ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಲ್‌‌ಡೌನ್ ಕುರಿತು ಸರ್ಕಾರ ಕೂಡಲೆ ನಿರ್ಧಾರ ಪ್ರಕಟಿಸಬೇಕು: ಎಚ್.ಡಿ.ಕುಮಾರಸ್ವಾಮಿ

Last Updated 11 ಏಪ್ರಿಲ್ 2020, 8:18 IST
ಅಕ್ಷರ ಗಾತ್ರ

ಬೆಂಗಳೂರು: ಸೀಲ್‌ಡೌನ್‌‌ಗೆ ಸಂಬಂಧಿಸಿದಂತೆ ಬಗೆಬಗೆಯ ಸುದ್ದಿಗಳು ಹರಿದಾಡುತ್ತಿವೆ. ಜನರಲ್ಲಿ ಭೀತಿ ಆವರಿಸಿದ್ದು, ಸಮೂಹ ಸನ್ನಿಗೆ ಸಿಲುಕಿದ್ದಾರೆ.ಇದು ಮತ್ತೊಂದು ಸಮಸ್ಯೆ ಸೃಷ್ಟಿಸುವ ಮುನ್ನ ಸರ್ಕಾರ ಅನುಮಾನಗಳನ್ನು ನೀಗಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಕುಮಾರಸ್ವಾಮಿ,ಆಹಾರ, ಔಷಧ, ಅಗತ್ಯ ವಸ್ತುಗಳ ಲಭ್ಯತೆ ಬಗ್ಗೆ ಜನರಲ್ಲಿ ಅನುಮಾನಗಳು ಮೂಡಿದ್ದು, ಅವುಗಳ ದಾಸ್ತಾನಿಗೆ ಮುಂದಾಗಿದ್ದಾರೆ.ಅಲ್ಲದೆ, ಸೀಲ್‌ಡೌನ್ ಭೀತಿ ಜನರನ್ನು ಸಮೂಹಸನ್ನಿಗೆ ದೂಡಿರುವಾಗಲೇ, ದಿನಸಿ ಅಂಗಡಿ, ಔಷಧಾಲಯಗಳು ತೆರೆಯಬೇಕೋ ಬೇಡವೋ ಎಂಬ ಅನುಮಾನ ಮಾರಾಟಗಾರರಲ್ಲಿ ಮೂಡಿದೆ. ಹಾಗೇನಾದರೂ ದಿನಸಿ ಅಂಗಡಿಗಳು, ಔಷಧಾಲಯಗಳು ಭೀತಿಯಿಂದ ಮುಚ್ಚಿದರೆ, ಜನರಿಗೆ ಆಹಾರ, ಔಷಧಗಳ ಲಭ್ಯತೆಯಲ್ಲಿ ಸಮಸ್ಯೆ ಸೃಷ್ಟಿಯಾಗಲಿದೆ. ಈ ಬಗ್ಗೆ ಸರ್ಕಾರ ಎಚ್ಚರ ವಹಿಸುವ ತುರ್ತು ಎದುರಾಗಿದೆ.

ಸೀಲ್‌ಡೌನ್ಮಾಡಲು ಸರ್ಕಾರ ನಿರ್ಧರಿಸಿದೆಯೇ? ಮಾಡುವುದಿದ್ದರೆ ಯಾವ್ಯಾವ ಜಿಲ್ಲೆಗಳಿಗೆ ಇದು ಅನ್ವಯ? ಸೀಲ್‌ಡೌನ್ ಸಮಯದಲ್ಲಿ ಏನೆಲ್ಲ ಲಭ್ಯ, ಏನು ಲಭ್ಯವಿರುವುದಿಲ್ಲ ಎಂಬುದರ ಬಗ್ಗೆ ಸರ್ಕಾರ ಕೂಡಲೇ ಅಧಿಕೃತವಾಗಿ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಗಾಳಿ ಸುದ್ದಿಗಳು, ಸುಳ್ಳು ಮಾಹಿತಿಗಳು ಜನರ ದಿಕ್ಕು ತಪ್ಪಿಸಲಿವೆ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಅಲ್ಲದೆ,ಲಾಕ್ ಡೌನ್ ಮೂರನೇ ವಾರದ ಮುಕ್ತಾಯಕ್ಕೆ ಬರುತ್ತಿದ್ದರೂ ಬೆಳೆದ ಬೆಳೆ ಮಾರಾಟವಾಗದೆ ಜಮೀನಿನಲ್ಲೇ ಕೊಳೆಯುತ್ತಿರುವುದನ್ನು ಕಂಡು ರೈತರು 'ಹೆತ್ತ ಮಕ್ಕಳು' ಅಕಾಲ ಮರಣಕ್ಕೀಡಾದಂತೆ ಸಂಕಟ ಪಡುತ್ತಿದ್ದಾರೆ.
ರೈತರ ಸಂಕಷ್ಟ ಪರಿಹರಿಸಲು ಪ್ರತಿ ಗ್ರಾಮಗಳಲ್ಲಿ ಪ್ರತಿಯೊಬ್ಬ ರೈತರು ಬೆಳೆದ ಬೆಳೆಗಳನ್ನು ಸಮೀಕ್ಷೆ ಮಾಡಿ ಮೂರು ದಿನದಲ್ಲಿ ಪರಿಹಾರ ನೀಡಲಿ ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ಕೃಷಿ ಉತ್ಪನ್ನಗಳ ಸುಗಮ ಮಾರಾಟ, ಸಾಗಾಣಿಕೆ ಮತ್ತು ಸೂಕ್ತ ಮಾರುಕಟ್ಟೆ ಒದಗಿಸುವಲ್ಲಿಇನ್ನೂ ಕ್ರಿಯಾಶೀಲವಾಗಿಲ್ಲ. ಬರೀ ಚಿಂತನ-ಮಂಥನದಲ್ಲೇ ಕಾಲ ಕಳೆಯುವುದನ್ನು ಬಿಟ್ಟು ತಕ್ಷಣವೇ ರೈತರ ನೆರವಿಗೆ ಧಾವಿಸಬೇಕು.
ರಾಜ್ಯಾದ್ಯಂತ ದಾಳಿಂಬೆ, ದ್ರಾಕ್ಷಿ, ಬಾಳೆ, ಕಲ್ಲಂಗಡಿ, ಕರ್ಬುಜ, ಮಾವು ಸೇರಿದಂತೆ ಹೂವು ತರಕಾರಿ ಉತ್ಪನ್ನಗಳನ್ನು ಬೆಳೆದ ರೈತರು ಸಾಗಾಣೆ, ಮಾರುಕಟ್ಟೆ ಸಿಗದೆ ಅಲ್ಲೇ ಕೊಳೆಸುವ, ಮಾರುಕಟ್ಟೆಯಲ್ಲಿ ಸುರಿದು ಹೋಗುತ್ತಿರುವ ಪ್ರಸಂಗಗಳು ದಿನನಿತ್ಯ ಹೆಚ್ಚಾಗುತ್ತಿವೆ. ಸರ್ಕಾರ 'ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ' ಎನ್ನುವ ಮೂಗಿಗೆ ತುಪ್ಪ ಸವರುವ ಮಾತನಾಡುತ್ತಿದೆಯೇ ಹೊರತು ಕಂಗಾಲಾದ ರೈತರಿಗೆ ಆತ್ಮಸ್ಥೈರ್ಯ ತುಂಬುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂಬುದಕ್ಕೆ ರಾಜ್ಯದಾದ್ಯಂತ ರೈತರು ಪರಿತಪಿಸುತ್ತಿರುವ ನೂರಾರು ಉದಾಹರಣೆಗಳು ಪುಷ್ಟಿ ನೀಡುತ್ತಿವೆ ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೈಗೆ ಬಂದ ಬೆಳೆಯು ಮಾರಾಟವಾಗದೆ ಮುಂದೇನು? ಎಂದು ಚಿಂತಾಕ್ರಾಂತರಾಗಿರುವ ರೈತರಿಗೆ ಸಹಾಯ ಹಸ್ತಚಾಚಲು ಆಮೆವೇಗದಲ್ಲಿರುವ ಸರ್ಕಾರ ಮುಂಗಾರು ಬೆಳೆಗೆ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕ್ರಿಮಿನಾಶಕ ಕೊರತೆ ಉಂಟಾಗದಂತೆ ಎಚ್ಚರ ವಹಿಸುತ್ತಿರುವುದಾಗಿ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ.ರೈತರ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಿ ಮಾರಾಟ ಮಾಡಲು ತಡಮಾಡದೇ ಕ್ರಮಕೈಗೊಳ್ಳಬೇಕು. ಲಾಕ್ ಡೌನ್ ಮುಂದುವರಿಕೆ ನಿಚ್ಚಳವಾಗಿರುವ ಹಿನ್ನೆಲೆಯಲ್ಲಿ ತುರ್ತು ಕಾರ್ಯೋನ್ಮುಖವಾಗಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT