ಜಿಲ್ಲೆಯಾದ್ಯಂತ 7 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ. 18 ಸಾವಿರಕ್ಕೂ ಹೆಚ್ಚು ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸಿದ್ದಾರೆ. ವಾರಾಂತ್ಯದ ದಿನಗಳಲ್ಲಿ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಈ ತಂಡದ ಸದಸ್ಯರು ಪರಿಸರ ಜಾಗೃತಿ ಮೂಡಿಸುತ್ತಾರೆ. ಮುಂಗಾರಿನಲ್ಲಿ ಬಿತ್ತನೆ ಮಾಡಲು ಬೀಜದುಂಡೆ ತಯಾರಿಸಲು ಸಲಹೆ ಮಾರ್ಗದರ್ಶನ ನೀಡುತ್ತಾರೆ.

ಮಳೆಕೊರತೆಯಿಂದ 2018ರಲ್ಲಿ ಸಾಕಷ್ಟು ಸಸಿಗಳು ಒಣಗತೊಡಗಿದ್ದವು. ಆಗ ನರೇಗಲ್‌ನ ನಿವೃತ್ತ ವೈದ್ಯ ಡಾ. ಆರ್.ಕೆ.ಗಚ್ಚಿನಮಠ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ಮೂಲಕ ನೀರು ತರಿಸಿ, ಸಸಿಗಳಿಗೆ ಪೂರೈಸಿದರು. ಶಿಕ್ಷಕ ಡಿ.ಎಚ್.ಪರಂಗಿ, ಉಪನ್ಯಾಸ ಎಸ್.ಸಿ.ಗುಳಗಣ್ಣವರ, ಈ.ಆರ್.ಲಗಳೂರ ಅವರು ಎನ್‌ಎಸ್‌ಎಸ್‌ ವಿದ್ಯಾರ್ಥಿಗಳೊಂದಿಗೆ ಸೇರಿ, ಬೇಸಿಗೆಯಲ್ಲಿ ಸಸಿಗಳಿಗೆ ನೀರುಣಿಸಿ ಹಸಿರು ಸೇನೆ ಕಾರ್ಯಕರ್ತರನ್ನು ಪ್ರೋತ್ಸಾಹಿಸುತ್ತಿದ್ದಾರೆ.

‘ನಮಗೆ ಎಲ್ಲವನ್ನೂ ಕೊಟ್ಟ ಭೂಮಿ ತಾಯಿಗೆ, ಈ ಮೂಲಕ ಅಲ್ಪ ಸೇವೆ ಮಾಡುತ್ತಿದ್ದೇವೆ’ ಎನ್ನುತ್ತಾರೆ ಗ್ರೀನ್‌ ಆರ್ಮಿ ತಂಡದ ಮುಖ್ಯಸ್ಥ ಜೈಪಾಲ ರೆಡ್ಡಿ ಮತ್ತು ಸದಸ್ಯರಾದ ಸಂಗಮೇಶ , ಶಿವು , ಮೈಲಾರಿ, ರಮೇಶ, ಲತಾ, ಚೇತನಕುಮಾರ, ಸಂತೋಷ, ಹಸನ, ಕಿರಣಕುಮಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT