ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ರಂಗಕರ್ಮಿ ಮಾಸ್ಟರ್‌ ಹಿರಣ್ಣಯ್ಯ ವಿಧಿವಶ 

Last Updated 2 ಮೇ 2019, 16:53 IST
ಅಕ್ಷರ ಗಾತ್ರ

ಬೆಂಗಳೂರು: ರಂಗಕರ್ಮಿ, ನಟ ಮಾಸ್ಟರ್‌ ಹಿರಣ್ಣಯ್ಯ(85) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಗುರುವಾರ ವಿಧಿವಶರಾಗಿದ್ದಾರೆ.

ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿಕೆಂಗೇರಿ ಸಮೀಪದ ಬಿಜಿಎಸ್‌ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಪತ್ನಿ ಮತ್ತು ಐವರು ಮಕ್ಕಳನ್ನು ಅವರು ಅಗಲಿದ್ದಾರೆ.

ಹಿರಣ್ಣಯ್ಯನವರು ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ಕೆ. ಹಿರಣ್ಣಯ್ಯನವರು. ಅವರೂ ಕೂಡ ನಟರು. ಕಲ್ಚರ್ಡ್ ಕಮೆಡಿಯನ್ ಎಂದೇ ಖ್ಯಾತರು. ತಾಯಿ ಶಾರದಮ್ಮ. ತಂದೆ ಕೆ. ಹಿರಣ್ಣಯ್ಯನವರು 1940ರಲ್ಲಿ ರಚಿಸಿ, ನಿರ್ದೇಶಿಸಿದ ಚಲನಚಿತ್ರ ‘ವಾಣಿ’ಯಲ್ಲಿ ಬಾಲನಟನಾಗಿ ಅವರು ಪಾದಾರ್ಪಣ ಮಾಡಿದ್ದರು.

ಹಿರಣ್ಣಯ್ಯ ಮಿತ್ರ ಮಂಡಲಿ ಸ್ಥಾಪಿಸಿದ್ದ ಹಿರಣ್ಣಯ್ಯನವರು ‘ಲಂಚಾವತಾರ’ ನಾಟಕ ರಚಿಸಿ ರಂಗ ಪ್ರಯೋಗ ಆರಂಭಿಸಿದ್ದರು. ಅವರಿಗೆ ನಟರತ್ನಾಕರ ಬಿರುದು ಕೂಡ ಪ್ರಾಪ್ತವಾಗಿತ್ತು.

ಹಿರಣ್ಣಯ್ಯನವರ ತಮ್ಮ ನಾಟಗಳಲ್ಲಿ ಸಮಾಜದ ಓರೆಕೋರೆಗಳನ್ನು ತಿದ್ದುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಅದುವೇ ಅವರ ನಾಟಕದ ವಸ್ತುವಿಷಯವೂ ಆಗಿರುತ್ತಿತ್ತು. ಅವರ ನಾಟಕಗಳು ವಿದೇಶದಲ್ಲೂ ಜನಪ್ರಿಯಗೊಂಡಿದ್ದವು.

ನಟರತ್ನಾಕರ, ಕಲಾಗಜಸಿಂಹ, ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ರಂಗಭೂಮಿ ಪ್ರಶಸ್ತಿ, ಗುಬ್ಬಿವೀರಣ್ಣ ಪ್ರಶಸ್ತಿಗಳು ಅವರಿಗೆ ಲಭಿಸಿದ್ದವು. ನೂಜೆರ್ಸಿ, ವಾಷಿಂಗ್‌ಟನ್ ಡಿ.ಸಿ., ಬಾಸ್ಟನ್, ಹೂಸ್ಟನ್, ನೂಯಾರ್ಕ್ ಮುಂತಾದೆಡೆಗಳಿಂದ ಅವರಿಗೆ ಸನ್ಮಾನಗಳು ಅರಸಬಿ ಬಂದಿದ್ದವು.

ನೇರ ನುಡಿಯ ಹಿರಣ್ಣಯ್ಯ ಅವರುವಿಡಂಬನಾತ್ಮಕ ನಾಟಕಗಳು, ಧಾರಾವಾಹಿಗಳಿಗೆ ಹೆಸರುವಾಸಿ. ಅವರ ‘ಲಂಚಾವತಾರ’, ‘ನಡುಬೀದಿ ನಾರಾಯಣ’ ನಾಟಕಗಳು ಮತ್ತು ಎತ್ತಂಗಡಿ ವೆಂಕಟಪ್ಪ ಧಾರಾವಾಹಿಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಂತವು.

ಹಿರಣ್ಣಯ್ಯ ಅವರ ಜನಪ್ರಿಯ ನಾಟಕಗಳು

‘ಮಕ್ಮಲ್ ಟೋಪಿ’, ‘ಕಪಿಮುಷ್ಟಿ’, ‘ದೇವದಾಸಿ’, ‘ನಡುಬೀದಿನಾರಾಯಣ’, ‘ಲಂಚಾವತಾರ’, ‘ಪಶ್ಚಾತ್ತಾಪ’, ‘ಭ್ರಷ್ಟಾಚಾರ’, ‘ಚಪಲಾವತಾರ’, ‘ಡಬ್ಬಲ್ ತಾಳಿ’, ‘ಲಾಟರಿ ಸರ್ಕಾರ’, ‘ಸನ್ಯಾಸಿ ಸಂಸಾರ’, ‘ಸದಾರಮೆ’, ‘ಎಚ್ಚಮ ನಾಯಕ’

ಗಣ್ಯರಿಂದ ಸಂತಾಪ

ಹಿರಣ್ಣಯ್ಯ ನಿಧನಕ್ಕೆ ಸಿಎಂ ಎಚ್‌.ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

‘ಸಮಾಜದ ಪಿಡುಗುಗಳಿಗೆ ವಿಡಂಬನೆಯ ಚುಚ್ಚುಮದ್ದು ನೀಡುವುದು ಹಿರಣ್ಣಯ್ಯ ಅವರ ವೈಶಿಷ್ಟ್ಯವಾಗಿತ್ತು. ಅವರ ನಿಧನದಿಂದ ರಂಗ ಭೂಮಿ ರತ್ನವೊಂದನ್ನು ಕಳೆದುಕೊಂಡಿದೆ,’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT