ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಪ್ರಭಾವದ ಭಾಷೆ ಅಲ್ಲ, ಅಭಾವದ ಭಾಷೆ

ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರವೀಶ್‌ಕುಮಾರ್ ಅವರಿಗೆ ‘ಗೌರಿ ಪ್ರಶಸ್ತಿ’ ಪ್ರದಾನ
Last Updated 22 ಸೆಪ್ಟೆಂಬರ್ 2019, 19:49 IST
ಅಕ್ಷರ ಗಾತ್ರ

ಬೆಂಗಳೂರು: ‘ಹಿಂದಿ ಪ್ರಭಾವದ ಭಾಷೆ ಅಲ್ಲ, ಆ ಭಾಷಿಕರಿಗೆ ಅದೊಂದು ಅಭಾವದ ಭಾಷೆ’ ಎಂದು ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರವೀಶ್‌ಕುಮಾರ್ ‌ಹೇಳಿದರು.

ಗೌರಿ ಸ್ಮಾರಕ ಟ್ರಸ್ಟ್‌ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಗೌರಿ ಲಂಕೇಶ್‌’ ರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಹಿಂದಿಯಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುವ ಅವಕಾಶ ಇಲ್ಲ, ವ್ಯವಸ್ಥಿತ ವಿಶ್ವವಿದ್ಯಾಲಯಗಳೂ ಇಲ್ಲ. ಉತ್ತರ ಪ್ರದೇಶ ಮತ್ತು ಬಿಹಾರದ ಯುವಜನರು ಉದ್ಯೋಗ ಅರಸಿ ದಕ್ಷಿಣದ ರಾಜ್ಯಗಳಿಗೆ ವಲಸೆ ಬರುತ್ತಿದ್ದಾರೆ. ಹಿಂದಿಯಲ್ಲಿ ಐಎಎಸ್‌, ಐಪಿಎಸ್‌ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹಿಂದಿ ಭಾಷಿಕ ರಾಜ್ಯಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯಲ್ಲೇ 10 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಎಂದರೆ ಅದು ಹೇಗೆ ಎಲ್ಲರ ಭಾಷೆಯಾಗುತ್ತದೆ’ ಎಂದು ಪ್ರಶ್ನಿಸಿದರು.

‘ಹಿಂದಿ ಭಾಷಿಕರು ಕೂಡ ಪ್ರಾದೇಶಿಕ ಭಾಷಿಕರಂತೆ ಶೋಷಿತರು. ಭಾಷೆಗಳ ನಡುವೆ ಸೌಹಾರ್ದಯುತ ಅನುಸಂಧಾನ ಬೆಳೆಸಬೇಕೇ ಹೊರತು, ವೈರತ್ವವನ್ನಲ್ಲ’ ಎಂದರು.

‘ಹಿಂದಿ ಹೆಸರಿನಲ್ಲಿ ಏಕತೆಯ ಭ್ರಮೆಯನ್ನು ಬಿತ್ತುವ ಮತ್ತು ಪ್ರಾದೇಶಿಕ ಭಾಷಿಕರನ್ನು ಹೆದರಿಸುವ ಪ್ರಯತ್ನ ನಡೆಯುತ್ತಿದೆ. ಇದೊಂದು ರಾಜಕೀಯ ಅಸ್ತ್ರವಲ್ಲದೇ ಬೇರೇನೂ ಅಲ್ಲ. ಹಿಂದಿ 200 ವರ್ಷಗಳ ಹಳೆಯ ಭಾಷೆಯಷ್ಟೇ. ಅದಕ್ಕಿಂತ ಮುಂಚೆಯೂ ಭಾರತ ಏಕತೆಯಿಂದ ಇತ್ತು, ಮುಂದೆಯೂ ಇರುತ್ತದೆ’ ಎಂದು ಪ್ರತಿಪಾದಿಸಿದರು.

ಹಿರಿಯ ಪತ್ರಕರ್ತ ಡಿ.ಉಮಾಪತಿ ಅವರ ‘ದೆಹಲಿನೋಟ’ ಹಾಗೂ ವಿನಯಾ ಒಕ್ಕುಂದ ಅವರ ‘ನೀರನಡೆ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

www.gaurilankeshnews.com ವೆಬ್‌ಸೈಟ್‌ಗೆ ಚಾಲನೆ ನೀಡಲಾಯಿತು.

ಕಾಶ್ಮೀರಿಗಳನ್ನು ಅಪ್ಪಿಕೊಳ್ಳುವುದು ಹೇಗೆ’

‘ಕಾಶ್ಮೀರಿಗಳನ್ನು ದೇಶದ ಜನತೆ ಅಪ್ಪಿಕೊಳ್ಳಬೇಕೆಂದು ಪ್ರಧಾನಿ ಹೇಳಿದ್ದಾರೆ. ಆದರೆ, ಅವರನ್ನು ಸಂಪರ್ಕಿಸುವುದಕ್ಕೇ ಅವಕಾಶವೇ ಇಲ್ಲವಾಗಿರುವಾಗ ಅಪ್ಪಿಕೊಳ್ಳುವುದಾದರೂ ಹೇಗೆ’ ಎಂದು ರವೀಶ್‌ಕುಮಾರ್ ಪ್ರಶ್ನಿಸಿದರು.

‘ಮಕ್ಕಳನ್ನು ಅಪ್ಪಿಕೊಳ್ಳಲು ಪೋಷಕರಿಗೇ ಆಗುತ್ತಿಲ್ಲ. ಅಲ್ಲಿನ ಪ್ರಭಾವಿ ನಾಯಕರೇ ನ್ಯಾಯಾಲಯದಿಂದ ಅನುಮತಿ ಪಡೆದು ಕಾಶ್ಮೀರಕ್ಕೆ ಹೋಗಬೇಕಾಗಿರುವುದು ವಿಪರ್ಯಾಸ’ ಎಂದರು.

‘ರಾಷ್ಟ್ರೀಯತೆ, ಏಕ ಸಂಸ್ಕೃತಿ, ಏಕ ಭಾಷೆ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಗ್ಗೊಲೆ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವ ವಿನಾಶದಂಚಿಗೆ ಸಾಗಿದ್ದು, ಇದರಲ್ಲಿ ಮಾಧ್ಯಮಗಳ ಹೊಣೆಗಾರಿಕೆಯೂ ಇದೆ. ವ್ಯವಸ್ಥೆ ವಿರುದ್ಧ ಮಾತನಾಡುವ ಪತ್ರಕರ್ತರ ಕೊಲೆಗಳು ನಡೆಯುತ್ತಿವೆ ಎಂದರೆ ಅದು ಪ್ರಜಾಪ್ರಭುತ್ವದ ಕಗ್ಗೊಲೆ ಅಲ್ಲವೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT