ಮಂಗಳವಾರ, ಸೆಪ್ಟೆಂಬರ್ 17, 2019
27 °C
ಉತ್ತರ ಕನ್ನಡ, ಕೊಡಗಿನಲ್ಲಿ ಬಿರುಸು ಮಳೆ * ಕರಾವಳಿ ಭಾಗದಲ್ಲಿ ಸೆ.3ರವರೆಗೆ ಆರೆಂಜ್ ಅಲರ್ಟ್‌

ವಿರಾಜಪೇಟೆಯಲ್ಲಿ ಭೂಕುಸಿತ: ಶೋಧ ಕಾರ್ಯಾಚರಣೆ ಸ್ಥಗಿತ

Published:
Updated:
Prajavani

ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ತೋರ ಗ್ರಾಮದಲ್ಲಿ ಭೂಕುಸಿತಕ್ಕೆ ಸಿಲುಕಿ, ಕಣ್ಮರೆಯಾದವರಿಗಾಗಿ ನಡೆಯು
ತ್ತಿದ್ದ ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

22 ದಿನಗಳಿಂದ ಕಾರ್ಯಾಚರಣೆ ನಡೆದರೂ, ಹರೀಶ್ ಮತ್ತು ಪ್ರಭು ಕುಟುಂಬದ ನಾಲ್ವರ ಸುಳಿವು ಇನ್ನೂ ಪತ್ತೆಯಾಗಿಲ್ಲ.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸರ್ಕಾರಕ್ಕೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ಪತ್ರ ಬರೆದಿದ್ದರು. ಭೂಕುಸಿತದ ಸ್ಥಳದಲ್ಲಿ ಮಣ್ಣು ಪದೇ ಪದೇ ಕುಸಿಯುತ್ತಿದೆ. ಅಲ್ಲದೇ ಉಕ್ಕುತ್ತಿರುವ ನೀರು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ತಾತ್ಕಾಲಿಕವಾಗಿ ಶೋಧ ಸ್ಥಗಿತಕ್ಕೆ ಎರಡು ಕುಟುಂಬದ ಸದಸ್ಯರು ಈಗ ಸಮ್ಮತಿಸಿದ್ದಾರೆ.

ಪ್ರಭು, ಹರೀಶ್ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ ₹1 ಲಕ್ಷ ನೀಡಲಾಗಿದೆ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಉಳಿದ ಪರಿಹಾರ ನೀಡುವಂತೆಯೂ ಸ್ಥಳೀಯ ಶಾಸಕರು ಮನವಿ ಮಾಡಿದ್ದಾರೆ.

ಆ.9ರಂದು ತೋರ ಗ್ರಾಮದಲ್ಲಿ ಸಂಭವಿಸಿದ್ದ ದುರಂತದಲ್ಲಿ ಮೃತ ಪಟ್ಟವರ ಪೈಕಿ ಈವರೆಗೆ 6 ಮಂದಿಯ ಮೃತದೇಹಗಳು ಪತ್ತೆಯಾಗಿವೆ.

ಉಳಿದ ನಾಲ್ಕು ಮಂದಿಗಾಗಿ ಎನ್‌ಡಿಆರ್‌ಎಫ್‌, ಗರುಡ ಹಾಗೂ ಸ್ಥಳೀಯ ಪೊಲೀಸರು ಶೋಧ
ನಡೆಸುತ್ತಿದ್ದರು.

ಕರಾವಳಿ ಭಾಗದಲ್ಲಿ ಸೆ.3ರವರೆಗೆ ಆರೆಂಜ್ ಅಲರ್ಟ್‌

‘ರಾಜ್ಯದ ಕರಾವಳಿ ಭಾಗದಲ್ಲಿ ಸೆ. 3ರ ವರೆಗೆ ವ್ಯಾಪಕ ಮಳೆಯಾಗಲಿದ್ದು, ‘ಆರೆಂಜ್‌ ಅಲರ್ಟ್‌’ ಘೋಷಿಸಲಾಗಿದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್‌.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ಹೆಚ್ಚು ಮಳೆಯಾಗಲಿದೆ. ಹೀಗಾಗಿ ಈ ಭಾಗದಲ್ಲಿ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ. ಉತ್ತರ ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ ಸಾಧಾರಣಕ್ಕಿಂತ ಹೆಚ್ಚಿನ ಮಳೆಯಾಗಲಿದೆ’ ಎಂದು ಹೇಳಿದ್ದಾರೆ.

ಉತ್ತರ ಕನ್ನಡ, ಕೊಡಗಿನಲ್ಲಿ ಬಿರುಸು ಮಳೆ

ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಯ ವಿವಿಧೆಡೆ ಭಾನುವಾರವೂ ಭಾರಿ ಮಳೆಯಾಗಿದೆ. ಮಧ್ಯಾಹ್ನದವರೆಗೂ ಸುರಿದು, ಸಂಜೆಯ ವೇಳೆಗೆ ಜಿಟಿಜಿಟಿಯಾಗಿ ಮಳೆಯಾಗಿದೆ.

ಜೊಯಿಡಾ, ಮುಂಡಗೋಡ, ಸಿದ್ದಾಪುರ, ಅಂಕೋಲಾ,ಕುಮಟಾ, ದಾಂಡೇಲಿ, ಕಾರವಾರ ತಾಲ್ಲೂಕುಗಳಲ್ಲಿ ಭಾರಿ ಮಳೆಯಾಗಿದೆ. ಭಟ್ಕಳ, ಹೊನ್ನಾವರದಲ್ಲೂ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದೆ. ಶಿರಸಿಯಲ್ಲಿ ಜಿಟಿಜಿಟಿ ಮಳೆ ಸುರಿದೆ. ಮಳೆಯಿಂದಾಗಿ ಕಾರವಾರ, ಭಟ್ಕಳದಲ್ಲಿ ವಾರದ ಸಂತೆ ಅಸ್ತವ್ಯಸ್ತಗೊಂಡಿತು.

ಅಲ್ಲಲ್ಲಿ ಹೆದ್ದಾರಿಗಳಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಯಿತು. ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಇಡೀ ದಿನ ಮೋಡ ಕವಿದ ವಾತಾವರಣವಿದ್ದು, ಆಗಾಗ ಮಳೆ ಸುರಿಯುತ್ತಿದ್ದು, ಹಬ್ಬದ ಸಂಭ್ರಮಕ್ಕೆ ಕಡಿವಾಣ ಹಾಕಿದಂತಾಗಿದೆ. ಹೊಸಪೇಟೆಯಲ್ಲಿ ಮಧ್ಯಾಹ್ನ ಸಾಧಾರಣ ಮಳೆಯಾಗಿದೆ. ಹಾವೇರಿಯಲ್ಲಿ ಬೆಳಗಿನ ಹೊತ್ತು ಸಾಧಾರಣ ಮಳೆಯಾಗಿದ್ದು, ಆಗಾಗ ತುಂತುರು ಮಳೆಯಾಗಿದೆ.

ರಭಸದ ಮಳೆ: ಕೊಡಗು ಜಿಲ್ಲೆಯ ವಿವಿಧೆಡೆ ಭಾನುವಾರವೂ ಧಾರಾಕಾರ ಮಳೆಯಾಗಿದೆ. ಮಡಿಕೇರಿ ಸುತ್ತಮುತ್ತ, ನಾಪೋಕ್ಲು, ಭಾಗಮಂಡಲ, ತಲಕಾವೇರಿ ಹಾಗೂ ಗೋಣಿಕೊಪ್ಪಲು ಭಾಗದಲ್ಲಿ ಬಿಡುವು ಕೊಟ್ಟು ರಭಸವಾಗಿ ಮಳೆ ಸುರಿಯುತ್ತಿದೆ. ಕಾಟಕೇರಿ, ಚೇರಂಬಾಣೆ, ಅಪ್ಪಂಗಳ ಸುತ್ತಮುತ್ತ ಶನಿವಾರ ತಡರಾತ್ರಿಯಿಂದಲೂ ಮಳೆಯಾಗುತ್ತಿದೆ. ವಿರಾಜಪೇಟೆ, ಮದೆನಾಡು, ಸೋಮವಾರಪೇಟೆ, ಶನಿವಾರಸಂತೆ ಭಾಗದಲ್ಲಿ ಸಾಧಾರಣ ಮಳೆ ಸುರಿದಿದೆ. ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಚುರುಕಾಗಿದೆ.

Post Comments (+)