ಮಂಗಳವಾರ, ಏಪ್ರಿಲ್ 7, 2020
19 °C
ಅಂಬಿಕಾತನಯದತ್ತ ಪ್ರಶಸ್ತಿ ಸ್ವೀಕಾರ ಸಮಾರಂಭ

ನನ್ನ ಬರವಣಿಗೆ ಮುಗಿಯಿತು: ಎಸ್.ಎಲ್.ಭೈರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ‘ನನ್ನ ಬರವಣಿಗೆ ಕಾಲ ಮುಗಿಯಿತು ಅನಿಸುತ್ತಿದೆ. ಮತ್ತೆ ಬರೆಯುತ್ತೀನೋ ಇಲ್ಲವೋ ಗೊತ್ತಿಲ್ಲ’ ಹೀಗೆಂದ ಹಿರಿಯ ಕಾದಂಬರಿಕಾರ ಡಾ. ಎಸ್‌.ಎಲ್.ಭೈರಪ್ಪ ಅವರು ತಮ್ಮ ಅಭಿಮಾನಿಗಳಿಗೆ ಶುಕ್ರವಾರ ಇಲ್ಲಿ ಆಘಾತ ನೀಡಿದರು.

ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಪೂರ್ವದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಂವಾದದಲ್ಲಿ ಮುಂದಿನ ಕಾದಂಬರಿ ಕುರಿತು ಕೇಳಿಬಂದ ಪ್ರಶ್ನೆಗೆ ಉತ್ತರಿಸುತ್ತಾ, ‘ಉತ್ತರಕಾಂಡ ಕಾದಂಬರಿ ನಂತರ ನಾನು ಏನನ್ನೂ ಬರೆದಿಲ್ಲ. ಹೊಸ ಅಲೋಚನೆಗಳು ಏನೂ ಹೊಳೆದಿಲ್ಲ. ಇದಕ್ಕೆ ವಯಸ್ಸಿನ ಮಿತಿ ಇರುವುದೂ ಹೌದು’ ಎಂದರು.

ಸಂವಾದದಲ್ಲಿ ವಿವಿಧ ವಿಷಯಗಳ ಕುರಿತು ಮಾತನಾಡಿದ ಡಾ. ಭೈರಪ್ಪ, ‘ಸಾಹಿತ್ಯದಲ್ಲಿ ಚಳವಳಿಗಳು ಹೆಚ್ಚು ಅಪಾಯಕಾರಿ. ಯಾವುದೋ ಒಂದು ಚಳವಳಿ ನಡೆಯುವ ಕಾಲಘಟ್ಟದಲ್ಲಿ ಅದರ ಪರವಾಗಿ ಕೃತಿಯನ್ನು ರಚಿಸಿದರೆ, ಅದನ್ನು ಪ್ರಶಂಸಿಸುವರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಹಾಗೆಯ ಆ ಚಳವಳಿ ಬೆಂಬಲಿಸುವ ಪತ್ರಿಕೆಗಳೂ ಅದನ್ನ ಮನ್ನಣೆ ನೀಡುತ್ತದೆ. ಆದರೆ ಚಳವಳಿ ವಿರುದ್ಧ ಬರೆದರೆ, ಅಷ್ಟೂ ಜನ ಮುಗಿಬೀಳುತ್ತಾರೆ. ಹೀಗಾಗಿ ಸಾಹಿತಿಗೆ ಎಲ್ಲವೂ ಗೊತ್ತಿರಬೇಕು. ಆದರೆ ಯಾವುದಕ್ಕೂ ಗಂಟುಬೀಳಬಾರದು’ ಎಂದು ಸಲಹೆ ನೀಡಿದರು.

ಕನ್ನಡ ಶಿಕ್ಷಣ ಮಾಧ್ಯಮ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಈ ವಿಷಯ ಪ್ರಸ್ತಾಪಿಸಿದೆ. 4ನೇ ತರಗತಿವರೆಗೂ ರಾಜ್ಯ ಭಾಷೆಯಲ್ಲೇ ವಿಷಯ ಕಲಿಸಬೇಕು. ಆನಂತರ ಇಂಗ್ಲಿಷ್ ಭಾಷೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕಲಿಸಬೇಕು. ಇತರ ವಿಷಯಗಳನ್ನು ಎರಡೂ ಭಾಷೆಯಲ್ಲಿ ಕಲಿಸಿದರೆ ಮಕ್ಕಳಿಗೆ ಅರ್ಥವಾಗುತ್ತದೆ’ ಎಂದು ವಿವರಿಸಿದೆ.

‘ನ್ಯಾಯಾಲಯದಲ್ಲೂ ಕಲಿಕೆಯ ಮಾಧ್ಯಮದ ಬದಲು, ಪಾಲಕರ ಸ್ವಾತಂತ್ರ್ಯವಾಗಿ ಬದಲಾಗಿದ್ದರಿಂದ ಮಸೂದೆ ಮೂಲಕ ಭಾಷಾ ಮಾಧ್ಯಮವನ್ನು ಉಳಿಸುವುದೊಂದೇ ಮಾರ್ಗ. ಇದಕ್ಕೆ ಸಹಮತ ವ್ಯಕ್ತಪಡಿಸಿದ ಮೋದಿ, ಯಾವುದೇ ಮಸೂದೆ ತಂದರೂ ಅದಕ್ಕೆ ವಿರೋಧಪಕ್ಷದವರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಅದರಲ್ಲೂ ಈ ವಿಷಯದಲ್ಲಿ ಬಿಜೆಪಿಯ ಕೆಲ ಸಂಸದರೂ ಅವರಂತೆಯೇ ನಡೆಯುವ ಸಾಧ್ಯತೆ ಇದೆ. ಇದನ್ನು ಯೋಚಿಸಿ ಮಸೂದೆ ತರಲಾಗುವುದು ಎಂದರು’ ಎಂದು ಡಾ. ಭೈರಪ್ಪ ವಿವರಿಸಿದರು.

ಜಾತಿ ವಿಷಯವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ’ಜಾತಿ ಸೃಷ್ಟಿಗೆ ಬ್ರಾಹ್ಮಣರನ್ನೇ ಹೆಚ್ಚು ದೂಷಿಸಲಾಗುತ್ತದೆ. ಆದರೆ ಕಸುಬು ಆಧಾರಿತವಾಗಿ ನಮ್ಮಲ್ಲಿ ಜಾತಿಗಳು ಹುಟ್ಟಿಕೊಂಡವೇ ಹೊರತು, ಯಾರೋ ಸೃಷ್ಟಿಸಿದ್ದಲ್ಲ. ತಂದೆಯಂತೆ ನೇಯ್ಗೆಯನ್ನು ಕರಗತ ಮಾಡಿಕೊಂಡ ನೇಕಾರನ ಮಗಳನ್ನು ತನ್ನ ಕಸುಬು ಗೊತ್ತಿರುವ ಮನೆಗೆ ಕೊಟ್ಟನೇ ಹೊರತು ಬೇರೆ ಕುಟುಂಬಕ್ಕಲ್ಲ. ಈಗಲೂ ವೈದ್ಯನಾದ ವರನಿಗೆ ವೈದ್ಯೆಯಾಗಿರುವ ವಧುವನ್ನೇ ಹುಡುಕುತ್ತಿರುವುದು ಆ ಪದ್ಧತಿ ಮುಂದುವರೆದಿರುವುದಕ್ಕೆ ಸಾಕ್ಷಿ’ ಎಂದರು.

ಸಂವಾದದಲ್ಲಿ ಡಾ. ಜಿ.ಎಂ.ಹೆಗಡೆ, ಹರ್ಷ ಡಂಬಳ, ಡಾ. ಸಂಗಮನಾಥ ಲೋಕಾಪುರ, ಡಾ. ಶಶಿಧರ ನರೇಂದ್ರ ಪಾಲ್ಗೊಂಡಿದ್ದರು. ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ.ಹಿರೇಮಠ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಕೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು