ಮಾ.15ರಂದು ಗುಲಬರ್ಗಾ ವಿ.ವಿ 37ನೇ ಘಟಿಕೋತ್ಸವ

ಶನಿವಾರ, ಮಾರ್ಚ್ 23, 2019
31 °C
29,183 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಿರುವ ರಾಜ್ಯಪಾಲರು

ಮಾ.15ರಂದು ಗುಲಬರ್ಗಾ ವಿ.ವಿ 37ನೇ ಘಟಿಕೋತ್ಸವ

Published:
Updated:
Prajavani

ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲಯದ 37ನೇ ಘಟಿಕೋತ್ಸವ ಸಮಾರಂಭ ಜ್ಞಾನಗಂಗಾ ಆವರಣದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್ ಭವನದಲ್ಲಿ ಮಾರ್ಚ್‌ 15ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ.

ಈ ಬಾರಿ ಒಟ್ಟು 29,183 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪಡೆಯಲಿದ್ದಾರೆ. ಇದರಲ್ಲಿ ಸ್ನಾತಕ, ಸ್ನಾತಕೋತ್ತರ ಹಾಗೂ ವಿವಿಧ ಡಿಪ್ಲೊಮಾಗಳು ಸೇರಿ 28,861 ಪದವೀಧರರು, 237 ಪಿಎಚ್‌.ಡಿ, 76 ಮಂದಿ ಚಿನ್ನದ ಪದಕ ಹಾಗೂ 9 ಮಂದಿ ನಗದು ಬಹುಮಾನಕ್ಕೆ ಅರ್ಹರಾಗಿದ್ದಾರೆ.

ಅಂತರರಾಷ್ಟ್ರೀಯ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಒಕ್ಕೂಟದ ಅಧ್ಯಕ್ಷ ಡಾ.ವಿ.ಪ್ರಕಾಶ್‌ ಘಟಿಕೋತ್ಸವ ಭಾಷಣ ಮಾಡುವರು. ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ರಾಜ್ಯಪಾಲ ವಜೂಭಾಯಿ ರೂಢಾಭಾಯಿ ವಾಲಾ ಅವರು ಪದವಿ ಪ್ರದಾನ ಮಾಡುವರು. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮುಖ್ಯತಿಥಿಯಾಗಿ ಪಾಲ್ಗೊಳ್ಳುವರು ಎಂದು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಸ್‌.ಆರ್‌.ನಿರಂಜನ ಗುರುವಾರ ಮಾಧ್ಯಮದವರಿಗೆ ಮಾಹಿತಿ ನೀಡಿದರು.

ಒಟ್ಟು 171 ಚಿನ್ನದ ಪದಕಗಳಲ್ಲಿ 160 ಪದಕಗಳನ್ನು 85 ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಗುವುದು. ಇದರಲ್ಲಿ 52 ವಿದ್ಯಾರ್ಥಿನಿಯರು, 24 ವಿದ್ಯಾರ್ಥಿಗಳು ಇದ್ದಾರೆ. 11 ಪದಕಗಳನ್ನು ನಗದು ರೂಪದಲ್ಲಿ ಪರಿವರ್ತಿಸಿ, 9 ಮಂದಿಗೆ ಬಹುಮಾನ ನೀಡಲಾಗುತ್ತಿದೆ. ಇದರಲ್ಲಿ ನಾಲ್ವರು ವಿದ್ಯಾರ್ಥಿನಿಯರು, ಐವರು ವಿದ್ಯಾರ್ಥಿಗಳು ಸೇರಿದ್ದಾರೆ ಎಂದರು.

ಹೆಚ್ಚಿದ ವಿದ್ಯಾರ್ಥಿಗಳ ಸಂಖ್ಯೆ:

ಕಳೆದ ವರ್ಷ ಪದವಿ ಪಡೆದವರಿಗಿಂತ ಈ ಬಾರಿ 2,500ಕ್ಕೂ ಹೆಚ್ಚು ಮಂದಿ ಪದವಿ ಪಡೆಯುತ್ತಿದ್ದಾರೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಸಾವಿರ ಲೆಕ್ಕದಲ್ಲಿ ಹೆಚ್ಚಾಗುತ್ತಿದೆ ಎಂದು ಪ್ರೊ.ನಿರಂಜನ ತಿಳಿಸಿದರು.

‘ಪಿಎಚ್‌.ಡಿ ನೀಡಲು ಮಾರ್ಗದರ್ಶಕರು ಹಣಕ್ಕಾಗಿ ಪೀಡಿಸುತ್ತಾರೆ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಆರೋಪ ಸುಳ್ಳೋ, ನಿಜವೋ; ಇಂಥ ಕೆಲಸ ಮಾಡಕೂಡದು ಎಂದು ಪ್ರಾಧ್ಯಾಪಕರಿಗೆ ಮನವಿ ಮಾಡಿದ್ದೇನೆ. ಲಂಚ ಕೇಳಿದ ಬಗ್ಗೆ ಯಾರಾದರೂ ಸಣ್ಣ ದಾಖಲೆ ಕೊಟ್ಟರೂ ಕಠಿಣ ಕ್ರಮ ಕೈಗೊಳ್ಳುತ್ತೇನೆ. ದಾಖಲೆ ಇಲ್ಲದೇ ತಪ್ಪು ಯಾರದು, ಎಲ್ಲಿ ನಡೆದಿದೆ ಎಂದು ಹೇಳುವುದು ಕಷ್ಟವಾಗುತ್ತದೆ. ಆರೋಪ ಮಾಡಿದ ಯಾವೊಬ್ಬ ವಿದ್ಯಾರ್ಥಿಯೂ ಇದೂವರೆಗೆ ದಾಖಲೆ ನೀಡಿಲ್ಲ. ಸುಮ್ಮನೇ ಪ್ರಾಧ್ಯಾಪಕರ ಮೇಲೆ ಗೂಬೆ ಕೂರಿಸಬಾರದು’ ಎಂದರು.

ಕುಲಸಚಿವ ಪ್ರೊ.ಸಿ.ಸೋಮಶೇಖರ್‌, ಮೌಲ್ಯಮಾಪನ ಕುಲಸಚಿವ ಪ್ರೊ.ಡಿ.ಎಂ.ಮದರಿ ಹಾಗೂ ವಿವಿಧ ವಿಭಾಗಗಳು ಮುಖ್ಯಸ್ಥರೂ ಇದ್ದರು.

**

ಪಿಎಚ್‌.ಡಿ ಪಡೆದವರು

ನಿಕಾಯ                                  ಸಂಖ್ಯೆ

ಕಲಾ                                      62

ಸಮಾಜ ವಿಜ್ಞಾನ                       65

ವಿಜ್ಞಾನ ಮತ್ತು ತಂತ್ರಜ್ಞಾನ           19

ಕಾನೂನು;5

**

8 ಚಿನ್ನದ ಪದಕ ಪಡೆದವರು!

ಕನ್ನಡ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಶೈಲಜಾ ಶರಣಗೌಡ ಹಾಗೂ ಮ್ಯಾನೇಜ್‌ಮೆಂಟ್‌ ಅಧ್ಯಯನ ವಿಭಾಗದ ಅಂಕಿತಾ ಅವರು ಎಂಟು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ವಿಶ್ವವಿದ್ಯಾಲಯದಲ್ಲಿ ಅತಿ ಹೆಚ್ಚು ಚಿನ್ನ ಗಿಟ್ಟಿಸಿಕೊಂಡ ಕೀರ್ತಿಗೆ ಪಾತ್ರವಾಗಿದ್ದಾರೆ.

**

ವಿದ್ಯಾರ್ಥಿನಿಯರದೇ ಮೇಲುಗೈ

ಈ ಬಾರಿ ಚಿನ್ನದ ಪದಕ, ನಗದು ಬಹುಮಾನ ಹಾಗೂ ಪದವಿ ಪಡೆಯುವಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಅದರಲ್ಲೂ ಚಿನ್ನದ ಪದಕ ಪಡೆದವರು ಪಟ್ಟಿಯಲ್ಲಿ 24 ವಿದ್ಯಾರ್ಥಿಗಳಿದ್ದರೆ ಇದರ ಎರಡು ಪಟ್ಟಿಗಿಂತ ಹೆಚ್ಚು ಅಂದರೆ; 52 ವಿದ್ಯಾರ್ಥಿನಿಯರು ಇದ್ದಾರೆ! ಒಟ್ಟು 13,907 ವಿದ್ಯಾರ್ಥಿಗಳು ಪದವೀಧರರಿದ್ದರೆ, ಪದವೀಧರೆಯರ ಸಂಖ್ಯೆ 15,276. ಒಟ್ಟಾರೆ ಫಲಿತಾಂಶ ಹಾಗೂ ರ್‍ಯಾಂಕ್‌ ವಿಜೇತರ ಪಟ್ಟಿಯಲ್ಲೂ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ. ಪಿಎಚ್‌.ಡಿ ಪಡೆದವರಲ್ಲಿ ಮಾತ್ರ ಪುರುಷರ ಸಂಖ್ಯೆ ಹೆಚ್ಚಿದೆ.

**

ಮೂವರಿಗೆ ಗೌರವ ಡಾಕ್ಟರೇಟ್‌

ವಿಶ್ವವಿದ್ಯಾಲಯದಿಂದ ಈ ಬಾರಿ ಇಬ್ಬರು ಮಠಾಧೀಶರು ಹಾಗೂ ಒಬ್ಬ ಸಂಗೀತಗಾರರನ್ನು ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ.

ಬಾಗೇಪಲ್ಲಿ ನಿಡುಮಾಮಿಡಿ ಮಠದ ಮಾನವಧರ್ಮ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಬೀದರ್‌ನ ಸಿದ್ಧಾರೂಢ ಮಠದ ಚಿದಂಬರಂ ಆಶ್ರಮದ ಅಧ್ಯಕ್ಷ ಶಿವಕುಮಾರ ಸ್ವಾಮೀಜಿ ಹಾಗೂ ಬೀದರ್ ಖ್ಯಾತ ಸಂಗೀತಗಾರ ಪಂಡಿತ ವೀರಭದ್ರಪ್ಪ ಗಾದಗಿ ಅವರು ಗೌರವ ಡಾಕ್ಟರೇಟ್‌ಗೆ ಪಾತ್ರವಾಗಿದ್ದಾರೆ.

**

ಕಾಲೇಜುಗಳಿಗೂ ಆನ್‌ಲೈನ್‌ ಶುಲ್ಕ

‘ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲ ಕಾಲೇಜುಗಳೂ ಶುಲ್ಕವನ್ನು ಆನ್‌ಲೈನ್‌ ಮೂಲಕ ಭರಿಸುವ ಪದ್ಧತಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಶುಲ್ಕ ಬಂದ ನಂತರವೇ ಆಯಾ ಕಾಲೇಜಿಗೆ ಶೈಕ್ಷಣಿಕ ಅವಕಾಶಗಳು ಸಿಗುತ್ತವೆ. ಇಲ್ಲದಿದ್ದರೆ ಇಲ್ಲ’ ಎಂದು ಕುಲಪತಿ ಮಾಹಿತಿ ನೀಡಿದರು.

‘ಹಲವು ಕಾಲೇಜುಗಳು ಬಿ.ಇಡಿ, ಎಂಎಸ್‌ಡಬ್ಲ್ಯು, ಸ್ನಾತಕೋತ್ತರ ತರಗತಿಗಳ ಪ್ರವೇಶ ಶುಲ್ಕ ಹಾಗೂ ಪರೀಕ್ಷಾ ಶುಲ್ಕ ಸೇರಿ ಅಪಾರ ಹಣವನ್ನು ವಿಶ್ವವಿದ್ಯಾಲಯಕ್ಕೆ ಭರಿಸಬೇಕಿದೆ. ಯಾರೂ ಇದರ ಬಗ್ಗೆ ಎಚ್ಚರಿಕೆ ವಹಿಸುತ್ತಿಲ್ಲ. ಈ ಸಮಸ್ಯೆಯಿಂದ ಪಾರಾಗಲು ಆನ್‌ಲೈನ್‌ ಶುಲ್ಕ ಪದ್ಧತಿ ಜಾರಿ ಮಾಡಲಾಗುವುದು’ ಎಂದರು.

ಕಳೆದ ಮೂರು ದಿನಗಳಲ್ಲಿ ₹8 ಕೋಟಿಗೂ ಹೆಚ್ಚು ಶುಲ್ಕವನ್ನು ಖುದ್ದು ವಸೂಲಿ ಮಾಡಿದ್ದೇನೆ. ಕಠಿಣ ನಿರ್ಧಾರ ಕೈಗೊಳ್ಳದ ಹೊರತು ಕಾಲೇಜುಗಳು ಗಂಭೀರವಾಗಿ ಪರಿಗಣಿಸುವುದಿಲ್ಲ. ಈ ಶುಲ್ಕದಿಂದಲೇ ವಿಶ್ವವಿದ್ಯಾಲಯ ನಡೆಯಬೇಕಿದೆ ಎಂದೂ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !