ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪ್ಪೆಗುಂಡಿ ಜಾಗದಲ್ಲಿ ಸಂತ್ರಸ್ತರಿಗೆ ಶೆಡ್!

ಅಧಿಕಾರಿಗಳ ಅಮಾನವೀಯ ನಡೆಗೆ ಸಂತ್ರಸ್ತರ ಆಕ್ರೋಶ * ನಾಗನೂರು ನಿರಾಶ್ರಿತರ ಬದುಕು ಅತಂತ್ರ
Last Updated 24 ಆಗಸ್ಟ್ 2019, 19:36 IST
ಅಕ್ಷರ ಗಾತ್ರ

ಹಾವೇರಿ: ಅದು ಗ್ರಾಮದ ಕಸವನ್ನೆಲ್ಲ ತಂದು ಸುರಿಯುವ ಜಾಗ. ಬಯಲು ಬಹಿರ್ದೆಸೆಯ ಸ್ಥಳವೂ ಹೌದು. ಅಂತಹ ಹೊಲಸು ಜಾಗದಲ್ಲೇ ನೆರೆ ಸಂತ್ರಸ್ತರಿಗೆ ಶೆಡ್‌ ನಿರ್ಮಿಸಲಾಗುತ್ತಿದೆ. ಅಧಿಕಾರಿಗಳ ಈ ಅಮಾನವೀಯ ನಡೆಗೆ ಗ್ರಾಮಸ್ಥರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪರಿಹಾರ ಕೇಂದ್ರದಲ್ಲೂ ಇರಲಾಗದೆ, ಹೊಸ ಶೆಡ್‌ಗಳಿಗೂ ಹೋಗಲಾಗದೆ ನಿರಾಶ್ರಿತರು ಕಂಗಾಲಾಗಿದ್ದಾರೆ.

ಇದು ಹಾವೇರಿ ಜಿಲ್ಲೆ ನಾಗನೂರು ಗ್ರಾಮದ ಸಂತ್ರಸ್ತರ ವ್ಯಥೆ. ಇಲ್ಲಿ 37 ಕುಟುಂಬಗಳು ಮನೆ ಕಳೆದುಕೊಂಡು ಶಾಲಾ ಕೊಠಡಿಗಳಲ್ಲಿ ತಂಗಿವೆ. ಜಿಲ್ಲಾಡಳಿತವುಇವರನ್ನು ಸ್ಥಳಾಂತರಿಸುವ ಅವಸರದಲ್ಲಿ ಜೆಸಿಬಿ ಮೂಲಕ ತಿಪ್ಪೆ ಗುಂಡಿಗಳನ್ನು ಸರಿಸಿ, ಆ ಜಾಗದಲ್ಲೇ ತಾತ್ಕಾಲಿಕ ವಸತಿ ಕಲ್ಪಿಸಲು ಮುಂದಾಗಿದೆ. ಈಗಾಗಲೇ ಆರು ಶೆಡ್‌ಗಳನ್ನೂ ನಿರ್ಮಿಸಲಾಗಿದೆ. ಆದರೆ, ‘ಬೀದಿಯಲ್ಲೇ ಮಲಗಿದರೂ ಸರಿ. ನಾವು ಅಲ್ಲಿ ಹೋಗುವುದಿಲ್ಲ’ ಎಂದು ಸಂತ್ರಸ್ತರು ಪಟ್ಟು ಹಿಡಿದಿದ್ದಾರೆ.

ಮೂಗು ಮುಚ್ಚಿಕೊಂಡ ಅಧಿಕಾರಿ!: ಶೆಡ್ ನಿರ್ಮಿಸುತ್ತಿರುವ ಸ್ಥಳವನ್ನು ತಲುಪಲು ಕೆಸರು ಗದ್ದೆ ಹಾಗೂ ತಿಪ್ಪೆಗುಂಡಿಗಳನ್ನು ಹಾಯ್ದುಕೊಂಡೇ ಹೋಗಬೇಕು. ಗುರುವಾರ ಮೂಗು ಮುಚ್ಚಿಕೊಂಡೇ ಸ್ಥಳ ಪರಿಶೀಲಿಸಿದ್ದ ಅಧಿಕಾರಿಗಳು, ‘ಗ್ರಾಮದಲ್ಲಿ ಇರುವುದು ಇದೊಂದೇ ಖಾಲಿ ಜಾಗ. ಇಲ್ಲೇ ಶೆಡ್ ನಿರ್ಮಿಸಿಬಿಡಿ’ ಎಂದು ನಿರ್ಮೀತಿ ಕೇಂದ್ರದ ಸಿಬ್ಬಂದಿಗೆ ಸೂಚಿಸಿದರು. ಅದೇ ದಿನ ರಾತ್ರಿ ಆ ಕೇಂದ್ರದ ಉಸ್ತುವಾರಿ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ಶುರುವಾಗಿದೆ.

‘ಈ ಜಾಗದಲ್ಲಿ ವಾಸ ಮಾಡಲು ಸಾಧ್ಯಾನಾ? ಇಲ್ಲಿ 20 ಶೆಡ್‌ಗಳನ್ನು ಕಟ್ಟಲು ಹೇಳಿದ್ದಾರೆ. ನಾವೂ ಮೂಗಿಗೆ ಬಟ್ಟೆ ಕಟ್ಟಿಕೊಂಡೇ ಅವರ ಆಜ್ಞೆ ಪಾಲಿಸುತ್ತಿದ್ದೇವೆ. ಕನಿಷ್ಠ ಈ ತಿಪ್ಪೆಗಳನ್ನಾದರೂ ಬೇರೆಡೆ ಸ್ಥಳಾಂತರಿಸಿದರೆ ಅಷ್ಟೇ ಸಾಕು’ ಎಂದುಹೆಸರು ಹೇಳಲಿಚ್ಛಿಸದ ನಿರ್ಮಿತಿ ಕೇಂದ್ರದ ಸಿಬ್ಬಂದಿಯೇ ಬೇಸರ ವ್ಯಕ್ತಪಡಿಸಿದರು.

ಒಂದ್ ರಾತ್ರಿ ಕಳೀಲಿ ಸಾಕು: ‘ಆ ಜಾಗ ಹೊಲಸು ಮಾಡಿದ್ದು ನಾವೇ. ಮುಂದೊಂದ್ ದಿನ ಅಲ್ಲಿ ನಾವೇ ವಾಸ ಮಾಡೋ ಕಾಲ ಬರ್ಬೋದು ಅಂತ ಗೊತ್ತಿರ್ಲಿಲ್ರಿ. ‘ಸ್ವಲ್ಪ ದಿನ ಅಲ್ಲಿರಿ. ಆಮೇಲೆ ಮನೆ ಕಟ್ಕೊಡ್ತೀವಿ’ ಅಂತ ಅಧಿಕಾರಿಗಳು ಹೇಳ್ತಾರ. ಆದ್ರ, ಆ ಶೆಡ್‌ನಾಗ ಅವ್ರು ಒಂದ್ ರಾತ್ರಿ ಕಳ್ದು ತೋರಿಸ್ಲಿ. ಆಮ್ಯಾಲ ನಾವ್ ಎಷ್ಟ್‌ ವರ್ಷ ಬೇಕಾದ್ರೂ ಅಲ್ಲೇ ಇರ್ತೀವಿ. ಮನಿ, ಹೊಲ ಎಲ್ಲ ಕಳ್ಕೊಂಡು ಬೀದಿಗೆ ಬಿದ್ದೀವಿ. ಆದ್ರೂ, ಮನಷ್ಯತ್ವ ಬ್ಯಾಡ್ವೇನ್ರಿ ಇವ್ರಿಗೆ’ ಎನ್ನುತ್ತ ದುಃಖತಪ್ತರಾದರು ಸಂತ್ರಸ್ತೆ ಮಾರವ್ವ ಅಣ್ಣಿಗೇರಿ.

‘ಶೆಡ್‌ಗಳನ್ನು ತೆಗೆಸುತ್ತೇನೆ’
‘ತಹಶೀಲ್ದಾರ್ ನೇತೃತ್ವದಲ್ಲಿ ಸ್ಥಳಪರಿಶೀಲನೆ ನಡೆದಿತ್ತು. ಶೆಡ್ ನಿರ್ಮಿಸಬಹುದು ಎಂದು ಅವರೇ ಹೇಳಿದ್ದರಿಂದ ಒಪ್ಪಿಗೆ ಕೊಟ್ಟಿದ್ದೆ. ಆ ಜಾಗ ಸರಿಯಿಲ್ಲ ಎಂಬುದು ಅರಿವಿಗೆ ಬಂದಿದೆ. ಸಂತ್ರಸ್ತರಿಗೆ, ಕುಸಿದು ಬಿದ್ದಿರುವ ಅವರ ಮನೆಗಳ ಬಳಿಯೇ ಶೆಡ್ ಹಾಕಿಕೊಡಲು ತೀರ್ಮಾನಿಸಿದ್ದೇವೆ. ಈಗ ಹಾಕಿರುವ ಶೆಡ್‌ಗಳನ್ನು ತೆರವುಗೊಳಿಸಲು ಸೂಚಿಸುತ್ತೇನೆ’ ಎಂದು ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕರಾವಳಿ ಭಾಗದಲ್ಲಿ ಭಾರಿ ಮಳೆ ಸಾಧ್ಯತೆ
ಬೆಂಗಳೂರು: ‘ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಹೆಚ್ಚು ಮಳೆಯಾಗಲಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆಗಸ್ಟ್‌ 25 ಮತ್ತು 26ರಂದು ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್‌.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕರಾವಳಿಯಲ್ಲಿ ಶನಿವಾರ ಅಧಿಕ ಮಳೆಯಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಇನ್ನೆರಡು ದಿನ ಮಳೆ ಹೆಚ್ಚಾಗಲಿದೆ. ಉಳಿದಂತೆ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ’ ಎಂದವರು ತಿಳಿಸಿದರು. ಕರಾವಳಿ ಭಾಗದಲ್ಲಿ ಪಶ್ಚಿಮ ದಿಕ್ಕಿನ ಕಡೆಗೆ ಗಂಟೆಗೆ 45ರಿಂದ 55 ಕಿಲೊ ಮೀಟರ್‌ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಆಗಸ್ಟ್‌ 28ರವರೆಗೆ ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಸಿದೆ. ಶನಿವಾರ ಉಡುಪಿ ಜಿಲ್ಲೆಯ ಕೋಟಾದಲ್ಲಿ 12 ಸೆಂ.ಮೀ.ಮಳೆಯಾಗಿದೆ. ಪಣಂಬೂರು 9, ಮಂಗಳೂರು, ಹೊನ್ನಾವರ 7, ಕಾರ್ಕಳ, ಭಟ್ಕಳ, ಕೊಲ್ಲೂರಿನಲ್ಲಿ ತಲಾ 4 ಸೆಂ.ಮೀ.ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT