ಗುರುವಾರ , ನವೆಂಬರ್ 21, 2019
20 °C

ಜಿಲ್ಲಾ ಕೇಂದ್ರಕ್ಕೆ ಒತ್ತಾಯಿಸಿ ಹಗರಿಬೊಮ್ಮನಹಳ್ಳಿ ಬಂದ್‌

Published:
Updated:

ಹೊಸಪೇಟೆ: ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲ್ಲೂಕಿನ ಹಗರಿಬೊಮ್ಮನಹಳ್ಳಿಯನ್ನು ಜಿಲ್ಲಾ ಕೇಂದ್ರ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಹೋರಾಟ ಸಮಿತಿ ಭಾನುವಾರ ಕರೆ ಕೊಟ್ಟಿದ್ದ ಪಟ್ಟಣ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ವರ್ತಕರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದವು. ಬೆಳಿಗ್ಗೆಯಿಂದಲೇ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಅಂಗಡಿಗಳು ಬಾಗಿಲು ತೆರೆಯಲಿಲ್ಲ. ಯಾವುದೇ ರೀತಿಯ ವ್ಯಾಪಾರ ವಹಿವಾಟು ನಡೆಯಲಿಲ್ಲ. ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ಮಧ್ಯಾಹ್ನ ಪ್ರಮುಖ ಮಾರ್ಗಗಳಲ್ಲಿ ರ್‍ಯಾಲಿ ನಡೆಸಿ, ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿದ ಶಾಸಕ ಭೀಮಾ ನಾಯ್ಕ, ’ಬಳ್ಳಾರಿ ಜಿಲ್ಲೆಯ ಎಲ್ಲಾ ಪಶ್ಚಿಮ ತಾಲ್ಲೂಕುಗಳಿಗೆ ಹಗರಿಬೊಮ್ಮನಹಳ್ಳಿ ಸಮಾನ ಅಂತರದಲ್ಲಿದೆ. ಜಿಲ್ಲಾ ಕೇಂದ್ರ ಮಾಡಿದರೆ ಎಲ್ಲರಿಗೂ ಅನುಕೂಲ. ಒಂದುವೇಳೆ ಹಗರಿಬೊಮ್ಮನಹಳ್ಳಿ ಜಿಲ್ಲಾ ಕೇಂದ್ರ ಮಾಡದಿದ್ದರೆ ಅಖಂಡ ಬಳ್ಳಾರಿ ಜಿಲ್ಲೆ ಹಾಗೆಯೇ ಇರಲಿ. ಈ ಕುರಿತು ಶೀಘ್ರದಲ್ಲೇ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಸಮಾಲೋಚನೆ ನಡೆಸುತ್ತೇನೆ‘ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)