ಕೆಪಿಎಸ್‌ಸಿ: ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

ಶುಕ್ರವಾರ, ಏಪ್ರಿಲ್ 26, 2019
24 °C

ಕೆಪಿಎಸ್‌ಸಿ: ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

Published:
Updated:

ಬೆಂಗಳೂರು: ‘ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಇದೇ ಜನವರಿ 25ರಂದು ಗೆಜೆಟ್‌ನಲ್ಲಿ ಪ್ರಕಟಿಸಿರುವ ಪಟ್ಟಿಯಂತೆ 140 ಅಧಿಕಾರಿಗಳ ಸ್ಥಾನಪಲ್ಲಟಕ್ಕೆ ಸಂಬಂಧಿಸಿದ ಆದೇಶವನ್ನೂ ಇನ್ನೂ ಯಾಕೆ ಹೊರಡಿಸಿಲ್ಲ’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಈ ಕುರಿತಂತೆ ಎಸ್. ಶ್ರೀನಿವಾಸ್ ಸೇರಿದಂತೆ ಒಟ್ಟು ಆರು ಜನರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು, ‘ಹೈಕೋರ್ಟ್ ತೀರ್ಪಿನ ಅನುಸಾರ 91 ಅಭ್ಯರ್ಥಿಗಳ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನದ ಅಂಕಗಳನ್ನು ಪರಿಗಣಿಸಬೇಕಾಗುತ್ತದೆ. ಇದರಿಂದ ಪಟ್ಟಿಯನ್ನು ಪುನಃ ಪರಿಷ್ಕರಣೆ ಮಾಡಬೇಕಾಗುತ್ತದೆ. ಹೀಗಾಗಿ ಇನ್ನೂ ಆದೇಶ ಹೊರಡಿಸಿಲ್ಲ’ ಎಂದು ವಿಳಂಬಕ್ಕೆ ಕಾರಣ ನೀಡಿದರು.

ಇದನ್ನು ಅಲ್ಲಗಳೆದ ಅರ್ಜಿದಾರರ ಪರ ಹಿರಿಯ ವಕೀಲ ಎಂ.ಬಿ.ನರಗುಂದ ಅವರು, ‘2016ರ ಜೂನ್‌ 21ರಂದು ಹೈಕೋರ್ಟ್‌ ನಿರ್ದೇಶನ ಪಾಲನೆಗೆ ಸರ್ಕಾರ ಮೀನಮೇಷ ಎಣಿಸುತ್ತಿದೆ’ ಎಂದು ಆಕ್ಷೇಪಿಸಿದರು.

ಅಡ್ವೊಕೇಟ್‌ ಜನರಲ್ ಅವರ ವಿವರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ‘ನೀವು ಕೋರ್ಟ್‌ ತೀರ್ಪು ಪಾಲಿಸುವ ದಿಸೆಯಲ್ಲಿ ಪ್ರಯತ್ನವನ್ನೇ ಮಾಡಿಲ್ಲ ಅನ್ನಿಸುತ್ತದೆ. ಈ ಮೊದಲು ಆದೇಶ ಹೊರಡಿಸುತ್ತೇವೆ ಎಂದು ಹೇಳಿದ್ದಿರಲ್ಲಾ, ಆಗ ನಿಮಗೆ ಈಗ ಹೇಳುತ್ತಿರುವ ಅಂಶ ನೆನಪಿರಲಿಲ್ಲವೇ’ ಎಂದು ಖಾರವಾಗಿ ಪ್ರಶ್ನಿಸಿದರು.

‘ನಮಗೆ ಯಾವುದೇ ನೆಪ ಹೇಳಬೇಡಿ. ಆದೇಶ ಪ್ರಕಟಿಸುವುದರಿಂದ ಯಾರೂ ಕೆಲಸ ಕಳೆದುಕೊಳ್ಳುವುದಿಲ್ಲ. ಕೆಲವರ ಸ್ಥಾನಪಲ್ಲಟ ಆಗುತ್ತದೆ ಅಷ್ಟೇ. ನೀವು ಹೀಗೆಯೇ ನಡೆದುಕೊಂಡರೆ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನೇ ಕೋರ್ಟ್‌ಗೆ ಕರೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಇದಕ್ಕೆ ಉದಯ ಹೊಳ್ಳ ಅವರು, ‘ಇನ್ನೊಂದು ನಾಲ್ಕೈದು ದಿನಗಳಾದರೂ ಸಮಯ ಕೊಡಿ’ ಎಂದು ಮನವಿ ಮಾಡಿದರು.

ಆದರೆ, ಈ ಮನವಿಯನ್ನು ಸುತರಾಂ ಒಪ್ಪದ ನ್ಯಾಯಪೀಠ, ‘ಈಗಾಗಲೇ ಸಾಕಷ್ಟು ಸಮಯ ಕೊಟ್ಟಾಗಿದೆ. ಬೇಕಿದ್ದರೆ ಮಧ್ಯರಾತ್ರಿಯವರೆಗೂ ಕೆಲಸ ಮಾಡಿ. ಮಂಗಳವಾರದೊಳಗೆ (ಏ.16) ಪಟ್ಟಿ ಸಿದ್ಧಗೊಳಿಸಿ ಕೋರ್ಟ್‌ಗೆ ಸಲ್ಲಿಸಿ’ ಎಂದು ಖಡಕ್‌ ತಾಕೀತು ಮಾಡಿದರು.

ವಿಚಾರಣೆಯನ್ನು ಮಂಗಳವಾರಕ್ಕೆ (ಏ.16) ಮುಂದೂಡಲಾಗಿದೆ.

ಏನಿದು ಅರ್ಜಿ?: ‘ಅನರ್ಹ ಅಭ್ಯರ್ಥಿಗಳನ್ನು ಕೈಬಿಟ್ಟು ಅರ್ಹ ಅಭ್ಯರ್ಥಿಗಳ ನೇಮಕ ಮಾಡಿ ಎಂದು ಹೈಕೋರ್ಟ್ 2016ರ ಜೂನ್‌ 21ರಂದು ಆದೇಶಿಸಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು. ಆದರೂ, ಸರ್ಕಾರ ಕೋರ್ಟ್ ತೀರ್ಪು ಪಾಲಿಸಿಲ್ಲ’ ಎಂಬುದು ಅರ್ಜಿದಾರ ಆಕ್ಷೇಪ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !