ರಾಜ್ಯದಲ್ಲಿ ಭಾರಿ ಮಳೆ: ಉಕ್ಕಿ ಹರಿದ ನದಿಗಳು

7
ಬೆಳ್ತಂಗಡಿಯಲ್ಲಿ ವ್ಯಕ್ತಿ ನೀರುಪಾಲು, ಮುಳುಗಿದ 2 ದೋಣಿ l ಹೆಚ್ಚುತ್ತಿರುವ ಪ್ರವಾಹ– ಅಧಿಕಾರಿಗಳ ನಿಗಾ

ರಾಜ್ಯದಲ್ಲಿ ಭಾರಿ ಮಳೆ: ಉಕ್ಕಿ ಹರಿದ ನದಿಗಳು

Published:
Updated:
Deccan Herald

ಬೆಂಗಳೂರು: ಮಲೆನಾಡು, ಅರೆಮಲೆನಾಡು, ಘಟ್ಟ ಪ್ರದೇಶ ಹಾಗೂ ಕರಾವಳಿಯಲ್ಲಿ ಭಾನುವಾರ ಭಾರಿ ಮಳೆ ಆಗಿದೆ. ಬಹುತೇಕ ನದಿಗಳು, ಹಳ್ಳ– ಕೊಳ್ಳಗಳು ಉಕ್ಕಿ ಹರಿಯುತ್ತಿವೆ.

ಕರಾವಳಿ ಭಾಗದಲ್ಲಿ ಮಳೆ ಮತ್ತೆ ಬಿರುಸುಗೊಂಡಿದ್ದು, ಬೆಳ್ತಂಗಡಿ ತಾಲ್ಲೂಕಿನ ನಾರಾವಿ ಗ್ರಾಮದ ಮಡ್ಯರಪ್ಪು ಬಳಿ ಬೊಮ್ಮಯ್ಯ ದಾಸ (65) ಎಂಬುವರು ಹಳ್ಳ ದಾಟುವಾಗ ನೀರಲ್ಲಿ ಕೊಚ್ಚಿ ಹೋಗಿದ್ದಾರೆ.

ಕಡಲಿನ ಅಲೆಗಳ ಅಬ್ಬರಕ್ಕೆ ಸಿಲುಕಿ ಗಂಗೊಳ್ಳಿಯಲ್ಲಿ ಎರಡು ಮೀನುಗಾರಿಕಾ ದೋಣಿಗಳು ಮುಳುಗಿವೆ. ಅದರಲ್ಲಿದ್ದ 16 ಮಂದಿಯನ್ನು ರಕ್ಷಿಸಲಾಗಿದೆ.

ಎರಡೂ ಜಿಲ್ಲೆಗಳ ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತದಿಂದ ಕಟ್ಟೆಚ್ಚರ ವಹಿಸಲಾಗಿದೆ. ನದಿ ನೀರಿನ ಮಟ್ಟದ ಮೇಲೆ ಅಧಿಕಾರಿಗಳು ನಿಗಾ ವಹಿಸಿದ್ದು, ಪ್ರಮುಖ ದೇವಾಲಯಗಳ ಸ್ನಾನಘಟ್ಟಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಗುಡ್ಡ ಕುಸಿತ: ಚಿಕ್ಕಮಗಳೂರು ತಾಲ್ಲೂಕಿನ ಕೈಮರ ಬಳಿಯ ಚೆನ್ನಗೊಂಡನಹಳ್ಳಿ ಕ್ರಾಸ್‌ನಲ್ಲಿ ಮಳೆಯಿಂದಾಗಿ ಭಾನುವಾರ ರಸ್ತೆಗೆ ಗುಡ್ಡ ಕುಸಿದು, ಮುಳ್ಳಯ್ಯನಗಿರಿ, ಬಾಬಾಬುಡನ್‌ ಗಿರಿ ಮಾರ್ಗ ಸಂಜೆವರೆಗೂ ಬಂದ್‌ ಆಗಿತ್ತು.

ಬೆಳಿಗ್ಗೆ 11.30ರಲ್ಲಿ ರಸ್ತೆಗೆ ಗುಡ್ಡ ಕುಸಿದಿತ್ತು. ಲೋಕೋಪಯೋಗಿ ಇಲಾಖೆಯಿಂದ ಜೆಸಿಬಿ ಬಳಸಿ ಸಂಜೆ 5ರ ಸುಮಾರಿಗೆ ಮಣ್ಣು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ವಾರಾಂತ್ಯವಾಗಿದ್ದರಿಂದ ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿಗೆ ಬಂದಿದ್ದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹಾಗೂ ಹೊಸನಗರದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಶಿವಮೊಗ್ಗ ನಗರ, ಭದ್ರಾವತಿ, ಸಾಗರ, ಸೊರಬ, ಶಿಕಾರಿಪುರ, ಕೋಣಂದೂರಿನ ಸುತ್ತಮುತ್ತಲೂ ಉತ್ತಮ ಮಳೆಯಾಗಿದೆ.

ಕಪಿಲಾ ನದಿಯಲ್ಲಿ ಪ್ರವಾಹ– ಶವಸಂಸ್ಕಾರಕ್ಕೆ ಪರದಾಟ: ನಂಜನಗೂಡು ಸಮೀಪದ ಕಪಿಲಾ ನದಿಯ ಪ್ರವಾಹ ಪರಿಸ್ಥಿತಿ ಭಾನುವಾರವೂ ಮುಂದುವರಿದಿದೆ. ಪಟ್ಟಣದ ಎಲ್ಲ ಸ್ಮಶಾನಗಳೂ ಜಲಾವೃತ
ಗೊಂಡಿರುವುದರಿಂದ ಶವಸಂಸ್ಕಾರಕ್ಕೆ ಸಾರ್ವಜನಿಕರು ಪರದಾಡುವಂತಾಗಿದೆ.

ಶವವೊಂದರ ಅಂತಿಮಸಂಸ್ಕಾರವನ್ನು ಮೈಸೂರಿನಲ್ಲಿ ನಡೆಸಲಾಯಿತು. ಮತ್ತೆರಡು ಶವಗಳ ಅಂತ್ಯಸಂಸ್ಕಾರವನ್ನು ನಂಜನೂಡು– ಚಾಮರಾಜನಗರ ರಸ್ತೆ ಬದಿಯಲ್ಲೇ ನೆರವೇರಿಸಲಾಯತು.

ಗಿರಿಜಾ ಕಲ್ಯಾಣ ಮಂಟಪದ ಗಂಜಿ ಕೇಂದ್ರದಲ್ಲಿ 45 ಕುಟುಂಬಗಳ 120 ಮಂದಿ ಆಶ್ರಯ ಪಡೆದಿದ್ದಾರೆ. ಜಲಾ
ವೃತಗೊಂಡಿರುವ ಹೆಜ್ಜಿಗೆ ಸೇತುವೆಯ ರ‍್ಯಾಂಪ್ ಬಿರುಕು ಬಿಟ್ಟಿದೆ. ಇದನ್ನು ನೋಡಲು ಜನರು ತಂಡೋಪ
ತಂಡವಾಗಿ ಸೇರುತ್ತಿದ್ದಾರೆ. ಮೈಸೂರು– ಊಟಿ ಹೆದ್ದಾರಿಯಲ್ಲಿ ವಾಹನ ಸಂಚಾರ ಇನ್ನೂ ಸಾಧ್ಯವಾಗಿಲ್ಲ.ಬದಲಿ ಮಾರ್ಗದಲ್ಲಿ ವಾಹನಗಳು ಸಂಚರಿಸುತ್ತಿವೆ.

ಕೊಡಗು ಜಿಲ್ಲೆಯಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದೆ. ಶನಿವಾರ ರಾತ್ರಿಯೂ ಭಾರಿ ಮಳೆ ಸುರಿಯಿತು. ಕಾವೇರಿ, ಲಕ್ಷ್ಮಣತೀರ್ಥ ನದಿಗಳೂ ಸೇರಿದಂತೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.

ಸೋಮವಾರಪೇಟೆ ಹಾಗೂ ಮಾದಾಪುರ ಭಾಗದಲ್ಲೂ ಸತತವಾಗಿ ಮಳೆ ಸುರಿಯುತ್ತಿದ್ದು, ಹಾರಂಗಿ
ಜಲಾಶಯದ ಒಳಹರಿವು ಮತ್ತೆ ಏರಿಕೆಯಾಗಿದೆ.

ಕೊಚ್ಚಿಹೋದ ಹಸು: ಕೊಳ್ಳೇಗಾಲ ತಾಲ್ಲೂಕಿನ ಭರಚುಕ್ಕಿ ಜಲಪಾತದಲ್ಲಿ ನೀರಿನ ಸೆಳೆತಕ್ಕೆ ಸಿಕ್ಕಿ, ಶಿವನಸಮುದ್ರ ಗ್ರಾಮದ ಸಿದ್ದೇಗೌಡ ಎಂಬುವರಿಗೆ ಸೇರಿದ ಹಸು ಶನಿವಾರ ಕೊಚ್ಚಿಕೊಂಡು ಹೋಗಿದೆ.

ಹಂಪಿ ಸ್ಮಾರಕಗಳು ಮುಳುಗಡೆ: ತುಂಗಭದ್ರಾ ಜಲಾಶಯದಿಂದ 79 ಸಾವಿರ ಕ್ಯುಸೆಕ್‌ಗೂ ಅಧಿಕ ನೀರನ್ನು ನದಿಗೆ ಬಿಟ್ಟಿರುವುದರಿಂದ, ಹೊಸಪೇಟೆ ತಾಲ್ಲೂಕಿನ ಹಂಪಿಯ ಕೆಲ ಸ್ಮಾರಕಗಳು ಸಂಪೂರ್ಣ ಮುಳುಗಡೆಯಾಗಿವೆ.

ವಿಜಯನಗರ ಕಾಲದ ಕಾಲು ಸೇತುವೆ, ಚಕ್ರತೀರ್ಥ, ಪಿತೃಪಿಂಡ ಪ್ರದಾನ ಮಂಟಪ, ಸ್ನಾನಘಟ್ಟದ ಮೆಟ್ಟಿಲುಗಳು, ಪುರಂದರ ಮಂಟಪ ಹಾಗೂ ರಾಮ–ಲಕ್ಷ್ಮಣ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಜಲಾವೃತವಾಗಿದೆ. ಇದರಿಂದಾಗಿ ಪ್ರವಾಸಿಗರು ದೇವಸ್ಥಾನಕ್ಕೆ ದರ್ಶನಕ್ಕೆ ತೆರಳಲು ಆಗುತ್ತಿಲ್ಲ. ನದಿ ತುಂಬಿ ಹರಿಯುತ್ತಿರುವುದರಿಂದ ಮೋಟಾರ್‌ ದೋಣಿ ಹಾಗೂ ತೆಪ್ಪ ಸಂಚಾರ ಸ್ಥಗಿತಗೊಂಡಿದೆ.

ಬಿರುಸುಗೊಂಡ ಮಳೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾನುವಾರದಿಂದ ಮಳೆ ಬಿರುಸುಗೊಂಡಿದೆ. ಭಟ್ಕಳ, ಕುಮಟಾ, ಕಾರವಾರ ತಾಲ್ಲೂಕುಗಳು ಸೇರಿದಂತೆ ಕರಾವಳಿಯಾದ್ಯಂತ ದಿನವಿಡೀ ವ್ಯಾಪಕ ಮಳೆಯಾಗಿದೆ. ಹಳಿಯಾಳದಲ್ಲಿ ಬೆಳಿಗ್ಗೆ ಆರಂಭವಾದ ಮಳೆ ಮಧ್ಯಾಹ್ನದವರೆಗೂ ಸುರಿಯಿತು.

ವಿಜಯಪುರ, ಬಾಗಲಕೋಟೆ, ಹಾವೇರಿ ಹಾಗೂ ಧಾರವಾಡ ಜಿಲ್ಲೆಯ ವಿವಿಧೆಡೆ ಭಾನುವಾರ ಮಳೆ ಚುರುಕು ಪಡೆದಿದೆ.
 


ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟಿರುವುದರಿಂದ ಹಂಪಿಯ ರಾಮ–ಲಕ್ಷ್ಮಣ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ನೀರಿನಲ್ಲಿ ಮುಳುಗಡೆಯಾಗಿದ್ದು, ಪ್ರವಾಸಿಗರು ಮಾರ್ಗ ಮಧ್ಯದಲ್ಲಿಯೇ ನಿಂತಿರುವುದು
–ಪ್ರಜಾವಾಣಿ ಚಿತ್ರ: ಬಿ. ಬಾಬುಕುಮಾರ

**

ಶಾಲಾ, ಕಾಲೇಜುಗಳಿಗೆ ರಜೆ ಇಂದು

ಭಾರಿ ಮಳೆ ಸುರಿಯುವ ಮುನ್ಸೂಚನೆ ಮೇರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಸೋಮವಾರ (ಆ. 13) ಶಾಲಾ– ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಕೊಡಗು ಜಿಲ್ಲೆಗೆ ಬರುವ ಪ್ರವಾಸಿಗರು ನದಿ, ತೊರೆಗಳಿಗೆ ಇಳಿಯದೆ ಸುರಕ್ಷಿತ‌ ಸ್ಥಳಗಳಲ್ಲಿ ನಿಂತು ವೀಕ್ಷಣೆ ಮಾಡುವಂತೆ ಜಿಲ್ಲಾಡಳಿತ ಕೋರಿದೆ. ಸಹಾಯವಾಣಿ ಕೇಂದ್ರ‌ ತೆರೆಯಲಾಗಿದ್ದು, ದೂರವಾಣಿ: 08272 221077 ಸಂಪರ್ಕಿಸಬಹುದು.

ಶಿವಮೊಗ್ಗ ಜಿಲ್ಲೆಯ ಸೊರಬ, ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ ತಾಲ್ಲೂಕುಗಳಲ್ಲಿಯೂ ಸೋಮವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

**

ತಿರುವನಂತಪುರ: ಭೀಕರ ಪ್ರವಾಹದಿಂದ ತತ್ತರಿಸಿರುವ ಕೇರಳ ರಾಜ್ಯದಲ್ಲಿ ತಕ್ಷಣದ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಭಾನುವಾರ ₹100 ಕೋಟಿ ಹೆಚ್ಚುವರಿ ನೆರವು ಘೋಷಿಸಿದೆ.

ಇಡುಕ್ಕಿ ಮತ್ತು ಎರ್ನಾಕುಲಂ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸೋಮವಾರ ವೈಮಾನಿಕ ಸಮೀಕ್ಷೆ ನಡೆಸಿದ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌, ಎರ್ನಾಕುಲಂ ಜಿಲ್ಲೆಯ ಎಲಂತಿಕ್ಕರದ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರ ಸರ್ಕಾರದ ನೆರವು ಪ್ರಕಟಿಸಿದರು.

‘ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ನಿಧಿಗೆ (ಎಸ್‌ಡಿಆಎಫ್‌) ಕೇಂದ್ರದ ಪಾಲಿನ ಅನುದಾನದ ಮೊದಲ ಕಂತಿನ ₹80.25 ಕೋಟಿಯನ್ನು ಜುಲೈನಲ್ಲಿ ಬಿಡುಗಡೆ ಮಾಡಲಾಗಿದೆ. ಎರಡನೇ ಕಂತು ₹80.25 ಕೋಟಿಯನ್ನು ಮುಂಚಿತವಾಗಿಯೇ ಬಿಡುಗಡೆ ಮಾಡಲು ಈಗಾಗಲೇ ಅನುಮತಿ ನೀಡಿದ್ದೇನೆ’ ಎಂದು ತಿಳಿಸಿದರು.

ಪ್ರವಾಹದ ಹಾನಿಯಿಂದ ₹8,316 ಕೋಟಿಯಷ್ಟು ನಷ್ಟ ಉಂಟಾಗಿದೆ. ತಕ್ಷಣದ ನೆರವಿಗೆ ಕೇಂದ್ರ ಸರ್ಕಾರ ₹1,220 ಕೋಟಿ ಬಿಡುಗಡೆ ಮಾಡಬೇಕು. ರಾಜ್ಯಕ್ಕೆ ವಿಶೇಷ ಪ್ಯಾಕೇಜ್‌ ನೀಡಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದರು.

14ರವರೆಗೆ ಕಟ್ಟೆಚ್ಚರ: ಭಾರಿ ಮಳೆಯ ಮುನ್ಸೂಚನೆಯಿಂದ ಆಲಪುಳ, ಕಣ್ಣೂರ್‌, ಎರ್ನಾಕುಲಂ, ಪಾಲಕ್ಕಾಡ್‌, ಮಲಪ್ಪುರಂ ಮತ್ತು ಕೋಯಿಕ್ಕೋಡ್‌ನಲ್ಲಿ ಆಗಸ್ಟ್‌ 13ರವರೆಗೆ ಹಾಗೂ ವಯನಾಡು ಮತ್ತು ಇಡುಕ್ಕಿಯಲ್ಲಿ ಆಗಸ್ಟ್‌ 14ರವರೆಗೆ ರಾಜ್ಯ ಸರ್ಕಾರ ಕಟ್ಟೆಚ್ಚರ ಘೋಷಿಸಿದೆ.

ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ ಆಗಸ್ಟ್‌ 16ರವರೆಗೆ ಭಾರಿ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಬರಹ ಇಷ್ಟವಾಯಿತೆ?

 • 20

  Happy
 • 2

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !