ಬ್ಲ್ಯಾಕ್‌ಮೇಲ್ ತಂತ್ರ ಮಾಡುತ್ತಿಲ್ಲ: ಆನಂದ್ ಸಿಂಗ್

ಹೊಸಪೇಟೆ: ‘ನನಗೆ ಅಧಿಕಾರ ದಾಹವಿಲ್ಲ. ಯಾವುದೇ ಬ್ಲ್ಯಾಕ್‌ಮೇಲ್ ತಂತ್ರ ಮಾಡುತ್ತಿಲ್ಲ. ನನ್ನ ಜಿಲ್ಲೆಯ ರೈತರು, ಜನಪರ ಹೋರಾಟಕ್ಕಾಗಿ ರಾಜೀನಾಮೆ ನೀಡಿದ್ದೇನೆ’ ಎಂದು ಶಾಸಕ ಆನಂದ್ ಸಿಂಗ್ ಹೇಳಿದರು.
ಮಂಗಳವಾರ ನಗರದ ವೇಣುಗೋಪಾಲ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಸಮಯ ಸಾಧಕನಲ್ಲ. ತಾತ್ಕಾಲಿಕ ಲಾಭಕ್ಕಾಗಿ ಹಪಹಪಿ ಪಡುವವನಲ್ಲ. ನನ್ನ ಹೋರಾಟ ಇರುವುದು ನನ್ನ ಜಿಲ್ಲೆಯ ಹಿತಕ್ಕಾಗಿ’ ಎಂದರು.
‘ಜಿಂದಾಲ್ ಕಂಪನಿಗೆ ಯಾವುದೇ ಕಾರಣಕ್ಕೂ ಜಮೀನು ಮಾರಾಟ ಮಾಡಬಾರದು. ಗುತ್ತಿಗೆ ಆಧಾರದ ಮೇಲೆ ಕೊಡುವುದಕ್ಕೆ ನನ್ನ ಅಭ್ಯಂತರವಿಲ್ಲ ಎಂದು ಪಕ್ಷದ ವರಿಷ್ಠರು, ಸರ್ಕಾರ ಹಾಗೂ ಸಂಪುಟ ಉಪಸಮಿತಿಯ ಗಮನಕ್ಕೆ ತಂದಿದ್ದೇನೆ’ ಎಂದರು.
‘ಹಿಂದೆ ಯಾವುದೋ ಸರ್ಕಾರ ತಪ್ಪು ಮಾಡಿದೆ ಎಂದು ಈಗ ಮತ್ತೆ ಅದನ್ನೇ ಮಾಡುವುದು ಸರಿಯಲ್ಲ. 20, 50, 100 ವರ್ಷಗಳ ಅವಧಿಗೆ ಜಿಂದಾಲ್ ಸೇರಿದಂತೆ ಯಾವುದೇ ಕಂಪನಿಗೆ ಗುತ್ತಿಗೆ ಆಧಾರದ ಮೇಲೆ ಜಮೀನು ಕೊಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ, ಮಾರಾಟ ಮಾಡಬಾರದು’ ಎಂದು ಆಗ್ರಹಿಸಿದರು.
‘ಜಿಂದಾಲ್ ಸೇರಿದಂತೆ ಇನ್ನಿತರ ಕಂಪನಿಗಳಿಂದ ಜಿಲ್ಲೆಯಲ್ಲಿ ಕೃಷಿ, ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಯುವಕರಿಗೆ ಉದ್ಯೋಗ ಸಿಕ್ಕಿಲ್ಲ. ಜಿಲ್ಲೆಯ ಅಭಿವೃದ್ಧಿ ಆಗುತ್ತಿಲ್ಲ. ವಿಜಯನಗರ ಜಿಲ್ಲೆ ಮಾಡಬೇಕು ಎನ್ನುವುದು ಬಹುವರ್ಷಗಳ ಬೇಡಿಕೆಯಾಗಿದೆ. ವಿಜಯನಗರದ ಬಗ್ಗೆ ಮಾತಾಡಿದರೆ, ಹಂಪಿ ಉತ್ಸವ ಮಾಡಿದರೆ ಸಾಲದು. ಜಿಲ್ಲೆ ಮಾಡಿದರೆ ಅದರ ವೈಭವದ ಬಗ್ಗೆ ಯುವಜನಾಂಗಕ್ಕೆ ತಿಳಿಸಲು ಅನುಕೂಲವಾಗುತ್ತದೆ. ಸದಾ ನೆನಪಿನಲ್ಲಿ ಇರುತ್ತದೆ. ಅದಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ’ ಎಂದು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.