ಶನಿವಾರ, ಫೆಬ್ರವರಿ 22, 2020
19 °C
ಸಣ್ಣ ಊರಿನಲ್ಲಿ ನಡೆಯುತ್ತಿದೆ ತಿಂಗಳಿಗೆ ಸುಮಾರು ₹1 ಕೋಟಿ ವಹಿವಾಟು

ಹೆಣ್ಣುಮಕ್ಕಳನ್ನು ಗೃಹಕೈಗಾರಿಕೆಗೆ ಪ್ರೋತ್ಸಾಹಿಸಿದ ಹಳ್ಳಿ ಮಹಿಳೆಯ ‘ಅರ್ಥಕ್ರಾಂತಿ’

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Deccan Herald

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಕಲ್ಲೂಡಿ ಎಂಬ ಪುಟ್ಟ ಹಳ್ಳಿಯ ಬಹುತೇಕರು ಮಳೆಯ ಜೂಜಾಟದಿಂದಾಗಿ ಕೃಷಿಯಿಂದ ವಿಮುಖರಾಗಿ ಇವತ್ತು ಹಪ್ಪಳ ಮಾಡುವುದನ್ನೇ ಕಾಯಕ ಮಾಡಿಕೊಂಡು ‘ಸ್ವಾವಲಂಬಿ’ ಬದುಕು ಕಟ್ಟಿಕೊಂಡಿದ್ದಾರೆ. ಎರಡು ಸಾವಿರ ಜನಸಂಖ್ಯೆಯ ಕಲ್ಲೂಡಿಯಲ್ಲಿ ಸದ್ಯ 500ಕ್ಕೂ ಅಧಿಕ ಕುಟುಂಬಗಳಿಗೆ ಹಪ್ಪಳ, ಸಂಡಿಗೆಯೇ ಜೀವನಾಧಾರದ ಮೂಲ.

ಇದರಿಂದ ತಿಂಗಳಿಗೆ ಸುಮಾರು ₹1 ಕೋಟಿ ವಹಿವಾಟು ನಡೆಯುತ್ತಿದೆ. ಕೆಲ ವರ್ಷಗಳ ಹಿಂದಷ್ಟೇ ಇಲ್ಲಿ ತೆರೆದ ಪ್ರಗತಿ ಗ್ರಾಮೀಣ ಬ್ಯಾಂಕ್‌ ಶಾಖೆಯಲ್ಲಿ ಶೇ 80 ರಷ್ಟು ಮಹಿಳಾ ಗ್ರಾಹಕರಿದ್ದಾರೆ. ವಿಶೇಷವೆಂದರೆ ಈ ಶಾಖೆ ಕೋಟಿಗಟ್ಟಲೇ ವಹಿವಾಟಿನಿಂದ ತಾಲ್ಲೂಕಿನಲ್ಲೇ ಮೊದಲ ಸ್ಥಾನದಲ್ಲಿದೆ. ಈ ಅಗಾಧ ಬದಲಾವಣೆಯ ಹಿಂದಿನ ರೂವಾರಿ ಗ್ರಾಮದ ಗಂಗಲಕ್ಷ್ಮಮ್ಮ. ಛೇರ್ಮನ್‌ ಜಯರಾಮೇಗೌಡರ ಸೊಸೆಯಾದ ಗಂಗಲಕ್ಷ್ಮಮ್ಮ ಊರಿನ ಮಹಿಳೆಯರಲ್ಲಿ ಸ್ವಾವಲಂಬನೆಯ ಕನಸು ಬಿತ್ತಿದವರು.

1987ರಲ್ಲಿ ಝಾನ್ಸಿರಾಣಿ ಮಹಿಳಾ ಮಂಡಳಿ, 1989ರಲ್ಲಿ ಜ್ಯೋತಿ ಯುವತಿ ಮಂಡಳಿ ಹುಟ್ಟು ಹಾಕಿ, ಆ ಮೂಲಕ ವಿವಿಧ ಚಟುವಟಿಕೆಗಳಲ್ಲಿ ಮಹಿಳೆಯರು, ಯುವತಿಯನ್ನು ತೊಡಗಿಸಿಕೊಂಡು ಅವರಿಗೆ ಸಂಘಟನಾ ಶಕ್ತಿಯ ಅರಿವು ಮೂಡಿಸಿದರು.

1989ರಲ್ಲಿ ಕಲ್ಲೂಡಿ ಮಂಡಲ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾದ ಗಂಗಲಕ್ಷ್ಮಮ್ಮ ಅವರು ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮದ ಭಾಗವಾದ ‘ಡ್ವಾಕ್ರಾ’ (ಗ್ರಾಮೀಣ ಪ್ರದೇಶದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ) ಯೋಜನೆಯಡಿ ಗೃಹೋಪಯೋಗಿ ಆಹಾರ ಪದಾರ್ಥಗಳ ತಯಾರಿಕೆ ತರಬೇತಿ ಕೊಡಿಸಲು ನಿರ್ಧರಿಸಿದರು.

ಬೆಂಗಳೂರಿನಿಂದ ತರಬೇತುದಾರರನ್ನು ಕರೆಯಿಸಿ ಊರಿನ ಮಹಿಳೆಯರಿಗೆ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಮಸಾಲೆ ಮತ್ತು ಚಟ್ನಿ ಪುಡಿ ತಯಾರಿಸುವ ತರಬೇತಿ ಕೊಡಿಸಿದರು. ಬ್ಯಾಂಕ್‌ಗಳಿಂದ ಗೃಹ ಕೈಗಾರಿಕೆಗೆ ಅಗತ್ಯ ಸಾಲ ಕೊಡಿಸಲು ಶ್ರಮಿಸಿದರು.

ಸದ್ಯ ಕಲ್ಲೂಡಿಯಲ್ಲಿ ಸಿದ್ಧವಾಗುತ್ತಿರುವ 18 ಬಗೆಯ ಉತ್ಪನ್ನಗಳು ರಾಜ್ಯ ವಿವಿಧೆಡೆ, ಹೊರ ರಾಜ್ಯಗಳು ಮಾತ್ರವಲ್ಲದೆ ಅಮೆರಿಕ ಸೇರಿದಂತೆ ಕೆಲ ದೇಶಗಳಿಗೂ ರಫ್ತಾಗುತ್ತಿವೆ. ಈ ಪುಟ್ಟ ಊರು ಕೇಂದ್ರ ಸರ್ಕಾರದ ಗಮನ ಸೆಳೆದಿದೆ. ಇದರಿಂದಾಗಿ ವಿದೇಶಗಳಿಗೆ ಸ್ಥಳೀಯ ಉತ್ಪನ್ನಗಳನ್ನು ರಫ್ತು ಮಾಡುವ ₹9 ಕೋಟಿ ಅಂದಾಜು ವೆಚ್ಚದ ಕೈಗಾರಿಕೆ ಸ್ಥಾಪನೆಗೆ ಜಿಲ್ಲಾ ಕೈಗಾರಿಕಾ ಕೇಂದ್ರ ನೀಲನಕ್ಷೆ ಸಿದ್ಧಪಡಿಸಿದೆ.

ಅನೇಕ ಮಹಿಳಾ ಸ್ವಸಹಾಯ ಸಂಘಗಳ ಸ್ಥಾಪನೆಗೆ ಕಾರಣರಾದ ಗಂಗಲಕ್ಷ್ಮಮ್ಮ ಅವರು 2009ರಲ್ಲಿ ಸಮೃದ್ಧಿ ಮಹಿಳಾ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್ ಹುಟ್ಟು ಹಾಕಿ ಸದ್ಯ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಲ್ಲಿ ಮಹಿಳಾ ಸಹಕಾರಿ ಬ್ಯಾಂಕ್‌ ಪ್ರಾರಂಭಿಸಿದ ಕೀರ್ತಿಗೂ ಅವರು ಪಾತ್ರರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು