₹ 3.19 ಕೋಟಿ ಹಣ, 2.5 ಕೆ.ಜಿ ಚಿನ್ನ ವಶ

ಬುಧವಾರ, ಏಪ್ರಿಲ್ 24, 2019
31 °C
ಹಲವೆಡೆ ಐ.ಟಿ ದಾಳಿ: ₹ 40.50 ಕೋಟಿ ಅಘೋಷಿತ ಆಸ್ತಿ ಪತ್ತೆ

₹ 3.19 ಕೋಟಿ ಹಣ, 2.5 ಕೆ.ಜಿ ಚಿನ್ನ ವಶ

Published:
Updated:

ಬೆಂಗಳೂರು: ಕರ್ನಾಟಕ, ಗೋವಾ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧೆಡೆ ‘ಶಿಕಾರಿ’ ಮುಂದುವರಿಸಿರುವ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ಇಲ್ಲಿನ ಮೂವರು ಉದ್ಯಮಿಗಳಿಂದ ₹ 85 ಲಕ್ಷ ಸೇರಿದಂತೆ ₹ 3.19 ಕೋಟಿ ಹಣ ಮತ್ತು ₹ 3.9 ಕೋಟಿ ಮೌಲ್ಯದ 2.5 ಕೆ.ಜಿ ಚಿನ್ನ ವಶಪಡಿಸಿಕೊಂಡಿದ್ದಾರೆ.

ತೆರಿಗೆದಾರರೊಬ್ಬರ ₹ 40.50 ಕೋಟಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆ ಹಚ್ಚಲಾಗಿದೆ. ಎರಡು ದಿನಗಳಿಂದ ನಿರಂತರವಾಗಿ ದಾಳಿ ನಡೆಯುತ್ತಿದೆ. ‘ರಾಜ್ಯದ ಯಾವುದೇ ಸಚಿವರು, ಶಾಸಕರು, ಸಂಸದರು ಇಲ್ಲವೆ ರಾಜಕೀಯ ನಾಯಕರ ಮನೆಗಳ ಮೇಲೆ ದಾಳಿ ನಡೆದಿಲ್ಲ’ ಎಂದು ಐ.ಟಿ ಮೂಲಗಳು ಪುನಃ ಸ್ಪಷ್ಟಪಡಿಸಿವೆ. 

ಬೆಂಗಳೂರಿನ ಉದ್ಯಮಿಗಳಾದ ಅಮಾನುಲ್ಲಾ ಖಾನ್‌, ಕಮಲ್‌ ಪಾಷಾ, ನಿಯಾಜ್‌ ಖಾನ್‌ ಅವರಿಗೆ ಸೇರಿದ 23 ಸ್ಥಳಗಳ ಮೇಲೆ ಗುರುವಾರ ದಾಳಿಯಾಗಿದೆ. ಚಿತ್ರದುರ್ಗ, ಕೋಲ್ಕತ್ತಾದಲ್ಲೂ ಶೋಧಿಸಲಾಗಿದ್ದು, 13.5 ಕೆ.ಜಿ ಚಿನ್ನ ಸಿಕ್ಕಿದೆ. ಈ ಸಂಬಂಧದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಅಮಾನುಲ್ಲಾ ಸಮಾರಂಭಗಳನ್ನು ಸಂಘಟಿಸುವ ಗುತ್ತಿಗೆದಾರರು; ಪಾಷಾ ಕುಕ್ಕುಟೋದ್ಯಮಿ ಮತ್ತು ನಿಯಾಜ್‌ ರಿಯಲ್‌ ಎಸ್ಟೇಟ್‌ ಉದ್ಯಮಿ. ಅಲ್ಲದೆ, ಬೆಳಗಾವಿ, ಚಿಕ್ಕೋಡಿ, ಗೋಕಾಕ್‌ ಮತ್ತು ನಿಪ್ಪಾಣಿ ಕೆಲವು ಸಿವಿಲ್‌ ಗುತ್ತಿಗೆದಾರರು, ಮದ್ಯ ವ್ಯಾಪಾರಿಗಳು ನಡೆಸುವವರೂ ಐ.ಟಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಗುತ್ತಿಗೆದಾರರು, ಪಿಡಬ್ಲ್ಯುಡಿ ಎಂಜಿನಿ
ಯರ್‌ಗಳಿಗೂ ಹಣ ಪಾವತಿಸಿದ್ದಾರೆ. ಇವರಿಂದ ₹ 62 ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ. 

ಪ್ರಕರಣವೊಂದರಲ್ಲಿ, ಗುತ್ತಿಗೆದಾರರು ತಮ್ಮ ಅಕ್ರಮ ಹಣವನ್ನು ನೌಕರರ ಹೆಸರಿನಲ್ಲಿ ಠೇವಣಿ ಇಡುತ್ತಿದ್ದುದನ್ನು ಪತ್ತೆ ಹಚ್ಚಲಾಗಿದೆ. ನಕಲಿ ಬಿಲ್‌ ಸೃಷ್ಟಿಸಿ ಹಣವನ್ನೂ ಪಡೆಯುತ್ತಿದ್ದರು. 

ಹುಬ್ಬಳ್ಳಿ, ಗದಗ ಮತ್ತು ಬಳ್ಳಾರಿಯ 6 ಪಿಡಬ್ಲ್ಯುಡಿ ಗುತ್ತಿಗೆದಾರರು, ಈ ಇಲಾಖೆಯ ಒಬ್ಬರು ಲೆಕ್ಕಾಧಿಕಾರಿಗೆ ಸೇರಿದ ಸ್ಥಳಗಳನ್ನು ಪರಿಶೀಲಿಸಲಾಗಿದೆ.

ಗುತ್ತಿಗೆದಾರರೊಬ್ಬರು ಹೆಚ್ಚು ಖರ್ಚು ತೋರಿಸುವ ಉದ್ದೇಶದಿಂದ ನಿಯಮಗಳನ್ನು ಉಲ್ಲಂಘಿಸಿ ತಮ್ಮ ಕುಟುಂಬದವರಿಗೇ ಸಾರಿಗೆ ಗುತ್ತಿಗೆ ನೀಡಿದ್ದಾರೆ. ಐ.ಟಿ ದಾಳಿ ವೇಳೆ ಮಹತ್ವದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದೆ. ಈ ಗುತ್ತಿಗೆದಾರರಿಂದ ₹ 1.29 ಕೋಟಿ ಹಣ, 12.5 ಕೆ.ಜಿ ಚಿನ್ನ ಹಾಗೂ 2.22 ಕೆ.ಜಿ ಚಿನ್ನ  ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ₹ 3.9 ಕೋಟಿ ಎಂದು ಅಂದಾಜಿಸಲಾಗಿದೆ. 

ಉಡುಪಿಯ ಸಾರಿಗೆ ಉದ್ಯಮಿ ಬಳಿ ₹ 10ಲಕ್ಷ ನಗದು, ಲೆಕ್ಕ ಸಿಗದ ಹೂಡಿಕೆ, ಸ್ಥಿರಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಗೋವಾದ ಗೋಡಂಬಿ ವ್ಯಾಪಾರಿ ಹಾಗೂ ಮಟ್ಕಾ ದಂಧೆ ನಡೆಸುವವರ ಮೇಲೂ ದಾಳಿಯಾಗಿದ್ದು, ₹ 33 ಲಕ್ಷ ವಶಪಡಿಸಿಕೊಳ್ಳಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !