ಮಂಗಳವಾರ, ನವೆಂಬರ್ 12, 2019
20 °C
ಉಪಚುನಾವಣೆ ಪ್ರಚಾರಕ್ಕೆ ಹೊಸಕೋಟೆಯಲ್ಲಿ ಚಾಲನೆ

ಮಂಡ್ಯದಂತೆ ಸ್ವಾಭಿಮಾನ ಗೆಲ್ಲಿಸಿ: ಸಿದ್ದರಾಮಯ್ಯ ಮನವಿ

Published:
Updated:
Prajavani

ಬೆಂಗಳೂರು: ‘ಸುಮಲತಾ ಬಳಿ ದುಡ್ಡು ಇತ್ತೇ? ಮಂಡ್ಯದ ಜನ ಸ್ವಾಭಿಮಾನಕ್ಕೋಸ್ಕರ ಅವರನ್ನು ಗೆಲ್ಲಿಸಲಿಲ್ಲವೆ? ಜನ ದುಡ್ಡಿಗೆ ಮತಗಳನ್ನು ಮಾರಿಕೊಂಡರೆ’ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್‌ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ಪರೋಕ್ಷವಾಗಿ ಕುಟುಕಿದರು.

15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅತ್ತ ನವದೆಹಲಿಯಲ್ಲಿ ದಿನಾಂಕ ಘೋಷಣೆ ಮಾಡುವ ಹೊತ್ತಿನಲ್ಲೇ, ಇತ್ತ ಹೊಸಕೋಟೆಯಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಅವರು ಕಾಂಗ್ರೆಸ್‌ನಿಂದ ಗೆದ್ದು, ಈಗ ಅನರ್ಹಗೊಂಡಿರುವ ಎಂ.ಟಿ.ಬಿ. ನಾಗರಾಜ್ ವಿರುದ್ಧ ಕಿಡಿಕಾರಿದರು.

ಸಮಾವೇಶವನ್ನು ಕಹಳೆ ಊದುವ ಮೂಲಕ ಉದ್ಘಾಟಿಸಿದ ಅವರು, ಉಪ ಚುನಾವಣೆ ಪ್ರಚಾರಕ್ಕೂ ಚಾಲನೆ ನೀಡಿದರು. ಅನರ್ಹಗೊಂಡಿರುವ ಶಾಸಕರು ಮತದಾರರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ಮಂಡ್ಯ ಚುನಾವಣೆಯಂತೆ ಈ ಎಲ್ಲ ಕ್ಷೇತ್ರಗಳಲ್ಲಿ ಸ್ವಾಭಿಮಾನ ಗೆಲ್ಲಿಸಲು ಮತದಾರರು ಮುಂದಾಗಬೇಕು ಎಂದು ತಿಳಿಸಿದರು.

‘ದುಡ್ಡು ಖರ್ಚು ಮಾಡಿದರೆ ಗೆಲ್ಲಬಹುದು ಎಂಬ ಭ್ರಮೆಯಲ್ಲಿ ಎಂ.ಟಿ.ಬಿ. ನಾಗರಾಜ್‌ ಇದ್ದಾರೆ. ಹೊಸಕೋಟೆ ಜನರೂ ದುಡ್ಡಿಗೆ ಮತ ಮಾರಿಕೊಳ್ಳುವವರಲ್ಲ. ಬಿಜೆಪಿ, ಜೆಡಿಎಸ್‌ನಿಂದ ಯಾರೇ ಸ್ಪರ್ಧಿಸಿದರೂ ಅವರನ್ನು ಸೋಲಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

‘ನನ್ನನ್ನು ಎದೆಯಲ್ಲಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದೆಯಲ್ಲಯ್ಯ. ಈಗ ಎಲ್ಲಿ ಇಟ್ಟುಕೊಂಡಿದ್ದೀಯಾ ಎಂದು ನಾಗರಾಜ್‌ನನ್ನು ಕೇಳಿದ್ದೆ. ಅದಕ್ಕೆ ಅವನು ಸರಿಯಾದ ಉತ್ತರ ಕೊಡಲಿಲ್ಲ. ಐ.ಟಿ, ಇ.ಡಿ ದಾಳಿ ಮಾಡುತ್ತೇವೆ ಎಂದು ಬಿಜೆಪಿಯವರು ಹೆದರಿಸಿದ್ದರಿಂದ ಅವನು ರಾಜೀನಾಮೆ ಕೊಟ್ಟಿರಬಹುದು’ ಎಂದು ಸಿದ್ದರಾಮಯ್ಯ ಹೇಳಿದರು. 

‘ಯಡಿಯೂರಪ್ಪ ಮೊದಲು 8 ದಿನ, ಆಮೇಲೆ 3 ವರ್ಷ, ಬಳಿಕ 4 ದಿನ ಮುಖ್ಯಮಂತ್ರಿಯಾಗಿದ್ದರು. ಈಗ ಅನೈತಿಕ ಮಾರ್ಗದಲ್ಲಿ ಸರ್ಕಾರ ರಚಿಸಿದ್ದಾರೆ. ಉಪ ಚುನಾವಣೆ ನಂತರ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆ’ ಎಂದು ಅವರು ಹೇಳಿದರು.

‘ಹಣ, ಅಂತಸ್ತು ನೋಡಿ ಟಿಕೆಟ್ ಕೊಡಬೇಡಿ’

'ಕೋಟಿ ಕೋಟಿ ದುಡ್ಡು, ಆಸ್ತಿ, ಅಂತಸ್ತು ನೋಡಿ ಟಿಕೆಟ್ ಕೊಡಬೇಡಿ. ಜನ ದುಡ್ಡು ನೋಡಿ ವೋಟು ಹಾಕುವುದಿಲ್ಲ. ಬಡವರಿಗೆ ಟಿಕೆಟ್‌ ನೀಡಿ’ ಎಂದು ಶಾಸಕ ರಮೇಶ್‌ ಕುಮಾರ್‌ ಪಕ್ಷದ ನಾಯಕರಿಗೆ ಮನವಿ ಮಾಡಿದರು.

‘ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್‌ ನೀಡಿ ಗೆಲ್ಲಿಸಿದ್ದರೆ ಈ ಗತಿ ಬರುತ್ತಿರಲಿಲ್ಲ’ ಎಂದೂ ಹೇಳಿದರು. ‘ನಾಗರಾಜ್‌ರನ್ನು ಅನರ್ಹ ಶಾಸಕ ಎಂದೇ ಕರೆಯುತ್ತಿದ್ದೇವೆ. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರುವುದಿಲ್ಲ’ ಎಂದರು.

ಪರಮೇಶ್ವರ ಗೈರು

‍ಕಾಂಗ್ರೆಸ್‌ ಪಕ್ಷದಲ್ಲಿ ನಾಯಕರ ಮಧ್ಯ ಒಳಜಗಳ ಮುಂದುವರಿದಿದ್ದು, ಹೊಸಕೋಟೆಯಲ್ಲಿ ನಡೆದ ಸಮಾವೇಶದಲ್ಲಿ ಗೈರು ಹಾಜರಾಗುವ ಮೂಲಕ ಶಾಸಕ ಜಿ. ಪರಮೇಶ್ವರ ಅವರು ತಮ್ಮ ಮುನಿಸನ್ನು ಹೊರಹಾಕಿದ್ದಾರೆ ಎಂಬ ಚರ್ಚೆ ಪಕ್ಷದ ವಲಯದಲ್ಲಿ ನಡೆದಿದೆ.

ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಜಿದ್ದಾಜಿದ್ದಿ ನಡೆದಿದ್ದು, ವಲಸಿಗರು– ಮೂಲ ನಿವಾಸಿಗರ ಮಧ್ಯೆ ಕಂದಕ ಬೆಳೆಯುತ್ತಿದೆ.

ಪ್ರತಿಕ್ರಿಯಿಸಿ (+)