ಮಂಗಳವಾರ, ಏಪ್ರಿಲ್ 20, 2021
31 °C

ಹೋರಾಟದ ಹಿನ್ನೆಲೆಯನ್ನೇ ಮರೆತ ಬಿಎಸ್‌ವೈ: ಕುಮಾರಸ್ವಾಮಿ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಹೋರಾಟಗಾರರನ್ನು ಸರ್ಕಾರವೇ ಮುಂದೆ ನಿಂತು ಕೊಂದಿದೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ, ಬಿ.ಎಸ್‌ ಯಡಿಯೂರಪ್ಪ ಅವರ ಹೋರಾಟದ ಹಿನ್ನೆಲೆಯನ್ನೇ ಕೆಣಕಿದ್ದಾರೆ. ಬಿಎಸ್‌ವೈ ಅವರ ಪ್ರತಿಭಟನೆಗಳನ್ನು ಹಿಂದಿನ ಸರ್ಕಾರಗಳು ಬಂದೂಕು, ಗುಂಡುಗಳಿಂದ ಹತ್ತಿಕ್ಕಿದ್ದವೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಕಾಯ್ದೆ ವಿರುದ್ಧದ ಹೋರಾಟದ ವೇಳೆ ಮಂಗಳೂರಿನಲ್ಲಿ ಗುರುವಾರ ಇಬ್ಬರು ಪ್ರತಿಭಟನಾಕಾರರು ಹತರಾದ ಹಿನ್ನೆಲೆಯಲ್ಲಿ ಮತ್ತು ಹೋರಾಟಗಾರರನ್ನು ಹಿಮ್ಮೆಟ್ಟಿಸಲು ಬಂದೂಕು ಪ್ರಯೋಗ ಮಾಡಿದ ಪೊಲೀಸ್‌ ಅಧಿಕಾರಿಯೊಬ್ಬರ ವಿಡಿಯೋವನ್ನು ಸಾಮಾಜಿಕ ತಾಣ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಬಿಎಸ್‌. ಯಡಿಯೂರಪ್ಪ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ.

ಎಚ್‌ಡಿಕೆ ಟ್ವೀಟ್‌ನಲ್ಲಿ ಏನಿದೆ?

ಸರ್ಕಾರವೇ ಮುಂದೆ ನಿಂತು ಪ್ರತಿಭಟನಾಕಾರರನ್ನು ಕೊಂದಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಇದರ ಹೊಣೆಯನ್ನು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಹೊರಬೇಕು.

ಹೋರಾಟಗಾರರನ್ನು ಕಂಡೊಡನೇ ಗುಂಡಿಕ್ಕಲು ಆದೇಶಿಸುವ ಬಿ.ಎಸ್. ಯಡಿಯೂರಪ್ಪ ತಾವೂ ಹೋರಾಟಗಳಿಂದಲೇ ರಾಜಕೀಯದಲ್ಲಿ ಮೇಲೇರಿದವರು ಎಂಬುದನ್ನು 'ಅನರ್ಹ ಅಧಿಕಾರ'ದ ಮದ ಮರೆಸಿದಂತಿದೆ. ಅವರ ಹೋರಾಟಗಳನ್ನು ಹಿಂದಿನ ಸರ್ಕಾರಗಳು ಬಂದೂಕು, ಗುಂಡುಗಳಿಂದ ಹತ್ತಿಕ್ಕಿದ್ದವೇ? ಹೀಗಿದ್ದೂ, ಹೋರಾಟಗಳ ಮೇಲೆ ಬಿಎಸ್ವೈ ಗೆ ಏಕೆ ಇಷ್ಟು ದ್ವೇಷ?

ಹಿಂದಿನ ಸರ್ಕಾರದಲ್ಲಿ ರೈತರನ್ನು ಕೊಂದ, ಈ ಬಾರಿ ಅಮಾಯಕ ಹೋರಾಟಗಾರರನ್ನು ಕೊಂದ ಬಿಎಸ್ವೈ ನೈತಿಕ ಹೊಣೆಗಾರಿಕೆ ಅರಿತು ಈ ಕೂಡಲೇ ಮೃತ ಹೋರಾಟಗಾರ ಕುಟುಂಬಗಳ ಕ್ಷಮೆ ಕೋರಬೇಕು.

ಅಧಿಕಾರದ ಅಮಲಿನಲ್ಲಿರುವವರ ದಾಹ, ಕ್ರೌರ್ಯಕ್ಕೆ ಪ್ರಜೆಗಳ ಹೆಣಗಳು ತೋರಣದಂತೆ ಕಟ್ಟಲ್ಪಡುತ್ತಿರುತ್ತವೆ. ಅಧಿಕಾರದ ಹಪಾಹಪಿಗಳು ಸಾವಿನ ದಲ್ಲಾಳಿಗಳಾಗುತ್ತಾರೆ. ಇಂಥವರೇ ತುಂಬಿರುವ ಜನ ವಿರೋಧಿ ಪ್ರಭುತ್ವ ಅಂತ್ಯ ಕಾಲ ಸಮೀಪಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು