ಸಿಬಿಐ ತನಿಖೆಗೆ ಏಕೆ ಕೊಡಬಾರದು: ಹೈಕೋರ್ಟ್‌ ಪ್ರಶ್ನೆ

7
ಕೋಟ್ಯಂತರ ಮೌಲ್ಯದ ಎಚ್ಎಂಟಿ ಸ್ಥಿರಾಸ್ತಿ ಮಾರಾಟ ಪ್ರಕರಣ

ಸಿಬಿಐ ತನಿಖೆಗೆ ಏಕೆ ಕೊಡಬಾರದು: ಹೈಕೋರ್ಟ್‌ ಪ್ರಶ್ನೆ

Published:
Updated:
Deccan Herald

ಬೆಂಗಳೂರು: ‘ಜಾಲಹಳ್ಳಿಯ ಎಚ್‌ಎಂಟಿ (ಹಿಂದೂಸ್ಥಾನ್‌ ಮೆಷಿನ್‌ ಟೂಲ್ಸ್‌) ಕಂಪನಿಯ ವಶದಲ್ಲಿದ್ದ 4 ಎಕರೆ 22 ಗುಂಟೆ ಜಮೀನು ಮಾರಾಟ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಎಂಬ ಆಕ್ಷೇಪಣೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬಾರದೇಕೆ’ ಎಂದು ಹೈಕೋರ್ಟ್‌ ಪ್ರಶ್ನಿಸಿದೆ.

ರಾಮಮೂರ್ತಿನಗರದಲ್ಲಿರುವ ಗೋವಿಂದರಾಜುಲು ನಾಯ್ಡು ಪತ್ನಿ ರುಕ್ಮಿಣಿ ಸೇರಿದಂತೆ ಅವರ ಕುಟುಂಬದ ಐವರು ಸದಸ್ಯರು ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ವೇಳೆ ನ್ಯಾಯಮೂರ್ತಿ ವಿನೀತ್ ಕೊಠಾರಿ ಹಾಗೂ ನ್ಯಾಯಮೂರ್ತಿ ಎಸ್‌.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

’ವಿವಾದಿತ ಜಮೀನು ಮಾರಾಟ ಪ್ರಕ್ರಿಯೆಗೆ ಸಂಬಂಧಿಸಿದ ಬ್ಯಾಲೆನ್ಸ್‌ ಶೀಟ್‌ ಹಾಗೂ ಲೆಕ್ಕಪತ್ರಗಳ ಸಂಪೂರ್ಣ ವಿವರವನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸಿ’ ಎಂದು ಎಚ್‌ಎಂಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಖರೀದಿದಾರ ಕಂಪನಿಗೆ ನ್ಯಾಯಪೀಠ ಆದೇಶಿಸಿದೆ.

ಅಸಮಾಧಾನ: ‘ಮಾರಾಟ ಮಾಡಲಾಗಿರುವ ಜಮೀನಿಗೆ ಪರಿಹಾರ ನೀಡಿರುವ ಬಗ್ಗೆ ಎಚ್‌ಎಂಟಿ ಆಗಲಿ ಅಥವಾ ರಕ್ಷಣಾ ಇಲಾಖೆಯಾಗಲಿ ಸರಿಯಾಗಿ ಲೆಕ್ಕ ಇಟ್ಟಿಲ್ಲ’ ಎಂಬ ಅಂಶದ ಬಗ್ಗೆ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಕರಣವೇನು?: ಯಲಹಂಕ ಉತ್ತರ ತಾಲ್ಲೂಕು ಜಾರಕಬಂಡೆ ಕಾವಲ್‌ ಪ್ರದೇಶದ ಸರ್ವೇ ನಂ.21 ಮತ್ತು 22ರಲ್ಲಿ 15 ಎಕರೆ 21 ಗುಂಟೆ ಜಮೀನನ್ನು ಬ್ರಿಟಿಷ್‌ ಸರ್ಕಾರ 1941ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. ಈ ಜಮೀನು ರುಕ್ಮಿಣಿ ಅವರ ಕುಟುಂಬದ ಪೂರ್ವಜರಿಗೆ ಸೇರಿತ್ತು. ಇದರಲ್ಲಿ 4 ಎಕರೆ 20 ಗುಂಟೆಯನ್ನು ಬಳಕೆಯಿಂದ ಉಳಿದ ಜಮೀನು ಎಂದು 1955ರಲ್ಲಿ ಮಾಲೀಕರಿಗೆ ಬಿಟ್ಟುಕೊಡಲಾಗಿತ್ತು. ಉಳಿಸಿಕೊಂಡಿದ್ದ 10 ಎಕರೆ 35 ಗುಂಟೆಯನ್ನು ರಕ್ಷಣಾ ಇಲಾಖೆ ಸುಪರ್ದಿಗೆ ನೀಡಲಾಗಿತ್ತು. ಇದರಲ್ಲಿ 5 ಎಕರೆ 38 ಗುಂಟೆಯನ್ನು 1973ರಲ್ಲಿ ರಕ್ಷಣಾ ಇಲಾಖೆಯು ವಾಯುನೆಲೆ ನಿಲ್ದಾಣದ ಬಳಕೆಗೆ ನೀಡಿತ್ತು.

‘ಉಳಿದ 4 ಎಕರೆ 37 ಗುಂಟೆಯನ್ನು ರಕ್ಷಣಾ ಇಲಾಖೆ ನಮಗೆ ವಾಪಸು ನೀಡಬೇಕಿತ್ತು. ಆದರೆ, ನೀಡಿಲ್ಲ’ ಎಂಬುದು ಅರ್ಜಿದಾರರ ಆಕ್ಷೇಪ. ಈ ಆಕ್ಷೇಪದ ಆಧಾರದಲ್ಲಿ 2007ರಲ್ಲಿ ಕುಟುಂಬದ ಸದಸ್ಯರು ರಿಟ್‌ ಅರ್ಜಿ ಸಲ್ಲಿಸಿದರು. ‘ಇದು ತುಂಬಾ ತಡವಾಗಿ ಸಲ್ಲಿಸಿರುವ ಅರ್ಜಿ ಮತ್ತು ನಿಮ್ಮ ಹಕ್ಕುಗಳೇನಿದ್ದರೂ ಅದನ್ನು ಸಿವಿಲ್‌ ಕೋರ್ಟ್‌ನಲ್ಲಿ ಪ್ರಶ್ನಿಸಿ ಪರಿಹಾರ ಪಡೆಯಿರಿ’ ಎಂದು 2010ರಲ್ಲಿ ಹೈಕೋರ್ಟ್ ಅರ್ಜಿ ವಜಾ ಮಾಡಿತ್ತು. ಈ ಆದೇಶ ಪ್ರಶ್ನಿಸಿದ ಮೇಲ್ಮನವಿ ಈಗ ವಿಚಾರಣೆ ಹಂತದಲ್ಲಿದೆ.

ಏತನ್ಮಧ್ಯೆ ರಕ್ಷಣಾ ಇಲಾಖೆಯು,‘ಇದು ನಮ್ಮ ವಶದಲ್ಲಿಲ್ಲ. ಇದನ್ನು ನಾವು ಎಚ್‌ಎಂಟಿಗೆ ಬಿಟ್ಟುಕೊಟ್ಟಿದ್ದೇವೆ’ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿ ಹಿಂದಕ್ಕೆ ಪಡೆದಿತ್ತು. 

ಅರ್ಜಿದಾರರು ಕೇಳುತ್ತಿರುವ ಜಮೀನನ್ನು, ‘ನಷ್ಟದಲ್ಲಿದ್ದೇನೆ’ ಎಂಬ ಕಾರಣಕ್ಕೆ ಎಚ್‌ಎಂಟಿ 2004ರಲ್ಲಿ ಮೆಸರ್ಸ್‌ ಡಾಲರ್‌ ಕನ್‌ಸ್ಟ್ರಕ್ಷನ್‌ ಅಂಡ್‌ ಎಂಜಿನಿಯರಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ಮಾರಾಟ ಮಾಡಿದೆ.

**

ಪ್ರಭಾವಿ ಸಚಿವರ ಒಳ ಒಪ್ಪಂದ?

‘ಮೆಸರ್ಸ್‌ ಡಾಲರ್‌ ಕನ್‌ಸ್ಟ್ರಕ್ಷನ್‌ ಅಂಡ್‌ ಎಂಜಿನಿಯರಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ಜಮೀನು ಮಾರಾಟ ಮಾಡಿರುವುದರ ಹಿಂದೆ ರಾಜ್ಯ ಸರ್ಕಾರದ ಪ್ರಭಾವಿ ಸಚಿವರೊಬ್ಬರ ಒಳ ಒಪ್ಪಂದವಿದೆ’ ಎನ್ನಲಾಗಿದೆ.

ಈ ಹಿಂದೆ ಈ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳು ಈ ವಿಷಯವನ್ನು ಮೌಖಿಕವಾಗಿ ತೆರೆದ ನ್ಯಾಯಾಲಯದಲ್ಲಿ ಹಲವು ಬಾರಿ ಪ್ರಸ್ತಾಪಿಸಿದ್ದೂ ಉಂಟು.

**

‘ಕಾನೂನು ಬಾಹಿರ ಪ್ರಶ್ನೆಯೇ ಇಲ್ಲ’

‘ಜಮೀನು ಮಾರಾಟ ಮಾಡುವ ಮುನ್ನ ರಾಜ್ಯ ಸರ್ಕಾರದ ಒಪ್ಪಿಗೆ ಪಡೆದಿದ್ದೇವೆ. ಇದರಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ಇಲ್ಲ’ ಎಂಬುದು ಎಚ್‌ಎಂಟಿ ಪರ ವಕೀಲ ಟಿ.ರಾಜಾರಾಂ ಅವರ ಅಭಿಪ್ರಾಯ.

‘ನಮಗೆ ರಕ್ಷಣಾ ಇಲಾಖೆಯಿಂದ ನೀಡಲಾಗಿದ್ದ ಜಮೀನನ್ನು ಮಾರಾಟ ಮಾಡಿದ್ದೇವೆ. ನಾವು ಯಾರ ಜಮೀನನ್ನು ಅತಿಕ್ರಮಣ ಮಾಡಿಲ್ಲ. ಜಮೀನಿನ ಮಾಲೀಕರು ನಮ್ಮನ್ನು ಈ ವಿಷಯದಲ್ಲಿ ಪ್ರಶ್ನಿಸುವ ಪ್ರಮೇಯವೇ ಬರುವುದಿಲ್ಲ’ ಎನ್ನುತ್ತಾರೆ ಅವರು.

’ಪ್ರಕರಣದ ಬಗ್ಗೆ ನನಗೆ ಇನ್ನೂ ಸಂಪೂರ್ಣ ವಿವರ ಸಿಕ್ಕಿಲ್ಲ’ ಎನ್ನುವುದು ರಕ್ಷಣಾ ಇಲಾಖೆ ಪರ ವಾದ ಮಂಡಿಸುತ್ತಿರುವ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ.ನಟರಾಜ್ ಅವರ ಅಭಿಮತ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments: