ಮಂಗಳವಾರ, ಆಗಸ್ಟ್ 3, 2021
21 °C

ಆಸ್ಟ್ರೇಲಿಯಾ ಬತ್ತಳಿಕೆಗೆ ಹೊಸಕೋಟೆ‌ ಜೆಟ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಂತರಿಕ್ಷ ದಾಳಿಗಳ ತರಬೇತಿಗೆ ಅನುಕೂಲವಾಗಲೆಂದು ಆಸ್ಟ್ರೇಲಿಯಾ ವಾಯುಸೇನೆಯು ಹೊಸಕೋಟೆಯ ‘ಕೈನೆಟಿಕ್ಸ್ ಎಂಜಿನಿಯರಿಂಗ್ ಏರೋಸ್ಪೇಸ್’ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಫಿನಿಕ್ಸ್’ ಜೆಟ್‌ಗಳ ಖರೀದಿಗೆ ಮುಂದಾಗಿದೆ.

₹ 1.5 ಕೋಟಿ ಮೌಲ್ಯದ ಈ ಜೆಟ್, 6 ಸಾವಿರ ಮೀಟರ್ ಎತ್ತರದಲ್ಲಿ ಹಾರುತ್ತದೆ. ತರಬೇತಿ ವೇಳೆ ಮೊದಲು ಲಾಂಚರ್ ಬಳಸಿ ಜೆಟ್ ಹಾರಿಸುವ ಸೈನಿಕರು, ನಂತರ ಯುದ್ಧ ವಿಮಾನಗಳಲ್ಲಿ ಹೋಗಿ ಗುಂಡಿನ ದಾಳಿ ಮೂಲಕ ಅದನ್ನು ನಾಶ ಮಾಡುತ್ತಾರೆ. ಆಸ್ಟ್ರೇಲಿಯಾ ಸೇನೆ ಈ ಕೆಲಸಕ್ಕೆ ಈಗಾಗಲೇ ವಿವಿಧ ಸಂಸ್ಥೆಗಳ ಜೆಟ್‌ಗಳನ್ನು ಬಳಸುತ್ತಿದ್ದು, ಈಗ ಅದರ ಬತ್ತಳಿಕೆಗೆ ‘ಫಿನಿಕ್ಸ್’ ಕೂಡ ಸೇರಿಕೊಳ್ಳಲಿದೆ.

‘66 ಕೆ.ಜಿ ತೂಕದ ಈ ಜೆಟ್‌, ಗಂಟೆಗೆ 600 ಕಿ.ಮೀ ವೇಗದಲ್ಲಿ ಸಾಗುತ್ತದೆ. ಇದರ ಮೂತಿಗೆ ‘ಎಂಡಿಎಸ್’ ಉಪಕರಣ ಅಳವಡಿಸಲಾಗಿದೆ. ಸೈನಿಕರು ಹಾರಿಸಿದ ಗುಂಡು ಜೆಟ್‌ನಿಂದ ಎಷ್ಟು ಅಂತರದಲ್ಲಿ ಹಾದು ಹೋಯಿತು (ಮಿಸ್ ಫೈರ್ ಆದರೆ) ಎಂಬುದು, ‘ಎಂಡಿಎಸ್‌’ನಲ್ಲಿ ದಾಖಲಾಗುತ್ತದೆ. ಈ ತಂತ್ರಜ್ಞಾನ ಬೇರೆ ಯಾವ ಯುಎವಿಗಳಲ್ಲೂ ಇಲ್ಲ’ ಎಂದು ‘ಕೈನೆಟಿಕ್ಸ್’ ಸಿಇಒ ಸಂದೀಪ್ ಹೇಳಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಹೊಸಕೋಟೆಯಲ್ಲಿ 10 ಎಕರೆ ವಿಸ್ತೀರ್ಣದಲ್ಲಿ ಮಾನವ ರಹಿತ ವಾಹನಗಳ (ಯುಎವಿ) ತಯಾರಿಕಾ ಘಟಕ ಹೊಂದಿದ್ದೇವೆ. ಸೇನಾ ತರಬೇತಿಗೆಂದೇ ಈ ಜೆಟ್ ಸಿದ್ಧಪಡಿಸಿದ್ದೇವೆ. ಅದರ ಖರೀದಿಗೆ ಆಸ್ಟ್ರೇಲಿಯಾ ಮುಂದಾಗಿರುವುದು ಖುಷಿ ಕೊಟ್ಟಿದೆ’ ಎಂದು ತಿಳಿಸಿದರು.

‘ತರಬೇತಿಗೆ ಸದ್ಯ ₹ 2.5 ಕೋಟಿ ಮೌಲ್ಯದ ಯುಎವಿ ಬಳಸುತ್ತಿದ್ದೇವೆ. ಒಂದು ಗುಂಡು ತಗುಲಿದರೂ ಅದರ ಆಯಸ್ಸು ಮುಗಿದು ಹೋಗುತ್ತದೆ. ಆದರೆ, ಫಿನಿಕ್ಸ್ ಒಂದೇ ಗುಂಡಿಗೆ ಬಗ್ಗುವಂತದ್ದಲ್ಲ. ಹೀಗಾಗಿ, ಒಂದೇ ಯುಎವಿಯಲ್ಲಿ ಹೆಚ್ಚು ತರಬೇತಿ ಕೊಡುವ ಹಾಗೂ ವೆಚ್ಚ ತಗ್ಗಿಸುವ ಉದ್ದೇಶಗಳಿಂದ ‘ಕೈನೆಟಿಕ್ಸ್’ ಜತೆ ವ್ಯವಹರಿಸುತ್ತಿದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ಆಸ್ಟ್ರೇಲಿಯಾ
ಸೇನೆಯ ಅಧಿಕಾರಿಯೊಬ್ಬರು ಹೇಳಿದರು.

ವಿಪತ್ತಿಗೆ ‘ಟ್ಯಾಕ್ಟಿಕಲ್’
ಪ್ರವಾಹ, ಭೂಕುಸಿತ ಸೇರಿದಂತೆ ವಿಪತ್ತು ಸಂದರ್ಭಗಳಲ್ಲಿ ಸಂತ್ರಸ್ತರ ನ್ನು ಹುಡುಕಲು ಇದೇ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಸೋಲಾರ್’ ಹಾಗೂ ‘ಟ್ಯಾಕ್ಟಿಕಲ್’ ಯುಎವಿಗಳು, ‘ಏರೋ ಇಂಡಿಯಾ’ ಪ್ರದರ್ಶನದಲ್ಲಿ ಆಕರ್ಷಣೆಯ ಕೇಂದ್ರಗಳಾಗಿವೆ.

‘ದುರಂತ ಸಂಭವಿಸಿದ ಎಲ್ಲ ಸ್ಥಳಗಳಿಗೂ ರಕ್ಷಣಾ ಸಿಬ್ಬಂದಿ ಹೋಗಲು ಸಾಧ್ಯ ವಿಲ್ಲ. ಆಗ ಯುಎವಿಗಳು ನೆರವಾಗುತ್ತವೆ. ಸಂತ್ರಸ್ತರ ಗುರುತು ಪತ್ತೆಗೆ ಮಾತ್ರವಲ್ಲದೆ, ವನ್ಯಜೀವಿಗಳ ಸಮೀ ಕ್ಷೆಗೂ ಇವು ನೆರವಾಗುತ್ತವೆ’ ಎಂದು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ವೆಂಕಟೇಶ್ವರ್ ರೆಡ್ಡಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು