ಕೇಂದ್ರ ಸೇವೆಯತ್ತ ಐಎಎಸ್‌ ಅಧಿಕಾರಿಗಳ ಚಿತ್ತ

6
25 ವರ್ಷಗಳಿಗೂ ಹೆಚ್ಚು ಆಡಳಿತಾನುಭವ ಹೊಂದಿರುವವರು

ಕೇಂದ್ರ ಸೇವೆಯತ್ತ ಐಎಎಸ್‌ ಅಧಿಕಾರಿಗಳ ಚಿತ್ತ

Published:
Updated:

ಬೆಂಗಳೂರು: ಇಪ್ಪತ್ತೈದು ವರ್ಷಗಳಿಗೂ ಹೆಚ್ಚು ಆಡಳಿತಾನುಭವ ಹೊಂದಿರುವ ಕರ್ನಾಟಕ ಕೇಡರ್‌ನ ಐವರು ಅಧಿಕಾರಿ
ಗಳು ಕೇಂದ್ರ ಸೇವೆಗೆ ತೆರಳುವ ಹಾದಿಯ
ಲ್ಲಿದ್ದು, ಅವರ ‘ಅನುಭವ ಧಾರೆ’ಯನ್ನು ರಾಜ್ಯ ಕಳೆದುಕೊಳ್ಳುವ ಸಾಧ್ಯತೆ ಇದೆ.

ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಿ.ವಿ.ಪ್ರಸಾದ್‌ ಸದ್ಯದಲ್ಲೇ ಕೇಂದ್ರ ಸೇವೆಗೆ ತೆರಳಲಿದ್ದಾರೆ. 2017ರಲ್ಲಿ ಕೇಂದ್ರ ಸೇವೆಗೆ ಸೇರ್ಪಡೆಯಾಗುವವರ ಪಟ್ಟಿಯಲ್ಲಿ ಅವರ ಹೆಸರು ಇತ್ತು. ಆಗ ಅವರು ಹೋಗಲು ಮನಸ್ಸು ಮಾಡಿರಲಿಲ್ಲ. ಈಗ ಸಮ್ಮತಿ ಸೂಚಿಸಿದ್ದಾರೆ.

ಕೆ.ರತ್ನಪ್ರಭಾ ನಿವೃತ್ತರಾದ ಬಳಿಕ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಟಿ.ಎಂ.ವಿಜಯಭಾಸ್ಕರ್‌ ಹಾಗೂ ಪ್ರಸಾದ್‌ ಅವರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಸರ್ಕಾರವು ವಿಜಯಭಾಸ್ಕರ್ ಅವರನ್ನು ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿತ್ತು. ಅವರ ಅಧಿಕಾರಾವಧಿ 2020ರ ಡಿಸೆಂಬರ್‌ವರೆಗೆ ಇದೆ. ಪ್ರಸಾದ್‌ ಅವರು ವಿಜಯಭಾಸ್ಕರ್ ಅವರಿಗಿಂತ ಮೊದಲೇ ಸೇವೆಯಿಂದ ನಿವೃತ್ತರಾಗಲಿದ್ದಾರೆ.

ಕೇಂದ್ರ ಸರ್ಕಾರದ ಸಚಿವ ಸಂಪುಟದ ನೇಮಕಾತಿ ಸಮಿತಿಯು ಕಾರ್ಯದರ್ಶಿ ಹಾಗೂ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಹ ಅಧಿಕಾರಿಗಳ ಪಟ್ಟಿಗೆ ಇತ್ತೀಚೆಗೆ ಅನುಮೋದನೆ ನೀಡಿದೆ. ಈ ಪಟ್ಟಿಯಲ್ಲಿ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌.ಪ‍್ರಸಾದ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್ ಹೆಸರುಗಳಿವೆ. ಮುಂದಿನ ವರ್ಷ ಅವರು ಕೇಂದ್ರ ಸೇವೆಗೆ ತೆರಳಲು ಅವಕಾಶ ಸಿಗಲಿದೆ. ಈ ಅವಕಾಶವನ್ನು ಅವರು ತಿರಸ್ಕರಿಸಲೂಬಹುದು. ಇದಲ್ಲದೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದರ್ಜೆಯ ಮೂವರು ಅಧಿಕಾರಿಗಳು ಕೇಂದ್ರಕ್ಕೆ ತೆರಳಲು ಉತ್ಸುಕತೆ ತೋರಿದ್ದಾರೆ. ಮುಖ್ಯ ಕಾರ್ಯದರ್ಶಿ ಹುದ್ದೆ ಸಿಗುವ ಸಾಧ್ಯತೆ ಕಡಿಮೆ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅಂಜುಂ ಪರ್ವೇಜ್‌ ಸಹ ಈ ಪಟ್ಟಿಯಲ್ಲಿದ್ದಾರೆ. ಆದರೆ, ಅವರು ಬೆಂಗಳೂರು ಬಿಟ್ಟು ತೆರಳಲು ಉತ್ಸುಕರಾಗಿಲ್ಲ. ರಾಜ್ಯದಲ್ಲೇ ಕೇಂದ್ರ ಸೇವೆಯ ಹುದ್ದೆ ಸಿಕ್ಕಿದರೆ ಮಾತ್ರ ಅವರು ಹೋಗಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

‘ರೈತರ ಬೆಳೆ ಸಾಲ ಮನ್ನಾಕ್ಕೆ ಹಣಕಾಸು ಇಲಾಖೆಯ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಎರಡು ತಿಂಗಳ ಹಿಂದೆ ಹರಿಹಾಯ್ದಿದ್ದರು. ಈ ಮಾತಿನಿಂದ ಐ.ಎಸ್‌.ಎನ್‌.ಪ್ರಸಾದ್‌ ನೊಂದುಕೊಂಡಿದ್ದರು. ಈ ಕಾರಣಕ್ಕೆ ಕೇಂದ್ರ ಸೇವೆಗೆ ತೆರಳಲು ಅವರು ಮುಂದಾಗಿದ್ದಾರೆ ಎಂದೂ ಹೇಳಲಾಗುತ್ತಿದೆ.

‘ಎಸಿಎಸ್‌ ದರ್ಜೆಯ ಅಧಿಕಾರಿಗಳು ಕೇಂದ್ರದಲ್ಲಿ ಕಾರ್ಯದರ್ಶಿ ಆಗಬಹುದು. ರಾಜ್ಯ ಸೇವೆಗೆ ಹೋಲಿಸಿದರೆ ಕೇಂದ್ರ ಸೇವೆಯಲ್ಲಿ ರಾಜಕೀಯ ಒತ್ತಡಗಳು ಕಡಿಮೆ. ಅಲ್ಲದೆ, ನಿವೃತ್ತಿ ಸಂದರ್ಭದಲ್ಲಿ ಕೇಂದ್ರ ಸೇವೆಯಲ್ಲಿದ್ದರೆ ಸವಲತ್ತುಗಳು ಹಾಗೂ ಅವಕಾಶಗಳು ಜಾಸ್ತಿ. ದೆಹಲಿಯಲ್ಲೇ ನಿವೃತ್ತ ಜೀವನ ಕಳೆಯಬೇಕು ಎಂಬ ಕಾರಣಕ್ಕೂ ಅಧಿಕಾರಿಗಳು ಕೇಂದ್ರ ಸೇವೆಗೆ ಹೋಗುತ್ತಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !