ಸೋಮವಾರ, ಮಾರ್ಚ್ 8, 2021
29 °C
ಮೂಡಿಗೆರೆ ಹಂತೂರಿನಲ್ಲಿ ನೀರಿನಲ್ಲಿ ಸಿಲುಕಿಕೊಂಡಿದ್ದ 9 ಮಂದಿ ರಕ್ಷಣೆ

ಚಾರ್ಮಾಡಿ ಘಾಟಿ ಸಂಚಾರ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಮೂಡಿಗೆರೆ ತಾಲ್ಲೂಕಿನ ಹಂತೂರು ಬಳಿ ನೀರಿನಲ್ಲಿ ಸಿಲುಕಿಕೊಂಡಿದ್ದ ಇಸ್ಕಾನ್‌ನ ಒಂಬತ್ತು ಮಂದಿಯನ್ನು ರಕ್ಷಿಸಲಾಗಿದೆ.

ಹೇಮಾವತಿ ನದಿ ಹಂತೂರಿನ ಬಳಿ ಉಕ್ಕಿ ಹರಿಯುತ್ತಿದೆ. ನದಿ ಪಾತ್ರದಲ್ಲಿ ವಾಸವಿರುವ ಇಸ್ಕಾನ್‌ ಸದಸ್ಯರ ಮನೆಗೆ ಬುಧವಾರ ನೀರು ನುಗ್ಗಿತ್ತು. ನೀರಿನಲ್ಲಿ ಸಿಲುಕಿಕೊಂಡಿದ್ದವರನ್ನು ‘ಪೀಸ್ ಅಂಡ್‌ ಅವೆರ್ನೆಸ್‌’ ಸಂಘಟನೆ ಕಾರ್ಯಕರ್ತರು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.

ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಭಾಗದಲ್ಲಿ 251 ಮಿ.ಮೀ. ಮಳೆ ಸುರಿದಿದೆ. ಇದೇ ತಾಲ್ಲೂಕಿನ ಹಾಲೂರು ಗ್ರಾಮದ ಅಬಚೂರಿನಲ್ಲಿ ಬುಧವಾರ ತುಂಬ ಹರಿಯುತ್ತಿರುವ ಹೇಮಾವತಿ ನದಿಯಲ್ಲಿ ಅಬಚೂರು ಗ್ರಾಮದ ಯುವಕ ಶ್ರೀವತ್ಸ (20) ಕೊಚ್ಚಿ ಹೋಗಿದ್ದಾನೆ.

ಹೊರನಾಡು– ಕಳಸ ಮಾರ್ಗದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಭದ್ರಾ ನದಿಯು ಬೈರೆಗುಡ್ಡದ ಬಳಿ ಉಕ್ಕಿ ರಸ್ತೆ ಮೇಲೆ ಹರಿಯುತ್ತಿದ್ದು, ಕಳಸ– ಬಾಳೆಹೊನ್ನೂರು ಮಾರ್ಗದ ಸಂಚಾರ ಕಡಿತವಾಗಿದೆ.

ರೈತ ಸಾವು: ಎನ್‌.ಆರ್‌.ಪುರ ತಾಲ್ಲೂಕಿನ ಮಾಳೂರುದಿಣ್ಣೆ ಗ್ರಾಮದ ರೈತ ಕುಮಾರ (45) ಅವರು ವಿದ್ಯುತ್‌ ತಗುಲಿ ಹೊಲದಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ. ಮೂಡಿಗೆರೆ, ಕಳಸ, ಕೊಪ್ಪ, ಬಾಳೆಹೊನ್ನೂರು, ಎನ್‌.ಆರ್‌.ಪುರ, ಶೃಂಗೇರಿ ಭಾಗದಲ್ಲಿ ಗದ್ದೆ, ತೋಟಗಳು ಜಲಾವೃತವಾಗಿವೆ.

ಗುರುವಾರವೂ ಸಂಚಾರ ನಿಷೇಧ: ರಾಷ್ಟ್ರೀಯ ಹೆದ್ದಾರಿ 234ರಲ್ಲಿನ ಚಾರ್ಮಾಡಿ ಘಾಟಿ ಮಾರ್ಗದ ಭಾರಿ ಮಳೆಯಿಂದ ಮಂಗಳವಾರ ರಾತ್ರಿಯಿಂದ ಒಂಬತ್ತು ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದೆ. ಗುಡ್ಡ ಕುಸಿದು ಬೀಳುತ್ತಲೇ ಇದ್ದು, ಗುರುವಾರ ತಡರಾತ್ರಿಯವರೆಗೆ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಭೂಕುಸಿತ ಮುಂದುವರಿದರೆ ನಿಷೇಧವನ್ನು ಮತ್ತಷ್ಟು ದಿನಗಳ ಕಾಲ ವಿಸ್ತರಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರಾವಳಿ ಭಾಗದಲ್ಲಿ ಭಾರಿ ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಆಗಸ್ಟ್‌ 8 ಮತ್ತು 9ರಂದು ಭಾರಿ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಭಾಗದಲ್ಲಿ ಪಶ್ಚಿಮ ಹಾಗೂ ನೈರುತ್ಯ ದಿಕ್ಕಿನಿಂದ ಗಂಟೆಗೆ 40 ಕಿ.ಮೀ.ವೇಗದಲ್ಲಿ ಗಾಳಿ ಬೀಸುತ್ತಿದ್ದು, 3.5ಮೀಟರ್‌ನಷ್ಟು ಎತ್ತರದ ಅಲೆಗಳೂ ಏಳುತ್ತಿವೆ. ಹೀಗಾಗಿ ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಸಿದೆ.

ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮುಂದಿನ 48 ಗಂಟೆ ಅವಧಿಯಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ. ಗರಿಷ್ಠ ತಾಪಮಾನ 27 ಸೆಲ್ಸಿಯಸ್‌ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ.

ಬುಧವಾರ ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ 29 ಸೆಂ.ಮೀ.ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ 28, ಹೊಸನಗರ 25, ಕೊಲ್ಲೂರು, ಯಲ್ಲಾಪುರ 22, ಪೊನ್ನಂಪೇಟೆ 21, ಸುಬ್ರಹ್ಮಣ್ಯ 19, ಶೃಂಗೇರಿ, ಬೆಳಗಾವಿ ತಲಾ 18, ವಿರಾಜಪೇಟೆ 15, ಕಳಸ 13, ಧರ್ಮಸ್ಥಳ, ಪುತ್ತೂರು, ಸಕಲೇಶಪುರದಲ್ಲಿ ತಲಾ 11, ನಿಪ್ಪಾಣಿ 9, ಹೆಗ್ಗಡದೇವನ ಕೋಟೆ, ಆಂಕೋಲಾ 8, ಸೊರಬ, ಧಾರವಾಡದಲ್ಲಿ ತಲಾ 7 ಸೆಂ.ಮೀ.ಮಳೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು