ಆದಿವಾಸಿಗಳ ಕಥೆ–ವ್ಯಥೆ: ಮಾನವೀಯತೆಯ ಕಗ್ಗೊಲೆ

ಮಂಗಳವಾರ, ಏಪ್ರಿಲ್ 23, 2019
31 °C
ತ್ರಿಶಂಕು ಸ್ಥಿತಿಯಲ್ಲಿ ಆದಿವಾಸಿಗಳು: ಪ್ರಾಣಿಗಳಿಗಿಂತ ದಯನೀಯ ಬದುಕು

ಆದಿವಾಸಿಗಳ ಕಥೆ–ವ್ಯಥೆ: ಮಾನವೀಯತೆಯ ಕಗ್ಗೊಲೆ

Published:
Updated:
Prajavani

ಮೈಸೂರು: ತಲೆಮಾರುಗಳಿಂದ ಬದುಕು ಕಟ್ಟಿಕೊಂಡು ಸರ್ಕಾರ ಸೇರಿದಂತೆ ಯಾರ ಗೊಡವೆ ಇಲ್ಲದೆ ನೆಮ್ಮದಿಯಾಗಿ ಬದುಕುತ್ತಿದ್ದ ಆದಿವಾಸಿಗಳನ್ನು ಬೀದಿಗೆ ಬಿಸಾಕಿರುವ ನೀತಿಗಳು ಹಾಗೂ 'ಸಾಮ್ರಾಜ್ಯಶಾಹಿ ವ್ಯವಸ್ಥೆ'ಯು ಮಾನವೀಯತೆಯನ್ನು ಅಕ್ಷರಶಃ ಕಗ್ಗೊಲೆ ಮಾಡುತ್ತಿವೆ.

ಕಾಡು ಹಾಗೂ ಕಾಡಿನಂಚಿನಲ್ಲಿ ವಾಸಿಸುತ್ತಿರುವ 12 ಪಾರಂಪರಿಕ ಬುಡಕಟ್ಟು ಸಮುದಾಯಗಳ ಮೇಲೆ ಸರ್ಕಾರಿ ವ್ಯವಸ್ಥೆಯ ಕ್ರೂರ ದೃಷ್ಟಿ ಬಿದ್ದಿದೆ. ಸಮಾಜದ ಮುಖ್ಯವಾಹಿನಿಗೆ ತರುವ ನೆಪದಲ್ಲಿ ಕಾಡುಪ್ರಾಣಿಗಳಿಗಿಂತ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ಅರಣ್ಯ, ವನ್ಯಜೀವಿಗಳಿರುವ ರಕ್ಷಣೆಯೂ ಮೂಲ ನಿವಾಸಿ ಆದಿವಾಸಿಗಳಿಗೆ ಇಲ್ಲವಾಗಿದೆ. ದನಿ ಎತ್ತಿದರೆ ನಕ್ಸಲ್‌ ಎಂಬ ಹಣೆಪಟ್ಟಿ ಕಟ್ಟುವ ಷಡ್ಯಂತ್ರವೂ ನಡೆಯುತ್ತಿದೆ.

ಗೆಡ್ಡೆಗೆಣಸು, ಅರಣ್ಯ ಉತ್ಪನ್ನ ತಿಂದು ಗಟ್ಟಿಮುಟ್ಟಾಗಿದ್ದವರನ್ನು ಹೊರಗೆಳೆದು ಸಣಕಲು ಮಾಡಿ ಪೌಷ್ಟಿಕ ಆಹಾರ ನೀಡುವ ಪರಿಸ್ಥಿತಿಯನ್ನು ಸರ್ಕಾರಗಳೇ ಸೃಷ್ಟಿವೆ. ಕಲ್ಯಾಣದ ಹೆಸರಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಐದು ವರ್ಷಗಳಲ್ಲಿ ₹ 1.04 ಲಕ್ಷ ಕೋಟಿ ಖರ್ಚು ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ನಿರ್ದಿಷ್ಟವಾಗಿ ಆದಿವಾಸಿ ಸಮುದಾಯಕ್ಕೆ ಎಷ್ಟು ಖರ್ಚು ಮಾಡಿದ್ದೀರಿ ಎಂಬುದಕ್ಕೆ ಮಾತ್ರ ಲೆಕ್ಕ ಸಿಗುತ್ತಿಲ್ಲ! ಆದಿವಾಸಿಗಳು ಮಾತ್ರ ಕೆಲವೆಡೆ ರಸ್ತೆ, ವಿದ್ಯುತ್‌ ಇಲ್ಲದೆ ಚಿಮಿಣಿ ದೀಪದ ಬೆಳಕಿನಲ್ಲೇ ಬದುಕುತ್ತಿದ್ದಾರೆ.

‘ಸ್ವಾಮಿ, ನೀವು (ಸರ್ಕಾರ) ನಮ್ಮ ಕಣ್ಣಿಗೆ ಬೀಳದಿದ್ದರೆ ಸಾಕು ಹೇಗೊ ಬದುಕು ಕಟ್ಟಿಕೊಂಡು ಹೋಗುತ್ತೇವೆ. ಗೆಡ್ಡೆ ಗೆಣಸು ತಿಂದು ಹಿಂದಿನಂತೆ ನೆಮ್ಮದಿಯಾಗಿ ಬದುಕುತ್ತೇವೆ. ಎಂಟು ಪೀಳಿಗೆಗಳು ಹೀಗೇ ಬದುಕಿವೆ. ನಿಮ್ಮ ಮಾತೂ ಬೇಡ, ಹಣವೂ ಬೇಡ, ಅಕ್ಕಿಯೂ ಬೇಡ. ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ’ ಎಂಬ ಆರ್ತನಾದ ಕಾಡಿನೊಳಗಿನಿಂದ ಕೇಳಿಬರುತ್ತಿದೆ.

‘ಗುಂಡ್ರೆ ಕಾಡಿನಲ್ಲಿ ಮರಗಳನ್ನು ನೆಟ್ಟಿದ್ದು ನಮ್ಮ ಅಜ್ಜ. ದನಕರುಗಳ ಬಾಯಿಗೆ ಬೀಳದ ಹಾಗೆ ಬೆಳೆಸಿದ್ದು ನಾನು. ನಮ್ಮನ್ನೇ ಹೊರಗಟ್ಟಲಾಗಿದೆ. ಕಾಡು ನಮ್ಮ ಆಸ್ತಿ. ನಮಗೆ ಬಿಟ್ಟು ಕೊಡಿ’ ಎಂದು ಅಧಿಕಾರಯುತವಾಗಿ ಕೇಳುವ ಎಚ್.ಡಿ.ಕೋಟೆ ತಾಲ್ಲೂಕಿನ ಎನ್.ಬೇಗೂರಿನ ನಿವಾಸಿ ಪುಟ್ಟಮ್ಮ ಅವರ ಮನಸ್ಸಿನಲ್ಲಿರುವುದು ನಿಷ್ಕಲ್ಮಶ ಮನವಿ.

ಎನ್.ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 24 ಆದಿವಾಸಿ ಹಾಡಿಗಳ ಜನರಿಗೆ ಕಣ್ಮುಂದೆಯೇ ಕಬಿನಿ ಹಿನ್ನೀರು ಇದ್ದರೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕೆಲ ಪುನರ್ವಸತಿ ಕೇಂದ್ರಗಳನ್ನು ನೋಡಿದರೆ ಕಲ್ಲು ಮನಸ್ಸುಗಳು ಕೂಡ ಕರಗಬಹುದು. ಅದಕ್ಕೊಂದು ಉದಾಹರಣೆ ಸೋನಹಳ್ಳಿ ಹಾಡಿ. ಅವರನ್ನು ಈ ಪರಿಸ್ಥಿತಿಗೆ ತಳ್ಳಿದವರನ್ನು ತಲೆಯಲ್ಲಿ ಮಿದುಳು, ಎದೆಯಲ್ಲಿ ಹೃದಯ ಇರುವ ಯಾವುದೇ ಸಮಾಜ ಕ್ಷಮಿಸಲಾರದು. ಆದಿವಾಸಿಗಳಿಗೆ ಸಿಗಬೇಕಾದ ಹಕ್ಕನ್ನು ಸರ್ಕಾರವೇ ಕಸಿದುಕೊಳ್ಳುತ್ತಿದೆ. ಕೊಡಗು ಜಿಲ್ಲೆಯ ದಿಡ್ಡಳ್ಳಿ ಆದಿವಾಸಿಗಳನ್ನು ನಡೆಸಿಕೊಂಡ ಪ್ರಕರಣವೇ ಅದಕ್ಕೊಂದು ಸಾಕ್ಷಿ.

ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ರಾಮನಗರ ಜಿಲ್ಲೆಗಳ 32 ತಾಲ್ಲೂಕುಗಳಲ್ಲಿನ ಅರಣ್ಯ ಪ್ರದೇಶ ಹಾಗೂ ಅರಣ್ಯದಂಚಿನ ಗ್ರಾಮಗಳಲ್ಲಿ ಸುಮಾರು ಎರಡು ಲಕ್ಷ ಆದಿವಾಸಿಗಳು ವಾಸಿಸುತ್ತಿದ್ದಾರೆ. ‌ಒಂದು ಹಂತದವರೆಗೆ ಇವರ ಬದುಕು ಚೆನ್ನಾಗಿಯೇ ಇತ್ತು. ಸಣ್ಣಪುಟ್ಟ ಕೃಷಿ ಮಾಡಿಕೊಂಡು, ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಜೀವನ ಕಟ್ಟಿಕೊಂಡಿದ್ದರು.

ಆದರೆ, 1927ರಲ್ಲಿ ಜಾರಿಗೆ ಬಂದ ಅರಣ್ಯ ಕಾಯ್ದೆ, 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಬಳಿಕ ನೀರಿನಿಂದ ಹೊರಹಾಕಿದ ಮೀನಿನ ಪರಿಸ್ಥಿತಿಯಂತಾಯಿತು. ಸುರಕ್ಷಿತ ಅರಣ್ಯ, ಅಭಯಾರಣ್ಯ, ವನ್ಯಧಾಮ, ರಾಷ್ಟ್ರೀಯ ಉದ್ಯಾನದ ಹೆಸರಿ ನಲ್ಲಿ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ಆರಂಭ ಆಯಿತು. ನಾಗರ ಹೊಳೆ, ಬಂಡೀಪುರ, ಬಿಳಿಗಿರಿ ರಂಗನ ಬೆಟ್ಟ, ಕಾಳಿ, ಭದ್ರಾ ಹುಲಿ ಸಂರಕ್ಷಿತ ಪ್ರದೇಶ, ಮಲೆಮಹದೇಶ್ವರ ಬೆಟ್ಟ ವನ್ಯಧಾಮ, ಕುದುರೆಮುಖ ರಾಷ್ಟ್ರೀಯ ಉದ್ಯಾನ, ಪಶ್ಚಿಮ ಘಟ್ಟದ ರಕ್ಷಣೆ ಹೆಸರಿನಲ್ಲಿ ಕಾಡಿನಿಂದ ಹೊರದಬ್ಬುವ ಕೆಲಸ ನಡೆಯುತ್ತಲೇ ಇದೆ.

ಅರಣ್ಯ ಒತ್ತುವರಿ ಮಾಡಿ ಕೊಂಡು ಕಾಫಿ ತೋಟ ವಿಸ್ತರಿಸಿ ಕೊಂಡವರು, ಅರಣ್ಯದಲ್ಲೇ ರೆಸಾರ್ಟ್‌ ಕಟ್ಟಿಕೊಂಡು ಆದಾಯ ಗಳಿಸುವವರು, ಮರಗಳನ್ನು ಕತ್ತರಿಸಿ ಕದ್ದು ಸಾಗಿಸುವವರು, ವನ್ಯಜೀವಿ ಬೇಟೆಯಾಡುವವರನ್ನು ತಡೆಯು ವವರೇ ಇಲ್ಲ.

ಗಣಿಗಾರಿಕೆ, ಕೈಗಾರಿಕೆಗಳ ಸ್ಥಾಪನೆ, ವಿದ್ಯುತ್‌ ಸ್ಥಾವರ, ಅಣೆಕಟ್ಟು, ರಸ್ತೆ, ರೈಲು ಮಾರ್ಗಕ್ಕೆ ಜಾಗ ಬಳಸಿಕೊಳ್ಳುವವರನ್ನು ಕೇಳುವವರೇ ಇಲ್ಲ. ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಲೇ ಇದೆ. ಕಣ್ಣು ಬೀಳುವುದು ಮಾತ್ರ ಕಾಡಿನ ಮೂಲ ನಿವಾಸಿಗಳಾದ ಆದಿವಾಸಿಗಳ ಮೇಲೆಯೇ. ಎಲ್ಲಿ ಗಿರಿಜನರು ಇಲ್ಲವೋ ಅಲ್ಲಿ ಕಾಳ್ಗಿಚ್ಚು ಕಾಣಿಸಿಕೊಳ್ಳುತ್ತಿದೆ.

‘ಅರಣ್ಯಾಧಿಕಾರಿಗಳ ಅಕ್ರಮ ಚಟುವಟಿಕೆಗಳಿಗೆ ಹಾದಿ ಸುಗಮವಾಗಲೆಂದೇ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ’. ಎಂದು ಆದಿವಾಸಿಗಳ ಮುಖಂಡರು ಹೇಳುತ್ತಾರೆ.

ಕೇಂದ್ರ, ರಾಜ್ಯ ಸರ್ಕಾರದ ನೀತಿಗಳು, ನ್ಯಾಯಾಲಯ ಗಳ ಆದೇಶಗಳು, ಕಂದಾಯ, ಅರಣ್ಯ ಇಲಾಖೆ, ಖಾಸಗಿ ಕಂಪನಿಗಳ ಲಾಬಿಗಳು, ಮಧ್ಯವರ್ತಿಗಳು ಬುಡಕಟ್ಟು ಜನರನ್ನು ತ್ರಿಶಂಕು ಸ್ಥಿತಿಗೆ ದೂಡಿವೆ.

ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ಹೆಸರಿನಲ್ಲಿ ನಿತ್ಯ ಹಿಂಸೆ ನೀಡಲಾಗುತ್ತಿದೆ. ಹಾಡಿಗಳಲ್ಲಿ ಮದ್ಯ ಮಾರಾಟ ಯಥೇಚ್ಛವಾಗಿದೆ. ತರಕಾರಿ ಬುಟ್ಟಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ, ವ್ಯಸನಿಗಳಾಗಿರುವ ಅವರ ಬದುಕು ಅವನತಿ ಅಂಚಿನಲ್ಲಿದೆ.

ಗಿರಿಜನ ಮಕ್ಕಳ ವಿದ್ಯಾಭ್ಯಾಸಕ್ಕೆ ಆಶ್ರಮ, ಏಕಲವ್ಯ ಶಾಲೆಗಳೇ ಗತಿ. ಆದರೆ, ಆ ಶಾಲೆಗಳ ಪರಿಸ್ಥಿತಿ ದನದ ಕೊಟ್ಟಿಗೆಗಳಾಗಿ ಮುಚ್ಚುವ ಹಂತದಲ್ಲಿವೆ. ಶಿಕ್ಷಕರ ನೇಮ ಕಾತಿಯೇ ನಡೆದಿಲ್ಲ. ಶಿಕ್ಷಕರೆಲ್ಲಾ ಪಿಯುಸಿ ಓದಿ ಗುತ್ತಿಗೆ ಕೆಲಸಕ್ಕೆ ಸೇರಿದವರು. ಡಿ.ಎಡ್‌, ಬಿ.ಎಡ್‌ ಮಾಡಿದ ಯುವಕರು ಕೆಲಸ ಸಿಗದೆ ಕೊಡಗಿನ ಕಾಫಿ ತೋಟ ಸೇರಿಕೊಂಡಿದ್ದಾರೆ.

ಬುಡಕಟ್ಟು ಉಪಯೋಜನೆಗೆ (ಟಿಎಸ್‌ಪಿ) ಬಜೆಟ್‌ನಲ್ಲಿ ಮೀಸಲಿಟ್ಟ ಹಣ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ಖರ್ಚಾಗದೇ ವಾಪಸ್‌ ಹೋಗುತ್ತಿದೆ. ಕೇಂದ್ರದ ಅರಣ್ಯ ಅಭಿವೃದ್ಧಿ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರದ (ಸಿಎಎಂಪಿಎ) ಬಳಿ ಇರುವ ₹ 55 ಸಾವಿರ ಕೋಟಿ ಬಳಕೆ ಆಗಿಲ್ಲ. ಇದನ್ನು ಪುನರ್ವಸತಿ ಉದ್ದೇಶಕ್ಕೂ ಬಳಕೆ ಮಾಡಬಹುದು. 2018ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಬಜೆಟ್‌ನಲ್ಲಿ ₹ 300 ಕೋಟಿ ಮೀಸಲಿಟ್ಟಿದ್ದರು.

2017–18ರಲ್ಲಿ ಆದಿವಾಸಿಗಳಿರುವ 9 ಜಿಲ್ಲೆಗಳಿಗೆ ತಲಾ ₹ 10 ಕೋಟಿ ಅನುದಾನ ನೀಡಲಾಯಿತು. ಬಿಲ್ ಆಗಿದ್ದು ಆದಿವಾಸಿಗಳ ಹೆಸರಿನಲ್ಲಿ. ರಸ್ತೆ ನಿರ್ಮಾಣವಾಗಿದ್ದು ಮತ್ತೊಂದೆಡೆ! ಪರಿಶಿಷ್ಟ ಪಂಗಡಕ್ಕೆಂದು ಮೀಸಲಿಡುವ ಹೆಚ್ಚಿನ ಹಣ ಸಮುದಾಯದಲ್ಲಿರುವ ಬಲಾಢ್ಯರ ಪಾಲಾಗುತ್ತಿದೆ ಎಂಬುದು ಆದಿವಾಸಿ ಮುಖಂಡರ ದೂರು.

ತೀರ್ಪು ತಂದ ಸಂಕಟ
ಅರಣ್ಯವಾಸಿಗಳು ಶತಮಾನಗಳಿಂದ ಅನುಭವಿಸಿಕೊಂಡು ಬಂದ ಚಾರಿತ್ರಿಕ ಅನ್ಯಾಯಗಳನ್ನು ಸರಿಪಡಿಸುವ ಉದ್ದೇಶದಿಂದ 2006ರಲ್ಲಿ ಅರಣ್ಯ ಹಕ್ಕುಗಳ ಕಾಯ್ದೆ ಜಾರಿ ಮಾಡಲಾಯಿತು. ಆದಿವಾಸಿಗಳ ಬದುಕಿನಲ್ಲಿ ಕೆಲ ಬದಲಾವಣೆ ತರಬಲ್ಲದು ಎಂಬ ಆಶಾವಾದ ಹುಟ್ಟಿಸಿತ್ತು. ಆದರೆ, ಕಾಯ್ದೆಯಲ್ಲಿರುವ ಕೆಲ ಗೊಂದಲ ಅವರಲ್ಲಿ ನಿರಾಸೆ ಉಂಟು ಮಾಡಿದೆ. ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪು ಸಂಕಷ್ಟದ ಮೇಲೆ ಬರೆ ಎಳೆದಿದೆ.

ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ‘ಅರಣ್ಯವಾಸಿಗಳು’ ಎಂದು ಹಕ್ಕು ಮಂಡಿಸಿ ಅದು ತಿರಸ್ಕೃತವಾಗಿರುವ ಎಲ್ಲರನ್ನೂ ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸಬೇಕೆಂದು ಹೇಳಿತು. ಆ ತೀರ್ಪು ಪ್ರಶ್ನಿಸಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಸಲ್ಲಿಸಿದ್ದ ಮೇಲ್ಮನವಿ ಪರಿಗಣಿಸಿ ಹಿಂದಿನ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ‘ನೀವು ನಿದ್ದೆ ಮಾಡುತ್ತಿದ್ದಿರೇನು? ಈ ಹಿಂದೆ ಆದೇಶ ಹೊರಡಿಸಿದಾಗ ಎಲ್ಲಿದ್ದಿರಿ? ನಿದ್ದೆಯಲ್ಲಿದ್ದು ಈಗ ಎದ್ದು ಬಂದು ತಿದ್ದುಪಡಿ ಕೋರುತ್ತೀರಿ. ಈಗ ಎಚ್ಚರವಾಗಿದೆಯೇ’ ಎಂದು ನ್ಯಾಯಾಲಯವು ಚಾಟಿ ಬೀಸಿರುವುದು ಆಳುವ ಸರ್ಕಾರಗಳ ಉದಾಸೀನ ಮನೋಭಾವಕ್ಕೆ ಸಾಕ್ಷಿ.

ಪ್ಯಾಕೇಜ್‌ನೊಳಗೇ ವಂಚನೆ
ಕಾಡಿನಿಂದ ಸ್ಥಳಾಂತರವಾಗುವ ಪ್ರತಿ ಕುಟುಂಬಕ್ಕೆ ಕೇಂದ್ರ– ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ₹ 15 ಲಕ್ಷ ಮೊತ್ತದ ಪುನರ್ವಸತಿ ಪ್ಯಾಕೇಜ್‌ ನೀಡಲಾಗುತ್ತಿದೆ.

ಆದರೆ, ಪಾಳುಬಿದ್ದ ಭೂಮಿ ನೀಡಿ ₹ 6 ಲಕ್ಷ ಪೀಕುತ್ತಾರೆ. ಯಾವುದೇ ಸಮಯದಲ್ಲಿ ಮುರಿದು ಬೀಳಬಹುದಾದ ಮೂರು ವಿದ್ಯುತ್ ಕಂಬ ನೆಟ್ಟು ₹ 1 ಲಕ್ಷ ಬಿಲ್‌ ಹಾಕುತ್ತಾರೆ. ತಿಂಗಳಲ್ಲಿ ಕಿತ್ತು ಬರುವ 300 ಮೀಟರ್‌ ರಸ್ತೆ ನಿರ್ಮಿಸಿ ₹ 1 ಲಕ್ಷ ಖರ್ಚು ತೋರಿಸುತ್ತಾರೆ. ಸ್ವಚ್ಛ ಭಾರತ ಯೋಜನೆಯಡಿ ಉಚಿತವಾಗಿ ಶೌಚಾಲಯ ನಿರ್ಮಿಸಿಕೊಡುತ್ತಿದ್ದರೆ ಇಲ್ಲಿ ಮಾತ್ರ ₹ 30 ಸಾವಿರ ಕೇಳುತ್ತಾರೆ. ಮಳೆಗಾಲದಲ್ಲಿ ಸೋರುವಂಥ ಮನೆ ನಿರ್ಮಾಣಕ್ಕಾಗಿ ₹ 50 ಸಾವಿರ ತೆರಬೇಕು. ಇನ್ನುಳಿದ ಖರ್ಚು ಕಳೆದು ₹ 2 ಲಕ್ಷ ಠೇವಣಿ ಇಡುತ್ತಾರೆ. ಕೈಗೆ ₹ 75 ಸಾವಿರ ಕೊಡುತ್ತಾರೆ. ವಿದ್ಯುತ್‌ ಉಚಿತವೆಂದು ಹೇಳಿ ಬಿಲ್‌ ಕಟ್ಟಿಸಿಕೊಳ್ಳಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲ.

ಪುನರ್ವಸತಿ ಪ್ಯಾಕೇಜ್‌ನಡಿ ಬಂದವರ ಭವಿಷ್ಯದ ಪಾಡೇನು? ಕೂಲಿ ಇಲ್ಲದೆ ಕಾಸೂ ಇಲ್ಲ. ಅದಕ್ಕೊಂದು ಉದಾಹರಣೆ ಎಚ್‌.ಡಿ.ಕೋಟೆ ತಾಲ್ಲೂಕಿನ ಮಾಸ್ತಿಗುಡಿ ಪುನರ್ವಸತಿ ಕೇಂದ್ರ. ಈ ಕೇಂದ್ರದ ಬಹುತೇಕರು ಕೂಲಿಗೆಂದು ಕೊಡಗಿನ ಕಾಫಿ ತೋಟಗಳಿಗೆ ವಲಸೆ ಹೋಗಿದ್ದಾರೆ. ವೃದ್ಧರು, ಮಕ್ಕಳಷ್ಟೇ ಮನೆಗಳಲ್ಲಿ ಉಳಿದಿದ್ದಾರೆ. ಬಹುತೇಕ ಪುನರ್ವಸತಿ ಕೇಂದ್ರಗಳ ವಾಸ್ತವ ಚಿತ್ರಣವಿದು.

ಆದಿವಾಸಿಗಳಿಗೆ ರಾಜಕೀಯವಾಗಿಯೂ ಪ್ರಾತಿನಿಧ್ಯ ಸಿಗುತ್ತಿಲ್ಲ. ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ 15 ವಿಧಾನಸಭಾ ಕ್ಷೇತ್ರಗಳಿವೆ. ಅದರಲ್ಲಿ ಆದಿವಾಸಿ ಮುಖಂಡರಿಗೆ ಟಿಕೆಟ್‌ ಲಭಿಸಿಲ್ಲ. ತಾಲ್ಲೂಕು ಪಂಚಾ ಯಿತಿ ಚುನಾವಣೆಗೆ ಟಿಕೆಟ್‌ ಗಿಟ್ಟಿಸಿಕೊಳ್ಳುವುದೂ ಇವರ ಪಾಲಿಗೆ ಕಷ್ಟವಾಗಿ ಪರಿಣಮಿಸಿದೆ. ಎಚ್.ಡಿ.ಕೋಟೆ (ಎಸ್‌ಟಿ) ಮೀಸಲು ಕ್ಷೇತ್ರದಿಂದ ಆದಿವಾ ಸಿಗಳಿಗೆ ಟಿಕೆಟ್‌ ನೀಡುವಂತೆ ವಿಧಾನಸಭೆ ಚುನಾವಣೆ ವೇಳೆ ಪ್ರತಿಭಟನೆಯೇ ನಡೆದಿತ್ತು. ಈ ತಾಲ್ಲೂಕಿನಲ್ಲಿ 115 ಹಾಡಿಗಳಿವೆ.

32,000 ಆದಿವಾಸಿ ಮತದಾರರಿದ್ದಾರೆ. ಜೇನು ಕುರುಬ ಸಮುದಾಯದ ಜೆ.ಕೆ.ಸುಬ್ಬಯ್ಯ ವಿರಾಜಪೇಟೆ ಮೀಸಲು ಕ್ಷೇತ್ರವಾಗಿದ್ದಾಗ ಮೂರು ಬಾರಿ ಶಾಸಕರಾಗಿದ್ದರು. ಕೇತಮ್ಮ, ಜಾಜಿ ತಿಮ್ಮಯ್ಯ ಕೆಲ ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಅದೇ ಅವರ ದೊಡ್ಡ ಸಾಧನೆ.


ಮಲೆಕುಡಿಯರ ಸಾಂಸ್ಕೃತಿಕ ಆಚರಣೆ – ಚಿತ್ರ: ವಿಠಲ ಮಲೆಕುಡಿಯ

ರಾಜಕೀಯವಾಗಿಯೂ ಪ್ರಾತಿನಿಧ್ಯ ಸಿಗುತ್ತಿಲ್ಲ
ಆದಿವಾಸಿಗಳಿಗೆ ರಾಜಕೀಯವಾಗಿಯೂ ಪ್ರಾತಿನಿಧ್ಯ ಸಿಗುತ್ತಿಲ್ಲ. ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ 15 ವಿಧಾನಸಭಾ ಕ್ಷೇತ್ರಗಳಿವೆ. ಅದರಲ್ಲಿ ಆದಿವಾಸಿ ಮುಖಂಡರಿಗೆ ಟಿಕೆಟ್‌ ಲಭಿಸಿಲ್ಲ. ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಟಿಕೆಟ್‌ ಗಿಟ್ಟಿಸಿಕೊಳ್ಳುವುದೂ ಇವರ ಪಾಲಿಗೆ ಕಷ್ಟವಾಗಿ ಪರಿಣಮಿಸಿದೆ.

ಎಚ್.ಡಿ.ಕೋಟೆ (ಎಸ್‌ಟಿ) ಮೀಸಲು ಕ್ಷೇತ್ರದಿಂದ ಆದಿವಾ ಸಿಗಳಿಗೆ ಟಿಕೆಟ್‌ ನೀಡುವಂತೆ ವಿಧಾನಸಭೆ ಚುನಾವಣೆ ವೇಳೆ ಪ್ರತಿಭಟನೆಯೇ ನಡೆದಿತ್ತು. ಈ ತಾಲ್ಲೂಕಿನಲ್ಲಿ 115 ಹಾಡಿಗಳಿವೆ. 32,000 ಆದಿವಾಸಿ ಮತದಾರರಿದ್ದಾರೆ.

ಜೇನು ಕುರುಬ ಸಮುದಾಯದ ಜೆ.ಕೆ.ಸುಬ್ಬಯ್ಯ ವಿರಾಜಪೇಟೆ ಮೀಸಲು ಕ್ಷೇತ್ರವಾಗಿದ್ದಾಗ ಮೂರು ಬಾರಿ ಶಾಸಕರಾಗಿದ್ದರು. ಕೇತಮ್ಮ, ಜಾಜಿ ತಿಮ್ಮಯ್ಯ ಕೆಲ ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಅದೇ ಅವರ ದೊಡ್ಡ ಸಾಧನೆ.

ಇನ್ನಷ್ಟು ಸುದ್ದಿಗಳು
ಆದಿವಾಸಿಗಳ ಕಥೆ–ವ್ಯಥೆ: ಪುನರ್ವಸತಿ ಪ್ರದೇಶಗಳ ಕರುಣಾಜನಕ ಕತೆ
ಆದಿವಾಸಿಗಳ ಕಥೆ–ವ್ಯಥೆ: ‘ನಮ್ಮ ಪಾಡಿಗೆ ನಾವಿದ್ದ ದಿನಗಳು ಉಳಿದಿಲ್ಲ’ 
ಆದಿವಾಸಿಗಳ ಕಥೆ–ವ್ಯಥೆ: ಬೇಕಾಗಿರುವುದು ಅನುದಾನವಲ್ಲ, ಪ್ರೀತಿ 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !