ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕ, ತಮ್ಮನಿಗೆ ನೆರವಿನ ಮಹಾಪೂರ

ತಹಶೀಲ್ದಾರ್‌ ಭೇಟಿ; ಮಕ್ಕಳಿಗೆ ಸೌಲಭ್ಯ ಕಲ್ಪಿಸುವ ಭರವಸೆ
Last Updated 27 ಫೆಬ್ರುವರಿ 2020, 19:20 IST
ಅಕ್ಷರ ಗಾತ್ರ

ಎಚ್‌.ಡಿ.ಕೋಟೆ: ಪೋಷಕರನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ತಾಲ್ಲೂಕಿನ ಆಲನಹಳ್ಳಿ ಗ್ರಾಮದ ಆಕಾಶ್‌ (15) ಹಾಗೂ ಅನುಷಾ (17) ಅವರಿಗೆ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ತಹಶೀಲ್ದಾರ ಸೇರಿದಂತೆ ತಾಲ್ಲೂಕಿನ ಅಧಿಕಾರಿಗಳು ಭೇಟಿ ನೀಡಿದ್ದು, ಬಾಲಕನ ಶಿಕ್ಷಣ ಹಾಗೂ ಆತನ ಅಕ್ಕನ ಆರೈಕೆಗೆ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.

‘ಅಕ್ಕನ ಆರೈಕೆಗೆ ಶಾಲೆ ತೊರೆದ ತಮ್ಮ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಗುರುವಾರ ಪ್ರಕಟವಾದ ವರದಿಗೆ ಸ್ಪಂದಿಸಿ ಹಲವರು ಸಹಾಯಕ್ಕೆ ಮುಂದಾಗಿದ್ದಾರೆ.

ಈ ಮಕ್ಕಳ ನಿವಾಸಕ್ಕೆ ಗುರುವಾರ ಭೇಟಿ ನೀಡಿದ ಎಚ್‌.ಡಿ.ಕೋಟೆ ತಹಶೀಲ್ದಾರ್ ಆರ್.ಮಂಜುನಾಥ್ ಸಮಸ್ಯೆ ಆಲಿಸಿದರು. ‘ಅನುಷಾ ಸೆರೆಬ್ರಲ್‌ ಪಾಲ್ಸಿ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಆಕೆಯನ್ನು ಮೈಸೂರಿನ ಕರುಣಾಲಯ ಟ್ರಸ್ಟ್‌ಗೆ ದಾಖಲಿಸಲಾಗುವುದು. ಆಕಾಶ್‌, ಮೈಸೂರಿನ ಬಾಲಮಂದಿರಕ್ಕೆ ಸೇರಲು ನಿರಾಕರಿಸಿದ್ದಾನೆ. ಗ್ರಾಮದ ಶಾಲೆಯಲ್ಲೇ ಓದು ಮುಂದುವರಿಸುವುದಾಗಿ ಆತ ಹೇಳಿದ್ದು, ಸಮೀ
ಪದ ಕ್ಯಾತನಹಳ್ಳಿಯ ಹಾಸ್ಟೆಲ್‌ನಲ್ಲಿ ವಸತಿ ವ್ಯವಸ್ಥೆ ಮಾಡಲಾಗುವುದು’ ಎಂದರು.

ಇದಕ್ಕೂ ಮುನ್ನ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ದಿವಾಕರ್, ಸಾಂತ್ವನ ಕೇಂದ್ರದ ಜಶೀಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ತಾಲ್ಲೂಕು ಅಧಿಕಾರಿ ಆಶಾ, ಆಪ್ತ ಸಮಾಲೋಚಕರಾದ ಮಮತಾ ಹಾಗೂ ರಾಧಾ, ಆಕಾಶ್‌ನನ್ನು ಮೈಸೂರಿನಲ್ಲಿರುವ ಬಾಲಕರ ಬಾಲಮಂದಿರದಲ್ಲಿ ಇರಿಸಿ ಶಿಕ್ಷಣ ಮುಂದುವರಿಸಲು ಸೌಲಭ್ಯ ಕಲ್ಪಿಸುವುದಾಗಿ ತಿಳಿಸಿದ್ದರು.

ಹಣ ಜಮೆ ಮಾಡಿದ ಎಂಜಿನಿಯರ್‌: ಹಾಸನ ಜಿಲ್ಲೆ ಸಕಲೇಶಪುರ ಪುರಸಭೆಯ ಎಂಜಿನಿಯರ್‌ ಕವಿತಾ, ಬಾಲಕನ ಹೆಸರಿನ
ಲ್ಲಿರುವ ಬ್ಯಾಂಕ್‌ ಖಾತೆಯ ವಿವರವನ್ನು ಕೇಳಿ ಪಡೆದು, ₹ 5000 ಹಣ ಜಮಾ ಮಾಡಿದ್ದಾರೆ. ಪ್ರತೀ ತಿಂಗಳು ಆತನ ಖಾತೆಗೆ ₹ 2000 ಜಮಾ ಮಾಡುವುದಾಗಿ ಹೇಳಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಗಿರಿಗೌಡನ ಪಾಳ್ಯದ ಅರವಿಂದ್ ವಸತಿ ಶಾಲೆಯ ಸ್ಥಾಪಕ ಎಂ.ಕೆ.ಅಶೋಕ್, ಬಾಲಕನಿಗೆ ತಮ್ಮ ಶಾಲೆಯಲ್ಲಿ ಪಿಯು ವರೆಗೆ ಉಚಿತವಾಗಿ ಶಿಕ್ಷಣ ನೀಡಲು ಮುಂದೆ ಬಂದಿದ್ದಾರೆ. ಆದರೆ, ಆತನ ಅಕ್ಕನ ಆರೈಕೆಯ ಜವಾಬ್ದಾರಿಯನ್ನು ಯಾವುದಾದರೂ ಸಂಘ ಸಂಸ್ಥೆಗಳು ತೆಗೆದುಕೊಳ್ಳಬೇಕು ಎಂದೂ ಅವರು ಮನವಿ ಮಾಡಿದ್ದಾರೆ.

ರೋಟರಿ, ಸಂಘ–ಸಂಸ್ಥೆಯವರು, ಉದ್ಯಮಿಗಳು, ಸಮಾಜ ಸೇವಕರು, ವಕೀಲರು ಈ ಮಕ್ಕಳಿಗೆ ನೆರವಾಗಲು ಮುಂದೆ ಬಂದಿದ್ದಾರೆ.

ದತ್ತು ಪಡೆಯಲು ನಿರ್ಧಾರ

ಈ ಮಕ್ಕಳಿಬ್ಬರನ್ನೂ ದತ್ತು ಪಡೆಯಲು ಚಾಮರಾಜನಗರ ನಳಂದ ಬೌದ್ಧ ವಿಶ್ವವಿದ್ಯಾಲಯದ ಬಂತೆ ಬೋಧಿದತ್ತ ಸ್ವಾಮೀಜಿ ನಿರ್ಧರಿಸಿದ್ದಾರೆ. ಬಾಲಕನನ್ನು ಬುದ್ಧ ವಿಹಾರಕ್ಕೆ ಸೇರಿಸಿಕೊಂಡು ಶಿಕ್ಷಣದ ಜವಾಬ್ದಾರಿ ನೋಡಿಕೊಳ್ಳುವುದಾಗಿ ಹಾಗೂ ಬಾಲಕಿಯನ್ನು ಮೈಸೂರಿನ ಆಶ್ರಮವೊಂದಕ್ಕೆ ಸೇರಿಸುವುದಾಗಿ ಹೇಳಿದ್ದಾರೆ. ಅವರು ಶುಕ್ರವಾರ ಈ ಮಕ್ಕಳ ನಿವಾಸಕ್ಕೆ ಭೇಟಿ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT