ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ತಾಲ್ಲೂಕು ಸಾಹಿತ್ಯ ಸಮ್ಮೇಳನ

ಸೀಗೆ ಗ್ರಾಮದ ಬೆಟ್ಟದ ಮಳೆಮಲ್ಲೇಶ್ವರ ದೇವಾಲಯದಲ್ಲಿ ಕಾರ್ಯಕ್ರಮ
Last Updated 10 ಡಿಸೆಂಬರ್ 2019, 14:28 IST
ಅಕ್ಷರ ಗಾತ್ರ

ಹಾಸನ: ತಾಲ್ಲೂಕಿನ ಸೀಗೆ ಗ್ರಾಮದ ಬೆಟ್ಟದ ಮಳೆಮಲ್ಲೇಶ್ವರ ದೇವಾಲಯ ಆವರಣದಲ್ಲಿ ಡಿ. 12 ರಂದು 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಹೇಳಿದರು.

ಸಾಹಿತಿ ತಿರುಪತಿಹಳ್ಳಿ ಶಿವಶಂಕರಪ್ಪ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅಂದು ಬೆಳಗ್ಗೆ 8 ಗಂಟೆಗೆ ಭುವನೇಶ್ವರಿ ತಾಯಿ ಭಾವಚಿತ್ರ ಮೆರವಣಿಗೆ ಸೀಗೆ ಗ್ರಾಮದ ಮಳೆಮಲ್ಲೇಶ್ವರ ದೇವಾಲಯದಿಂದ ಆರಂಭವಾಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಹಶೀಲ್ದಾರ್ ಮೇಘನಾ ರಾಷ್ಟ್ರ ಧ್ವಜ, ಪರಿಷತ್‌ ಹೋಬಳಿ ಕಾರ್ಯಾಧ್ಯಕ್ಷ ಯಲಗುಂದ ರಮೇಶ್ ಅವರು ಪರಿಷತ್ತಿನ ಧ್ವಜ, ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಒ. ಮಹಾಂತಪ್ಪ ನಾಡ ಧ್ವಜಾರೋಹಣ ಮಾಡಲಿದ್ದಾರೆ. ಬೆಳಗ್ಗೆ 8.30ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದ್ದು, ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಉದ್ಘಾಟನೆ ನೆರವೇರಿಸವರು. ಶಾಸಕ ಪ್ರೀತಂ ಜೆ. ಗೌಡ ಅಧ್ಯಕ್ಷತೆ ವಹಿಸಲಿದ್ದು, ಸಿಡ್ಲಕೋಣ ವಾಲ್ಮೀಕಿ ಸಂಜಯ್ ಕುಮಾರ ಸ್ವಾಮೀಜಿ ಭಾಗವಹಿಸುವರು ಎಂದು ತಿಳಿಸಿದರು.

ಮಧ್ಯಾಹ್ನ 2 ಗಂಟೆಗೆ ಪರಿಸರ ವಿಚಾರ ಗೋಷ್ಠಿ ನಡೆಯಲಿದೆ. ವೃಕ್ಷಾಧಾರಿತ ಕೃಷಿ ಮತ್ತು ರೈತರ ಆರ್ಥಿಕ ಸಬಲತೆ ವಿಚಾರ ಕುರಿತು ಕಾರೆಕೆರೆ ಕೃಷಿ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ. ಶಿವಮೂರ್ತಿ ಭೈರಪ್ಪನವರ್ ಹಾಗೂ ಗಿಡ ಮೂಲಿಕೆಗಳಿಂದ ಆರೋಗ್ಯ ಸಂವರ್ಧನೆ ವಿಚಾರವಾಗಿ ಎಸ್‍ಡಿಎಂ ಕಾಲೇಜಿನ ಆಯುರ್ವೇದ ವೈದ್ಯೆ ಡಾ. ಎ.ಜೆ. ಅಶ್ವಿನಿ ವಿಚಾರ ಮಂಡಿಸವರು. ಎಚ್.ಎಲ್. ನಾಗರಾಜ್ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಸಂಜೆ 4 ಗಂಟೆಗೆ ಪರಿಸರ ಕವಿಗೋಷ್ಠಿ ಜರುಗಲಿದೆ. ಸಾಹಿತಿ ಚಂದ್ರಕಾಂತ ಪಡೆಸೂರ, ಶಿಕ್ಷಣ ತಜ್ಞ ಓಬಳೇಶ ಘಟ್ಟಿ, ಲೇಖಕಿ ಸುಶೀಲಾ ಸೋಮಶೇಖರ್ ಹಾಗೂ ವಿಜಯ ಹಾಸನ್ ಪಾಲ್ಗೊಳ್ಳುತ್ತಾರೆ. ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಕೆ.ಎಸ್. ಲಿಂಗೇಶ್, ಸಂಸ್ಕೃತಿ ಚಿಂತಕ ಚಟ್ಟನಹಳ್ಳಿ ಮಹೇಶ್ ಸಮಾರೋಪ ಭಾಷಣ ಮಾಡಲಿದ್ದಾರೆ.

ಸಮ್ಮೇಳನಾಧ್ಯಕ್ಷ ತಿರುಪತಿಹಳ್ಳಿ ಶಿವಶಂಕರಪ್ಪ, ಕಲ್ಲಹಳ್ಳಿ ಹರೀಶ್ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT