ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಡೂರಲ್ಲಿ ಹಸಿರುಡುತ್ತಿರುವ ವನಸಿರಿ

ಮುದ ನೀಡುತ್ತಿರುವ ಸಸ್ಯ ಸಂಕುಲ, ಪ್ರಾಣಿಗಳು
Last Updated 1 ಜೂನ್ 2018, 12:19 IST
ಅಕ್ಷರ ಗಾತ್ರ

ಸಂಡೂರು: ಕೆಲ ದಿನಗಳಿಂದ ಸುರಿದ ಮಳೆಯಿಂದ ಗಣಿ ನಾಡು ಸಂಡೂರು ಸುತ್ತಮುತ್ತಲಿನ ವನಸಿರಿ ಹಸಿರುಟ್ಟು ಮದುಮಗಳಂತೆ ಕಂಗೊಳಿಸುತ್ತ ನೋಡುಗರನ್ನು ಆಕರ್ಷಿಸುತ್ತಿದೆ.

ಇಲ್ಲಿನ ಹಸಿರು ಹೊದ್ದ ಕಾಡುಗಳು, ಅಲ್ಲಿನ ಪಕ್ಷಿಗಳ ಇಂಚರ, ಅಲ್ಲಲ್ಲಿ ಕಾಣಸಿಗುವ ನೀರ ತೊರೆಗಳು ತಮ್ಮ ಮಧ್ಯದ ರಸ್ತೆಗಳಲ್ಲಿ ಸಂಚರಿಸುವವರಿಗೆ ಮುದ ನೀಡುತ್ತಿವೆ. ಗಣಿಗಾರಿಕೆಯ ಹೊಡೆತಕ್ಕೆ ಸಿಕ್ಕರೂ ತಾಲ್ಲೂಕಿನ ನಾಲ್ಕು ಅರಣ್ಯ ವಲಯಗಳಲ್ಲಿ ಅಲ್ಲಲ್ಲಿ ಮುಖ್ಯವಾಗಿ ಗುಡ್ಡಗಳ ತಪ್ಪಲುಗಳಲ್ಲಿ ಹಸಿರ ರಾಶಿಯನ್ನು ಕಾಣಬಹುದಾಗಿದೆ. ಸಂಡೂರು ಯಶವಂತನಗರ ಮಾರ್ಗ ಮಧ್ಯ ಸ್ವಾಮಿಮಲೈ ಅರಣ್ಯ ವಲಯದಲ್ಲಿ 345 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿರುವ ಔಷಧಿ ಸಸ್ಯ ಸಂರಕ್ಷಣಾ ಪ್ರದೇಶ (ಎಂಪಿಸಿಎ)ದಲ್ಲಿನ ವನಸಿರಿ, ಇದರ ಮತ್ತೊಂದು ಬದಿಯಲ್ಲಿನ ರಾಮಘಡ ವಲಯದ ಸಸ್ಯರಾಶಿ ದಾರಿಹೋಕರಿಗೆ ಮುದ ನೀಡುತ್ತಿದೆ.

ತಾಲ್ಲೂಕಿನಲ್ಲಿ ಒಟ್ಟು 30,561.94 ಹೆಕ್ಟೇರ್ ಅರಣ್ಯ ವಲಯವಿದ್ದು, ಇದನ್ನು ಸ್ವಾಮಿಮಲೈ ವಲಯ (6993.13 ಹೆಕ್ಟೇರ್), ದೋಣಿಮಲೈ ವಲಯ (6733.98 ಹೆಕ್ಟೇರ್), ರಾಮಘಡ ವಲಯ (7769.97 ಹೆಕ್ಟೇರ್) ಹಾಗೂ ಈಶಾನ್ಯ ವಲಯ (9064.86 ಹೆಕ್ಟೇರ್) ವೆಂದು ನಾಲ್ಕು ವಲಯಗಳನ್ನಾಗಿ ವಿಂಗಡಿಸಲಾಗಿದೆ.

ಇಲ್ಲಿನ ಅರಣ್ಯದಲ್ಲಿ ಹರಿಯುವ ನೀರಿನ ಝರಿಗಳು, ನಾರಿಹಳ್ಳ ಕಾಡಿನ ಸೊಬಗನ್ನು ಹೆಚ್ಚಿಸಿವೆ. ಕಾಡುಗಳಲ್ಲಿ ಚಿರತೆ, ನವಿಲು, ಕೊಂಡಕುರಿ, ಕಾಡುಹಂದಿ, ಚಿಪ್ಪುಹಂದಿ, ನರಿ, ಮೊಲ ಮುಂತಾದ ಪ್ರಾಣಿ ಪಕ್ಷಿಗಳನ್ನು ಕಾಣಬಹುದು. ಕಬ್ಬಿಣದ ಅದಿರು ಇರುವ ಕಡೆಗಳಲ್ಲಿ ಮಾತ್ರ ಬೆಳೆಯುವ ನಾಗಮಲ್ಲಿಗೆ, ಮಧುನಾಶಿನಿ, ರಕ್ತಚಂದನ, ಜೋತಿಷ್ಪತಿ, ಗೌರಿ ಹೂ, ಈಶ್ವರಿ ಬಳ್ಳಿ, ಮಾಕಳಿ ಬಳ್ಳಿ, ನಾಗದಾಳಿ ಮುಂತಾದ ಔಷಧೀಯ ಸಸ್ಯಗಳು, ನೀಲಕರಂಜಿ ಹೂಗಳನ್ನು ಇಲ್ಲಿನ ಕಾಡುಗಳಲ್ಲಿ ಕಾಣಬಹುದಾಗಿದೆ. ಇಲ್ಲಿನ ಗುಡ್ಡಬೆಟ್ಟಗಳ ತಪ್ಪಲುಗಳಲ್ಲಿ ಶ್ರೀಕುಮಾರಸ್ವಾಮಿ, ಶ್ರೀಹರಿಶಂಕರ, ಭೀಮತೀರ್ಥ, ನವಿಲುಸ್ವಾಮಿ ದೇವಸ್ಥಾನ, ಉಬ್ಬಲಗಂಡಿ ಭೈರವತೀರ್ಥ, ತಿಮ್ಮಪ್ಪನಗುಡಿ‌ ಮುಂತಾದ ಪುರಾಣ ಪ್ರಸಿದ್ಧ ತಾಣಗಳನ್ನು ಕಾಣಬಹುದು.

ಒಟ್ಟಿನಲ್ಲಿ ಇತ್ತೀಚೆಗೆ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಇಲ್ಲಿನ ಅರಣ್ಯದಲ್ಲಿ ಹಸಿರನ್ನು ಉಕ್ಕಿಸಿ, ಅವು ನೋಡುಗರಿಗೆ ಮುದ ನೀಡುವಂತೆ ಪರಿವರ್ತಿಸಿವೆ.

**
ಸಂಡೂರಿನ ಕಾಡುಗಳಲ್ಲಿ ಹಲವು ಔಷಧೀಯ ಸಸ್ಯಗಳನ್ನು ಕಾಣಬಹುದು. ಸಂಡೂರಿನ ಹೆಸರನ್ನೇ ತನ್ನ ಜೊತೆಗೆ ಜೋಡಿಸಿಕೊಂಡಿರುವ ’ಕ್ಲೊಟೊಲೇರಿಯಸ್ ಸಂಡೂರಿಯನ್ಸಸ್’ ಎಂಬ ಸಸ್ಯ ಪ್ರಭೇದವನ್ನು ಸಸ್ಯ ವಿಜ್ಞಾನಿ ಗಣೇಶ್ ಬಾಬು ರಾಮಘಡದಲ್ಲಿ ಗುರುತಿಸಿದ್ದಾರೆ
ಜಿ.ವಿಶ್ವಮೂರ್ತಿ, ಅಧ್ಯಕ್ಷರು, ತಾಲ್ಲೂಕು ಜೀವ ವೈವಿಧ್ಯ ನಿರ್ವಹಣಾ ಸಮಿತಿ, ಸಂಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT