ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಟು ಮೋದಿಗೆ, ಕೆಲಸಕ್ಕೆ ನಾವಾ? : ಎಚ್‌.ಡಿ. ಕುಮಾರಸ್ವಾಮಿ ಕಡುಕೋಪ

ಬಸ್‌ ತಡೆದ ಪ್ರತಿಭಟನಾಕಾರರ ವಿರುದ್ಧ ರೇಗಾಡಿದ ಸಿಎಂ
Last Updated 26 ಜೂನ್ 2019, 20:06 IST
ಅಕ್ಷರ ಗಾತ್ರ

ಬೆಂಗಳೂರು/ರಾಯಚೂರು: ‘ಚುನಾವಣೆಯಲ್ಲಿ ಮೋದಿಗೆ ವೋಟು ಹಾಕ್ತೀರಿ, ಸಮಸ್ಯೆ ಪರಿಹಾರಕ್ಕೆ ನಮ್ಮ ಹತ್ರ ಬರುತ್ತೀರಾ. ಈಗ ಬಸ್‌ಗೆ ದಾರಿ ಬಿಡದಿದ್ದರೆ ಲಾಠಿ ಚಾರ್ಜ್‌ ಮಾಡಿಸುತ್ತೇನೆ’ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕಾರ್ಮಿಕರನ್ನು ಏರುಧ್ವನಿಯಲ್ಲಿ ಗದರಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಮುಖ್ಯಮಂತ್ರಿ ಮಾತಿಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ‘ಸಹನೆ ಕಳೆದುಕೊಂಡಿರುವಕುಮಾರಸ್ವಾಮಿ ಅವರು ಜನರನ್ನು ಹೀಯಾಳಿಸುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ಗ್ರಾಮ ವಾಸ್ತವ್ಯದ ವೇಳೆ ಪ್ರತಿಭಟನೆ ನಡೆಸುತ್ತೇವೆ’ ಎಚ್ಚರಿಕೆ ನೀಡಿದ್ದಾರೆ.

ಮಾನ್ವಿ ತಾಲ್ಲೂಕಿನ ಕರೇಗುಡ್ಡದಲ್ಲಿಬುಧವಾರ ಹಮ್ಮಿಕೊಂಡಿದ್ದ ಗ್ರಾಮವಾಸ್ತವ್ಯಕ್ಕಾಗಿ ಕುಮಾರಸ್ವಾಮಿ ಅವರು ಸಚಿವರು ಮತ್ತು ಅಧಿಕಾರಿಗಳೊಂದಿಗೆ ಬಸ್‌ನಲ್ಲಿ ಹೊರಟಿದ್ದರು. ರಾಯಚೂರಿನ ಪ್ರವಾಸಿ ಮಂದಿರದಿಂದ ಮುಖ್ಯರಸ್ತೆಗೆ ಬಸ್‌ ಬರುತ್ತಿದ್ದಂತೆ, ಯರಮರಸ್‌ ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ವೈಟಿಪಿಎಸ್‌) ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಿಢೀರನೇ ಅಡ್ಡಗಟ್ಟಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆಗೆ ಇಳಿದರು.

ಸುಮಾರು 15 ನಿಮಿಷ ಬಸ್‌ ಅಡ್ಡಗಟ್ಟಿದ್ದು ಮುಖ್ಯಮಂತ್ರಿ ಅವರನ್ನು ಸಿಟ್ಟಿಗೆಬ್ಬಿಸಿತು. ಬಸ್ಸಿನಲ್ಲಿ ಪ್ರಯಾಣಿಕರು ಇಳಿಯುವ ಜಾಗಕ್ಕೆ ಬಂದು ನಿಂತ ಅವರು ಪ್ರತಿಭಟನಾಕಾರರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ‘ಒಂದು ಪ್ರತಿಭಟನೆ ನಿಯಂತ್ರಿಸುವುದಕ್ಕೆ ನಿಮಗೆ ಸಾಧ್ಯವಾಗುವುದಿಲ್ಲವೇನ್ರಿ. ಇಷ್ಟೊಂದು ಅಧಿಕಾರಿಗಳನ್ನು ಇಟ್ಟುಕೊಂಡು ಏನು ಮಾಡ್ತಿದ್ದೀರಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಅವರ ಮೇಲೂ ಕುಮಾರಸ್ವಾಮಿ ಹರಿಹಾಯ್ದರು.

ಇದರಿಂದ ಮುಜುಗರಕ್ಕೊಳಗಾದ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಸೇರಿ ಹಿರಿಯ ಅಧಿಕಾರಿಗಳು ಬಸ್‌ನಿಂದ ಕೆಳಗೆ ಬಂದು ಕಾರ್ಮಿಕರನ್ನು ಪಕ್ಕಕ್ಕೆ ಸರಿಸಲು ಹರಸಾಹಸ ಪಟ್ಟರು. ಬಸ್ಸನ್ನು ಅಲ್ಲಿಂದ ಕದಲಿಸಲು ಸಾಧ್ಯವಾಗದೇ ಇದ್ದಾಗ, ಮುಖ್ಯಮಂತ್ರಿ ಮತ್ತೊಮ್ಮೆ ತಾಳ್ಮೆ ಕಳೆದುಕೊಂಡರು.

ಮೋದಿ ಪರ ಘೋಷಣೆ: ಮೂರು ತಾಸುಗಳ ಪ್ರಯಾಣದ ಬಳಿಕ ಮುಖ್ಯಮಂತ್ರಿ ಕರೇಗುಡ್ಡ ಗ್ರಾಮದ ಕ್ರಾಸ್‌ ತಲುಪುತ್ತಿದ್ದಂತೆ ಅಲ್ಲಿಯೂ ರಸ್ತೆಯ ಪಕ್ಕದಲ್ಲಿ ಬಿಜೆಪಿ ಧ್ವಜಗಳನ್ನು ಹಿಡಿದು ನಿಂತಿದ್ದ ಗುಂಪು ‘ಮೋದಿ.. ಮೋದಿ’ ಎಂದು ಕೂಗು ಹಾಕಿತು.

ಇದರಿಂದ ಮತ್ತೆ ಕುಪಿತಗೊಂಡ ಅವರು, ‘ಮೋದಿ.. ಮೋದಿ.. ಎಂದು ನೀವು ಕೂಗಿದರೆ ದೆಹಲಿಗೆ ಕೇಳಿಸುವುದಿಲ್ಲ. ಚುನಾವಣೆಯಲ್ಲಿ ಮತ ಹಾಕುವಾಗ ನಾವು ಕಾಣುವುದಿಲ್ಲ. ಆದರೆ, ಮನವಿ ಸಲ್ಲಿಸುವುದಕ್ಕೆ, ಕೆಲಸ ಮಾಡಿಕೊಡುವುದಕ್ಕೆ ನಾವು ಬೇಕಾ’ ಎಂದು ಮತ್ತೆ ಕಿಡಿಕಾರಿದರು.

ಸಭೆಯಲ್ಲಿ ಮತ್ತೆ ವಿಷಯ ‍ಪ್ರಸ್ತಾಪಿಸಿದ ಅವರು, ‘ಸಾಮಾನ್ಯ ಜನರ ಅಹವಾಲು ಆಲಿಸುವ ವಿಷಯದಲ್ಲಿ ಎಂದಿಗೂ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಕಣ್ಣೀರು ಹಾಕುವವರ ಸಂಕಷ್ಟ ಪರಿಹಾರ ಮಾಡುವ ಹೃದಯವಂತಿಕೆ ನನ್ನದು. ಆದರೆ, ರಾಯಚೂರಿನಲ್ಲಿ ನಡೆದ ಎರಡು ಬೆಳವಣಿಗೆಗಳಿಂದ ಕೋಪ ಮಾಡಿಕೊಳ್ಳುವಂತಾಯಿತು’ ಎಂದು ಸ್ಪಷ್ಟನೆ ನೀಡಿದರು.

ಸೊಕ್ಕಿನ ಮಾತು– ಬಿಎಸ್‌ವೈ ಕಿಡಿ

‘ಮುಖ್ಯಮಂತ್ರಿ ಸೊಕ್ಕಿನ ಮಾತು ಆಡಿದ್ದಾರೆ. ಅವರಿಗೆ ಮಾನ, ಮರ್ಯಾದೆ ಇದ್ದರೆ ಲೋಕಸಭಾ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದಾಗಲೇ ರಾಜೀನಾಮೆ ನೀಡಬೇಕಿತ್ತು. ಈಗ ಅಧಿಕಾರ ಕಳೆದುಕೊಳ್ಳುವ ಭಯದಿಂದ ತಾಳ್ಮೆ ಕಳೆದುಕೊಂಡು ಎಲ್ಲರ ಮೇಲೂ ರೇಗಾಡುತ್ತಿದ್ದಾರೆ’ ಎಂದು ಬಿ.ಎಸ್‌.ಯಡಿಯೂರಪ್ಪ ಕಿಡಿ ಕಾರಿದ್ದಾರೆ.

ಬಿಜೆಪಿ ಷಡ್ಯಂತ್ರ: ದೇವೇಗೌಡ

‘ಗ್ರಾಮವಾಸ್ತವ್ಯ ನೋಡಿ ಸಹಿಸಿಕೊಳ್ಳದೇ ಅವರ ಕೆಲಸಕ್ಕೆ ಅಡಚಣೆ ಮಾಡಲಾಗುತ್ತಿದೆ. ಇದರಲ್ಲಿ ಬಿಜೆಪಿ ಷಡ್ಯಂತ್ರವಿದೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕಿಡಿ ಕಾರಿದ್ದಾರೆ. ‘ಬಿಜೆಪಿ ನಾಯಕರು ಗ್ರಾಮ ವಾಸ್ತವ್ಯವನ್ನು ವಿರೋಧಿಸುತ್ತಿದ್ದಾರೆ. ಗ್ರಾಮೀಣ ಜನರ ಸಮಸ್ಯೆ ಬಗೆಹರಿಸಲು ಅವರ ಬಳಿ ಕುಮಾರಸ್ವಾಮಿ ತೆರಳುವಾಗ, ರಸ್ತೆಯಲ್ಲಿ ತಡೆದರೆ ಏನು ಮಾಡಲು ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

**

ಮುಖ್ಯಮಂತ್ರಿ ಆಗಿರುವುದರಿಂದ ಜನ ಅವರ ಬಳಿ ಹೋಗುತ್ತಾರೆ. ಇಲ್ಲದಿದ್ದರೆ ಬೀದಿ ನಾಯಿಯೂ ಮೂಸುತ್ತಿರಲಿಲ್ಲ
- ಕೆ.ಎಸ್‌.ಈಶ್ವರಪ್ಪ, ಶಾಸಕ, ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT