ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರುಕುಳ: ಡೀಸೆಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ರೈತ ಕುಟುಂಬ

Last Updated 5 ಅಕ್ಟೋಬರ್ 2018, 9:03 IST
ಅಕ್ಷರ ಗಾತ್ರ

ಚಾಮರಾಜನಗರ: ಸಾಗುವಳಿ ಮಾಡುತ್ತಿರುವ ಜಮೀನನ್ನು ಬಿಟ್ಟುಬಿಡುವಂತೆ ಊರಿನಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ತಾಲ್ಲೂಕಿನ ಬೇಡರಪುರದ ರೈತ ಕುಟುಂಬವೊಂದು ಶುಕ್ರವಾರ ಜಿಲ್ಲಾಡಳಿತ ಭವನದ ಮುಂದೆ ಮೈಮೇಲೆ ಡೀಸೆಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದೆ.

ಸ್ಥಳದಲ್ಲಿದ್ದವರು ಈ ಯತ್ನವನ್ನು ವಿಫಲಗೊಳಿಸಿ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಸಂಭಾವ್ಯ ದುರ್ಘಟನೆಯನ್ನು ತಪ್ಪಿಸಿದ್ದಾರೆ.

ಬೇಡರಪುರದ ನಿವಾಸಿಗಳಾದ ಎಂ. ಕುಮಾರ್‌, ಅವರ ತಂದೆ ಮಲ್ಲಯ್ಯ ಹಾಗೂ ತಾಯಿ ದೊಡ್ಡಮ್ಮ ಆತ್ಮಹತ್ಯೆಗೆ ಯತ್ನಿಸಿದವರು. ಕುಮಾರ್‌ ಅವರು ಬೆಂಗಳೂರಿನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.

‘ಬೇಡರಪುರದಲ್ಲಿ ಒಂದು ಎಕರೆ ಸ್ವಂತ ಜಮೀನು ಮತ್ತು ಮೂರೂವರೆ ಎಕರೆ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದೇವೆ. ಆದರೆ, ಈಗ ಊರಿನಲ್ಲಿ ಶಿವಪ್ಪ, ಶ್ರೀನಿವಾಸ, ಚಿನ್ನಸ್ವಾಮಿ, ಮಹದೇವಸ್ವಾಮಿ ಅವರು ಜಮೀನು ಬಿಟ್ಟುಬಿಡುವಂತೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಕುಮಾರ್‌ ಮಾಧ್ಯಮಗಳಿಗೆ ತಿಳಿಸಿದರು.

‘ಊರಿನ ಲಿಂಗಾಯತ ಬೀದಿಯ ಶಿವಪ್ಪ ಅವರು ಚಾಮರಾಜನಗರದ ಸ್ಥಳೀಯ ಕಾಂಗ್ರೆಸ್‌ ಮುಖಂಡ ನಂಜುಂಡಸ್ವಾಮಿ ಅವರಿಗೆ ಜಮೀನು ಮಾರಾಟ ಮಾಡಿರುವುದಾಗಿ ಹೇಳುತ್ತಿದ್ದಾರೆ. ಹಾಗಾಗಿ ಜಮೀನನ್ನು ಬಿಟ್ಟು ಕೊಡಬೇಕು ಎಂದು ಅವರು ಒತ್ತಡ ಹಾಕುತ್ತಿದ್ದಾರೆ. ನನ್ನ ತಾಯಿಯ ವಿರುದ್ಧ ಕೊಲೆ ಪ್ರಕರಣವನ್ನೂ ದಾಖಲಿಸಿದ್ದಾರೆ’ ಎಂದು ಆರೋಪಿಸಿದರು.

‘ನಂಜುಂಡಸ್ವಾಮಿ ಅವರ ಅಕ್ಕನ ಮಕ್ಕಳಾದ ಶ್ರೀನಿವಾಸ, ಚಿನ್ನಸ್ವಾಮಿ ಮತ್ತು ಮಹದೇವಸ್ವಾಮಿ ಅವರು ಬೇಡರಪುರದಲ್ಲಿದ್ದು, ಅವರು ಕೂಡ ಸಾಗುವಳಿ ಜಮೀನು ಕೊಡುವಂತೆ ಒತ್ತಡ ಹಾಕುತ್ತಿದ್ದಾರೆ. ಗ್ರಾಮದ ಒಳಗೆ ಕಾಲಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಕಿರುಕುಳ ತಾಳಲಾರದೆ ಡೀಸೆಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಲು ಯತ್ನಿಸಿದೆವು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT