ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಜನರಿಂದ ದೂರ ಉಳಿದರು, ಈಗ ಜನರಿಗಾಗಿ ಹೋರಾಟ‘

ಶಾಸಕ ಆನಂದ್‌ ಸಿಂಗ್‌ ನಡೆ ಕುರಿತು ಕ್ಷೇತ್ರದಾದ್ಯಂತ ಗುಸುಗುಸು ಚರ್ಚೆ
Last Updated 17 ಜೂನ್ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಶಾಸಕರಾಗಿ ಆಯ್ಕೆಯಾದ ನಂತರ ಜನರಿಂದ ದೂರವೇ ಉಳಿದಿದ್ದ ಶಾಸಕ ಆನಂದ್‌ ಸಿಂಗ್‌ ಇದೀಗ ಜಿಂದಾಲ್‌ಗೆ ಭೂ ಪರಭಾರೆ ಮಾಡುತ್ತಿರುವುದನ್ನು ವಿರೋಧಿಸಿ ಜನರ ಪರ ಹೋರಾಟ ನಡೆಸುವ ಮಾತುಗಳನ್ನು ಆಡುತ್ತಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ನಿಜವಾಗಿಯೂ ಅವರು ರೈತರ ಬಗ್ಗೆ ಕಾಳಜಿ ಇಟ್ಟುಕೊಂಡು ಹೋರಾಟ ನಡೆಸುವ ಮಾತುಗಳನ್ನು ಆಡುತ್ತಿದ್ದಾರೋ ಅಥವಾ ಇದರ ಹಿಂದೆ ಯಾವ ರಾಜಕೀಯ ಅಡಗಿದೆಯೋ ಎಂದು ಕ್ಷೇತ್ರದಾದ್ಯಂತ ಗುಸುಗುಸು ಚರ್ಚೆಯಾಗುತ್ತಿದೆ.

ಶಾಸಕರಾಗಿ ಆಯ್ಕೆಯಾದ ನಂತರ ಒಂದು ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ನಡೆದ ಒಂದೇ ಒಂದು ಸಾರ್ವಜನಿಕ ಸಭೆ ಸಮಾರಂಭ, ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದ ಸಭೆಗಳಲ್ಲಿ ಭಾಗವಹಿಸಿಲ್ಲ. ಜನವರಿಯಲ್ಲಿ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಅವರೊಂದಿಗೆ ನಡೆದ ಹೊಡೆದಾಟ ಪ್ರಕರಣದ ಬಳಿಕವಂತೂ ಕ್ಷೇತ್ರದಿಂದ ದೂರ ಉಳಿದಿದ್ದರು. ಬಳಿಕ ಆಗೊಮ್ಮೆ ಈಗೊಮ್ಮೆ ಕ್ಷೇತ್ರಕ್ಕೆ ಬಂದರೂ ಜನರನ್ನು ಭೇಟಿ ಮಾಡಿರಲಿಲ್ಲ. ಜನರ ಸಮಸ್ಯೆ ಆಲಿಸಿರಲಿಲ್ಲ.

ಅಷ್ಟೇ ಅಲ್ಲ, ಲೋಕಸಭೆ ಚುನಾವಣೆಯಲ್ಲಿ ಅವರ ಪಕ್ಷದ ಅಭ್ಯರ್ಥಿ ಪರವೂ ಪ್ರಚಾರ ಕೈಗೊಂಡಿರಲಿಲ್ಲ. ನಂತರ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದಲೂ ಅಂತರ ಕಾಯ್ದುಕೊಂಡಿದ್ದರು. ಈಗ ಏಕಾಏಕಿ ಜಿಂದಾಲ್‌ ವಿಷಯವನ್ನು ಮುಂದಿಟ್ಟುಕೊಂಡು ಹೋರಾಟದ ಮಾತುಗಳನ್ನು ಆಡುತ್ತಿರುವುದಕ್ಕೆ ಸಾರ್ವಜನಿಕರಲ್ಲಿ ಹಲವು ರೀತಿಯ ಅನುಮಾನಗಳಿಗೆ ಕಾರಣವಾಗಿದೆ. ಈ ಕುರಿತು ಎಲ್ಲೆಡೆ ವ್ಯಾಪಕವಾಗಿ ಚರ್ಚೆ ಆಗುತ್ತಿದೆ.

’ವಿಜಯನಗರ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳತ್ತ ಮೊದಲು ಗಮನಹರಿಸಿ, ನಂತರ ಜಿಂದಾಲ್‌ ಕುರಿತು ಆಸಕ್ತಿ ತೋರಿಸಿದರೆ ಒಳ್ಳೆಯದು‘ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

’ಸ್ಥಳೀಯವಾಗಿ ನೂರಾರು ಸಮಸ್ಯೆಗಳಿವೆ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಅದನ್ನು ಬಗೆಹರಿಸಲು ಹೆಚ್ಚು ಒತ್ತು ಕೊಡಬೇಕು. ತಿಂಗಳಿಗೊಮ್ಮೆಯಾದರೂ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಅವುಗಳಿಗೆ ಪರಿಹಾರ ಕೊಡಿಸುವ ಕೆಲಸ ಮಾಡಬೇಕು‘ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಮರಡಿ ಜಂಬಯ್ಯ ನಾಯಕ.

’ಬೆಂಗಳೂರಿನಲ್ಲಿ ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆ ಆನಂದ್‌ ಸಿಂಗ್‌ ಕೂಡ ಅದಕ್ಕೆ ದನಿಗೂಡಿಸಿರುವುದು ನೋಡಿದರೆ ಅದರಲ್ಲಿ ಏನೋ ರಾಜಕೀಯ ಇರಬಹುದು ಅನಿಸುತ್ತಿದೆ‘ ಎಂದರು.

’ನಾಲ್ಕು ವರ್ಷಗಳಿಂದ ಕ್ಷೇತ್ರದ ಏಕೈಕ ಸಕ್ಕರೆ ಕಾರ್ಖಾನೆ ಬಂದ್‌ ಆಗಿದೆ. ಅದನ್ನು ಆರಂಭಿಸುವುದರ ಬಗ್ಗೆ ಪ್ರಯತ್ನಗಳಾಗಿಲ್ಲ. ಅದರ ಬದಲು ಹೊಸ ಕಾರ್ಖಾನೆಯಾದರೂ ಆರಂಭಿಸಬಹುದು. ಅದು ಕೂಡ ಆಗಿಲ್ಲ. ಕಾರ್ಖಾನೆ ಬಂದ್‌ ಆಗಿರುವುದರಿಂದ ಜಿಲ್ಲೆಯ ಮೂರು ತಾಲ್ಲೂಕುಗಳ ರೈತರು ಅತಿ ಕಡಿಮೆ ಬೆಲೆಗೆ ಬೇರೆ ಜಿಲ್ಲೆಗಳಿಗೆ ಕಬ್ಬು ಸಾಗಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಶಾಸಕರು ಗಟ್ಟಿಯಾದ ಧ್ವನಿ ಎತ್ತಬೇಕಿತ್ತು‘ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಜೆ. ಕಾರ್ತಿಕ್‌ ಹೇಳಿದರು.

’ಸ್ಥಳೀಯ ಸಮಸ್ಯೆಗಳು ಬೆಟ್ಟದಷ್ಟಿವೆ. ಅವುಗಳಿಗೆ ಮೊದಲು ಪರಿಹಾರ ಸಿಗಬೇಕು. ಜನರೊಂದಿಗೆ ಬೆರೆತು ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜಿಂದಾಲ್ ಸರ್ಕಾರದ ನೀತಿ ವಿಷಯ‘ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ದುರುಗಪ್ಪ ಪೂಜಾರ.

’ಜಿಲ್ಲೆಯ, ಯುವಕರ ಹಿತದೃಷ್ಟಿಯಿಂದ ಜಿಂದಾಲ್‌ಗೆ ಜಮೀನು ಮಾರಾಟ ಮಾಡಬಾರದು ಎಂಬುದು ನನ್ನ ನಿಲುವು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ನನ್ನದೇನಿದ್ದರೂ ಪಕ್ಷಾತೀತವಾದ ಹೋರಾಟ‘ ಎಂದು ಶಾಸಕ ಆನಂದ್‌ ಸಿಂಗ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT