ಭಾನುವಾರ, ಆಗಸ್ಟ್ 1, 2021
28 °C

ಶಾಸಕ ಎಸ್.ವಿ.ರಾಮಚಂದ್ರ ವಿರುದ್ಧದ ಚುನಾವಣಾ ತಕರಾರು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ‘ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಜಗಳೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಎಸ್‌.ವಿ.ರಾಮಚಂದ್ರ ಅವರ ಸದಸ್ಯತ್ವವನ್ನು ಅಸಿಂಧುಗೊಳಿಸಬೇಕು’ ಎಂದು ಕೋರಿದ್ದ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಕುರಿತಂತೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪರಾಜಿತ ಅಭ್ಯರ್ಥಿ ಎಚ್‌.ಪಿ.ರಾಜೇಶ್‌ ಸಲ್ಲಿಸಿದ್ದ ಅರ್ಜಿ ಮೇಲಿನ, ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪ್ರಕಟಿಸಿದೆ.

ರಾಮಚಂದ್ರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಜಿ.ಆರ್. ಗುರುಮಠ ಅವರು, 'ಈಗಾಗಲೇ ದಾವಣಗೆರೆ ಜಿಲ್ಲಾ  ಜಾತಿ ಪ್ರಮಾಣಪತ್ರದ ಸಿಂಧುತ್ವ ಪರಿಶೀಲನಾ ಸಮಿತಿಯು, ರಾಮಚಂದ್ರ ಅವರು ವಾಲ್ಮೀಕಿ ಜನಾಂಗಕ್ಕೆ ಸೇರಿದವರಾಗಿದ್ದಾರೆ ಎಂದು ಪ್ರಮಾಣ ಪತ್ರ ನೀಡಿದೆ. ಆದ್ದರಿಂದ, ಈ ಅರ್ಜಿಯನ್ನು ವಿಚಾರಣೆ ನಡೆಸುವ ಅವಶ್ಯಕತೆ ಇಲ್ಲ' ಎಂದು ಕೋರಿದ್ದರು.

ಮಧ್ಯಂತರ ಅರ್ಜಿಯ ಈ ವಾದಾಂಶವನ್ನು ಮಾನ್ಯ ಮಾಡಿರುವ ನ್ಯಾಯಪೀಠ, ರಾಜೇಶ್ ಅವರ ಚುನಾವಣಾ ತಕರಾರು ಅರ್ಜಿಯನ್ನು ವಜಾಗೊಳಿಸಿದೆ.

‘ಜಗಳೂರು ಕ್ಷೇತ್ರವು ಪರಿಶಿಷ್ಟ (ಎಸ್‌.ಟಿ) ವರ್ಗಕ್ಕೆ ಮೀಸಲಾಗಿದೆ. ರಾಮಚಂದ್ರ ಅವರ ತಂದೆ ದಿವಂಗತ ವೀರಪ್ಪ ಅವರು ಮರಾಠ ಸಮುದಾಯಕ್ಕೆ ಸೇರಿದವರು. ವೀರಪ್ಪನವರ ಎರಡನೇ ಪತ್ನಿ ಕೆಂಚಮ್ಮ ಉರುಫ್‌ ಗಂಗಮ್ಮ ವಾಲ್ಮೀಕಿ ಸಮುದಾಯದವರು. ಕೆಂಚಮ್ಮನವರ ಪುತ್ರರಾದ ರಾಮಚಂದ್ರ ವಾಲ್ಮೀಕಿ ಎಂದು ಹೇಳಿಕೊಳ್ಳುತ್ತಾರೆ. ಅವರು ವಾಲ್ಮೀಕಿ ಜನಾಂಗಕ್ಕೆ ಸೇರಿದವರಲ್ಲ’ ಎಂದು ಅರ್ಜಿದಾರರು ತಕರಾರು ಸಲ್ಲಿಸಿದ್ದರು.

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಸ್.ವಿ.ರಾಮಚಂದ್ರ ಅವರು ಜಗಳೂರು ಕ್ಷೇತ್ರದಿಂದ (ಪರಿಶಿಷ್ಟ ವರ್ಗ-ಎಸ್ಟಿ) ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು