ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಕರು ಅವಗಣೆನೆಗೆ ಒಳಗಾದರೆ ಪ್ರಗತಿ ಅಸಾಧ್ಯ

ಸಾಣೇಹಳ್ಳಿ: ಮಣ್ಣಿನ ಫಲವತ್ತತೆ ಕುರಿತ ವಿಚಾರ ಸಂಕಿರಣದಲ್ಲಿ ಪಂಡಿತಾರಾಧ್ಯ ಶ್ರೀ
Last Updated 7 ನವೆಂಬರ್ 2018, 20:38 IST
ಅಕ್ಷರ ಗಾತ್ರ

ಹೊಸದುರ್ಗ: ಈ ನಾಡಿನಲ್ಲಿ ಆಸೆಯನ್ನು ತ್ಯಜಿಸಿದವನು ಕೃಷಿಕ. ನಾಡಿನ ಬೆನ್ನಲಬು ಕೃಷಿಕರೇ ಹೊರತು ರಾಜಕಾರಣಿಗಳಾಗಲಿ, ಅಧಿಕಾರಿಗಳಾಗಲೀ ಸಾಧು-ಸಂತರಾಗಲೀ ಅಲ್ಲ. ಯಾವ ನಾಡಿನಲ್ಲಿ ಕೃಷಿಕರು ಅವಗಣೆನೆಗೆ ಒಳಗಾಗುತ್ತಾರೋ ಆ ದೇಶ ಪ್ರಗತಿ ಹೊಂದಲು ಸಾಧ್ಯವಿಲ್ಲ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ 4ನೇ ದಿನವಾದ ಬುಧವಾರ ಆಯೋಜಿಸಿದ್ದ ‘ಮಣ್ಣಿನ ಫಲವತ್ತತೆ ಮತ್ತು ಸಮಗ್ರ ಕೃಷಿ' ಕುರಿತ ವಿಚಾರಸಂಕಿರಣದ ನೇತೃತ್ವ ವಹಿಸಿ ಅವರು ಮಾತನಾಡಿದರು.

ರೈತರು ಒಂದು ವರ್ಷ ತಮ್ಮ ಬೇಡಿಕೆಗಳು ಈಡೇರುವವರೆಗೂ ಸತ್ಯಾಗ್ರಹ ಮಾಡಿದರೆ ನಾಡಿನ ಸ್ಥಿತಿ ಏನಾಗಬಹುದೆಂದು ಯಾರೂ ಊಹಿಸಲಾರರು. ಕೃಷಿಯೂ ಒಂದು ಉದ್ಯಮ. ಕಾರ್ಖಾನೆಗಳಲ್ಲಿ ಉತ್ಪಾದನೆಯಾದ ವಸ್ತುಗಳಿಗೆ ಬೆಲೆ ಕಟ್ಟುವಂತೆ ರೈತ ಉತ್ಪಾದಿಸಿದ ಬೆಳೆಗಳಿಗೂ ಬೆಲೆ ನಿಗದಿ ಮಾಡುವ ಕ್ಷಮತೆ ರೈತರಿಗೆ ಬರಬೇಕು ಎಂದು ತಿಳಿಸಿದರು.

ಸಮಗ್ರ ಕೃಷಿ ಪದ್ಧತಿ ಕುರಿತಂತೆ ರಾಯಚೂರಿನ ಯಶಸ್ವಿ ರೈತ ಮಹಿಳೆ ಕವಿತಾ ಉಮಾಶಂಕರ್ ಮಿಶ್ರಾ, ‘ನಾನು ನಾನು ಕಂಪ್ಯೂಟರ್ ಎಂಜಿನಿಯರಿಂಗ್ ಪದವಿ ಪಡೆದವಳು. ನನ್ನ ಅಕ್ಕ-ತಂಗಿಯರೂ ಉನ್ನತ ಹುದ್ದೆಯಲ್ಲಿದ್ದವರು. ನನಗೂ ಹದಿನೆಂಟು ವರ್ಷದ ಹಿಂದೆ ಇನ್ಫೊಸಿಸ್‌ನಲ್ಲಿ ತಿಂಗಳಿಗೆ ₹ 40 ಸಾವಿರ ಸಂಬಳವಿತ್ತು. ನಾನು ಮದುವೆಯಾದ ಪತಿ ಕೃಷಿಕರು. ಜಮೀನಿನಲ್ಲಿ ದಾಳಿಂಬೆ ಬೆಳೆದು ಲಕ್ಷಾಂತರ ರೂಪಾಯಿ ಹಣ ಗಳಿಸಿದೆ. ನಂತರ ದಾಳಿಂಬೆ ಬೆಳೆದ ಭೂಮಿಯಲ್ಲಿ ಶ್ರೀಗಂಧ, ಪೇರಲ, ಮಾವು, ಕರಿಬೇವು ಇನ್ನಿತರ ಅರಣ್ಯ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ತೀರ್ಮಾನಿಸಿದೆ. ಜೊತೆಗೆ ಕುರಿ, ಕೋಳಿ, ಹೈನು, ಜೇನುಗಾರಿಕೆ ಮಾಡುತ್ತಿದ್ದೇನೆ. ಇದರಿಂದ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ’ ಎಂದು ಅನುಭವ ಹಂಚಿಕೊಂಡರು.

‘ಮಣ್ಣಿನ ಫಲವತ್ತತೆ’ ಕುರಿತಂತೆ ಮಾತನಾಡಿದ ಕೋಲಾರದ ಸಾವಯವ ಕೃಷಿ ತಜ್ಞ ಡಾ.ಕೆ.ಆರ್.ಹುಲ್ಲುನಾಚೇಗೌಡ, ‘ನಾನು ಪ್ರಾಧ್ಯಾಪಕನಾಗಿ ವೃತ್ತಿ ಆರಂಭಿಸಿದ್ದೆ. ಮನೆಯಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದೆ. ಆದರೆ, ಅದರಲ್ಲಿ ವಿಫಲರಾದಾಗ ವೃತ್ತಿಗೆ ರಾಜಿನಾಮೆ ನೀಡಿ ಹಳ್ಳಿಗೆ ವಾಪಸ್ಸು ಬಂದು ರೇಶ್ಮೆ ಕೃಷಿ ಆರಂಭಿಸಿ ಯಶಸ್ವಿಯಾದೆ. ಸಾಕಷ್ಟು ಹಣ ಸಂಪಾದನೆ ಮಾಡಿದ್ದೇನೆ. ನನ್ನ ಖರ್ಚಿನಲ್ಲಿಯೇ ಇಂಥ ಸಾವಿರಾರು ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಸಂಕುಚಿತ ಸ್ವಭಾವ ಬಿಟ್ಟು ಹೆಮ್ಮೆಯಿಂದ ರೈತ ಎಂದು ಪರಿಚಯಿಸಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

ಸಾಣೇಹಳ್ಳಿಯ ಗುರುಪಾದೇಶ್ವರ ಪ್ರೌಢಶಾಲೆ ಮಕ್ಕಳು ನೃತ್ಯರೂಪಕ ಹಾಗೂ ‘ಮಧ್ಯಮ ವ್ಯಾಯೋಗ’ ನಾಟಕ ಪ್ರದರ್ಶಿಸಿದರು.

**

ಒಂದು ಕೆ.ಜಿ. ಶ್ರೀಗಂಧಕ್ಕೆ ₹ 67 ಸಾವಿರ

‘ಈಗ ನನ್ನ ಹೊಲದಲ್ಲಿ 6 ವರ್ಷ 8 ತಿಂಗಳ ಸಾವಿರಾರು ಶ್ರೀಗಂಧದ ಮರಗಳಿವೆ. ಒಂದು ಕೆ.ಜಿ. ಶ್ರೀಗಂಧಕ್ಕೆ ಆರೇಳು ಸಾವಿರ ರೂಪಾಯಿ ಬೆಲೆ ಇದೆ. ಒಂದು ಮರಕ್ಕೆ ಲಕ್ಷಾಂತರ ರೂಪಾಯಿ ಹಣ ಬರುತ್ತದೆ. ಹೀಗೆ 12ರಿಂದ 15 ವರ್ಷದೊಳಗೆ ಒಂದು ಎಕರೆಯಲ್ಲಿ ಕೋಟಿಗಟ್ಟಲೆ ಹಣ ಸಂಪಾದಿಸಬಹುದು’ ಎಂದು ರಾಯಚೂರಿನ ಯಶಸ್ವಿ ರೈತಮಹಿಳೆ ಕವಿತಾ ಉಮಾಶಂಕರ್ ಮಿಶ್ರಾ ತಿಳಿಸಿದರು.

**

ಒಂದು ಗ್ರಾಂ ಮಣ್ಣಿನಲ್ಲಿ ಒಂದು ಕೋಟಿಗೂ ಹೆಚ್ಚು ಸೂಕ್ಷ್ಮಾಣು ಜೀವಿಗಳು ಇರಬೇಕು. ಭೂಮಿ ರೊಟ್ಟಿ ತರಹ ಇರದೇ ದೋಸೆಯ ತರಹ ಇರಬೇಕು. ಇದು ಆರೋಗ್ಯವಂತ, ಫಲವತ್ತಾದ ಭೂಮಿಯ ಲಕ್ಷಣ.

–ಡಾ.ಕೆ.ಆರ್.ಹುಲ್ಲುನಾಚೇಗೌಡ, ಸಾವಯವ ಕೃಷಿ ತಜ್ಞ, ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT