ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಕಳೆದುಕೊಂಡಿದ್ದರೂ ‘ನಿಯಮ’ದಲ್ಲಿ ಪರಿಹಾರವಿಲ್ಲ!

ಅತಿವೃಷ್ಟಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬ
Last Updated 13 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಬೆಳಗಾವಿ: ಅತಿವೃಷ್ಟಿ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಕೈ ಕಳೆದುಕೊಂಡಿದ್ದರೂ ಪರಿಹಾರ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಇದರಿಂದಾಗಿ ಕೂಲಿ ಕಾರ್ಮಿಕರಾದ ಆ ವ್ಯಕ್ತಿಯೊಂದಿಗೆ ಇಡೀ ಕುಟುಂಬವೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಖಾನಾಪುರ ತಾಲ್ಲೂಕಿನ ಹಂದೂರ ಗ್ರಾಮದ ಲಕ್ಕಪ್ಪ ಮಲ್ಲಪ್ಪ ಪಾರಿಶ್ವಾಡ ಅವರ ಕಣ್ಣೀರಿನ ಕಥೆ ಇದು.

ಆ. 6ರಂದು ಗ್ರಾಮವೂ ಸೇರಿದಂತೆ ಖಾನಾಪುರ ತಾಲ್ಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿತ್ತು. ಚಾವಣಿ ಸೋರದಂತೆ ತಡೆಯಲು ಹೆಂಚು ಹಾಗೂ ಟಾರ್ಪಲಿನ್‌ ಹಾಕಲು ಲಕ್ಕಪ್ಪ ಮನೆಯ ಮೇಲೇರಿದ್ದರು. ಈ ವೇಳೆ, ಬಿದ್ದು ಬಲಗೈ ಮುರಿದಿತ್ತು. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದು ಸಾಧ್ಯವಾಗದೇ ಅವರ ಕೈಗೆ ಗ್ಯಾಂಗ್ರಿನ್ ಆಗಿತ್ತು. ಬಳಿಕ ಜಿಲ್ಲಾಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಅರ್ಧ ಕೈಯನ್ನೇ ಕತ್ತರಿಸಲಾಗಿದೆ. ಹೀಗಾಗಿ, ಆರ್ಥಿಕ ಪರಿಹಾರ ಕೋರಿ ಅವರು ಖಾನಾಪುರ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರು. ‘ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಇಂಥ ಪ್ರಕರಣಗಳಿಗೆ ಪರಿಹಾರ ಮಂಜೂರು ಮಾಡಲು ಅವಕಾಶವಿಲ್ಲ’ ಎಂದು ಹೇಳಿರುವ ತಹಶೀಲ್ದಾರ್‌ ಅರ್ಜಿ ಇತ್ಯರ್ಥಗೊಳಿಸಿದ್ದಾರೆ.

ಮಳೆಯೇ ಕಾರಣವಾಗಿತ್ತು:

‘ಮಳೆಯಿಂದಾಗಿ ಹಂದೂರ ಭಾಗದ ರಸ್ತೆಗಳು ಕುಸಿದಿದ್ದವು. ಸೇತುವೆಗಳು ಬಿದ್ದಿದ್ದವು. ಲಕ್ಕಪ್ಪ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವುದು ಸಾಧ್ಯವಾಗದೆ, ‘ಕಟ್ಟು’ ಹಾಕಿಸಿಕೊಂಡಿದ್ದರು. ಮಳೆ ಕೊಂಚ ಕಡಿಮೆಯಾದ ಬಳಿಕ ನಾವು ಕ್ಷೇತ್ರ ಕಾರ್ಯಕ್ಕೆಂದು ಹೋದಾಗ ಈ ವಿಷಯ ತಿಳಿಯಿತು. ನಾವೇ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದೆವು. ಗ್ಯಾಂಗ್ರಿನ್ ಆಗಿದ್ದರಿಂದ ವೈದ್ಯರು ಕೈ ಕತ್ತರಿಸುವುದು ಅನಿವಾರ್ಯವಾಗಿತ್ತು. ಪ್ರವಾಹವೇ ಅವರ ಈ ಪರಿಸ್ಥಿತಿಗೆ ನೇರ ಕಾರಣವಾಗಿದೆ. ಆದರೆತಹಶೀಲ್ದಾರ್‌ ನಿಯಮ ಮುಂದಿಟ್ಟು ಪರಿಹಾರ ನಿರಾಕರಿಸಿದ್ದಾರೆ. ಇದ್ಯಾವ ನ್ಯಾಯ? ಎಂದು ಸಾಮಾಜಿಕ ಕಾರ್ಯಕರ್ತೆ, ಜಾಗೃತಿ ಮಹಿಳಾ ಒಕ್ಕೂಟದ ಶಾರದಾ ಗೋಪಾಲ ಪ್ರಶ್ನಿಸಿದರು.

ಅತಂತ್ರರಾಗಿದ್ದಾರೆ:

‘ಲಕ್ಕಪ್ಪ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಮಾಡುತ್ತಿದ್ದರು. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಕೌಟುಂಬಿಕ ಕಾರಣದಿಂದಾಗಿ ಪುತ್ರಿ, ತನ್ನೆರಡು ಮಕ್ಕಳೊಂದಿಗೆ ತಂದೆಯ ಮನೆಗೆಬಂದಿದ್ದಾರೆ. ಪುತ್ರ ಓದುತ್ತಿದ್ದಾನೆ. ಎಲ್ಲರನ್ನೂ ನೋಡಿಕೊಳ್ಳುವ ಹೊಣೆ ಲಕ್ಕಪ್ಪ ಅವರದಾಗಿದೆ. ಕೆಲಸ ಮಾಡಲು ಈಗ ಸಾಧ್ಯವಾಗುತ್ತಿಲ್ಲ. ಮಾನವೀಯತೆಯ ನೆಲೆಯಲ್ಲಿಯಾದರೂ ಪರಿಹಾರ ನೀಡಲು ಪ್ರಯತ್ನಿಸಬಹುದಿತ್ತು. ಆದರೆ ಪರಿಹಾರ ನಿರಾಕರಿಸಿ, ಅರ್ಜಿ ಇತ್ಯರ್ಥಗೊಳಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅವರಿಗೂ ಗುರುವಾರ ಮನವಿ ಸಲ್ಲಿಸಿದ್ದೇವೆ. ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನೂ ಕೊಟ್ಟಿದ್ದೇವೆ’ ಎಂದು ತಿಳಿಸಿದರು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT