ಅರ್ಜಿ ತಿರಸ್ಕಾರಕ್ಕೆ ಹೈಕೋರ್ಟ್ ತಡೆಯಾಜ್ಞೆ

ಶುಕ್ರವಾರ, ಮೇ 24, 2019
32 °C
ಅರಣ್ಯವಾಸಿಗಳು ಕೊಂಚ ನಿರಾಳ

ಅರ್ಜಿ ತಿರಸ್ಕಾರಕ್ಕೆ ಹೈಕೋರ್ಟ್ ತಡೆಯಾಜ್ಞೆ

Published:
Updated:
Prajavani

ಶಿರಸಿ: ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿಗಳಲ್ಲಿ ಅತಿಕ್ರಮಣದಾರರ ಅರ್ಜಿ ತಿರಸ್ಕೃತವಾಗಿರುವ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪ್ರಕರಣ ಇತ್ಯರ್ಥವಾಗುವ ತನಕ ಅರಣ್ಯವಾಸಿಗಳನ್ನು ಅರಣ್ಯ ಪ್ರದೇಶದಿಂದ ಹೊರಹಾಕದಂತೆ ಮಧ್ಯಂತರ ಆದೇಶ ನೀಡಿದೆ ಎಂದು ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ, ವಕೀಲ ಎ.ರವೀಂದ್ರ ನಾಯ್ಕ ತಿಳಿಸಿದ್ದಾರೆ. 

ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ವಿವಿಧ ಉಪ ವಿಭಾಗ ಮತ್ತು ಜಿಲ್ಲಾ ಅರಣ್ಯ ಹಕ್ಕು ಸಮಿತಿಗಳಿಗೆ ಅರಣ್ಯವಾಸಿಗಳು ಸಲ್ಲಿಸಿರುವ ಅರ್ಜಿಗಳನ್ನು ಕಾನೂನಿಗೆ ವ್ಯತಿರಿಕ್ತವಾಗಿ ತಿರಸ್ಕರಿಸಿರುವ ಸಂಬಂಧ ವೇದಿಕೆಯು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಇದರ ಪ್ರಾಥಮಿಕ ವಿಚಾರಣೆ ನಡೆಸಿದ ಹೈಕೋರ್ಟ್‌ನ ಹಂಗಾಮಿ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ, ನ್ಯಾಯಮೂರ್ತಿ ದಿನೇಶಕುಮಾರ್ ಒಳಗೊಂಡ ಪೀಠವು, ಅರ್ಜಿಯ ಎದುರುದಾರರಿಗೆ ನೋಟಿಸ್ ಜಾರಿಗೊಳಿಸಿದೆ ಎಂದು ಅವರು ಹೇಳಿದ್ದಾರೆ.

ರವೀಂದ್ರ ನಾಯ್ಕ ಸಲ್ಲಿಸಿದ ಅರ್ಜಿಗೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಬುಡಕಟ್ಟು ಇಲಾಖೆಗಳನ್ನು ಎದುರದಾರರನ್ನಾಗಿ ಮಾಡಲಾಗಿತ್ತು. ಅರ್ಜಿದಾರರ ಪರವಾಗಿ ವಕೀಲ ಜಯರಾಮ ಸಿದ್ದಿ ವಾದ ಮಂಡಿಸಿದ್ದರು.

ಅರಣ್ಯ ಕಾಯ್ದೆ ಅಡಿಯಲ್ಲಿ ಜಿಲ್ಲೆಯಲ್ಲಿ 87,625 ಅರ್ಜಿ ಸಲ್ಲಿಕೆಯಾಗಿದ್ದು, ಅವುಗಳಲ್ಲಿ 65,220 ಅರ್ಜಿಗಳು ತಿರಸ್ಕಾರಗೊಂಡಿವೆ. ಶೇ 74.43ರಷ್ಟು ಅರ್ಜಿಗಳು ತಿರಸ್ಕಾರವಾಗಿರುವುದರಿಂದ ಅರಣ್ಯವಾಸಿಗಳು ಸಾಮೂಹಿಕವಾಗಿ ಹಕ್ಕಿನಿಂದ ವಂಚಿತರಾಗುತ್ತಾರೆ ಎಂದು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !