ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ ಬಹುಕೋಟಿ ವಂಚನೆ ಪ್ರಕರಣ: ಉಪವಿಭಾಗಾಧಿಕಾರಿ ಬಂಧನ 

Last Updated 5 ಜುಲೈ 2019, 16:07 IST
ಅಕ್ಷರ ಗಾತ್ರ

ಬೆಂಗಳೂರು: 40,000 ಷೇರುದಾರರಿಂದ ₹ 4,000 ಕೋಟಿ ದೋಚಿ, ವಂಚಿಸಿರುವ ಐಎಂಎ (ಐ ಮಾನಿಟರಿ ಅಡ್ವೈಸರಿ) ಪ್ರೈವೇಟ್‌ ಲಿ’. ಕಂಪನಿ ಪರ ವರದಿ ಕೊಡಲು ₹ 4.5 ಕೋಟಿ ಲಂಚ ಪಡೆದ ಆರೋಪದ ಮೇಲೆ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್‌ ಅವರನ್ನು ಎಸ್‌ಐಟಿ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

ನಾಗರಾಜ್‌, ಐಎಂಎ ಪ್ರಕರಣದಲ್ಲಿ ಬಂಧನಕ್ಕೊಳಗಾದ ಮೊದಲ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಕೆಎಎಸ್‌ 1998ನೇ ಬ್ಯಾಚ್‌ಗೆ ಸೇರಿದ ಇವರು, ಮೂರು ಕಂತುಗಳಲ್ಲಿ ಲಂಚ ಪಡೆದ ಆರೋಪಕ್ಕೆ ಒಳಗಾಗಿದ್ದಾರೆ.

ಗ್ರಾಮ ಲೆಕ್ಕಿಗ ಮಂಜುನಾಥ್‌ ಲಂಚ ವ್ಯವಹಾರದಲ್ಲಿ ಮಧ್ಯವರ್ತಿಯಾಗಿದ್ದು, ಅವರನ್ನೂ ಬಂಧಿಸಲಾಗಿದೆ. ಐಎಂಎ ವಂಚನೆ ಪ್ರಕರಣಕ್ಕೆ ಕೆಲವು ಪ್ರಭಾವಿಗಳು ಬೆಂಬಲವಾಗಿದ್ದರು ಎಂಬ ಆರೋಪಕ್ಕೆ ಇಂದಿನ ಬೆಳವಣಿಗೆ ಸಾಕ್ಷಿಯಾಗಿದೆ. ಬಂಧಿತ ಅಧಿಕಾರಿ ಮನೆ ಮೇಲೆ ದಾಳಿ ಮಾಡಿರುವ ಎಸ್ಐಟಿ ಅಧಿಕಾರಿಗಳು, ಮಂಜುನಾಥ್‌ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದರು. ಇವರನ್ನು ಒಂಬತ್ತು ದಿನ ಪೊಲೀಸ್‌ ವಶಕ್ಕೆ ನೀಡಲಾಗಿದೆ.

‘ಆ್ಯಂಬಿಡೆಂಟ್‌ ಕಂಪನಿ’ ವಂಚನೆ ಪ್ರಕರಣ ಬಯಲಾದ ಬಳಿಕ, ಇಂಥ ಕಂಪನಿಗಳ ವಿರುದ್ಧ ವಿಚಾರಣೆ ನಡೆಸಲು ರಾಜ್ಯ ಸರ್ಕಾರ ಎಲ್‌.ಸಿ. ನಾಗರಾಜ್‌ ನೇತೃತ್ವದಲ್ಲಿ 2018ರ ಜೂನ್‌ನಲ್ಲಿ ದೂರು ಪ್ರಾಧಿಕಾರ ರಚಿಸಿತ್ತು. ಆದರೆ, ಆರೋಪಿ ಅಧಿಕಾರಿ ಐಎಂಎ ಕಂಪನಿ ವಿರುದ್ಧ ಸರಿಯಾಗಿ ವಿಚಾರಣೆ ನಡೆಸದೆ, ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್‌ ಆಲಿಖಾನ್‌ ಅವರಿಗೆ ಅನುಕೂಲ ಆಗುವಂತೆ 2019ರ ಫೆಬ್ರುವರಿಯಲ್ಲಿ ಸರ್ಕಾರಕ್ಕೆ ವರದಿ ನೀಡಿದ್ದರು’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

‘ಐಎಂಎ ವಿರುದ್ಧ ದೂರುಗಳೇನಾದರೂ ಇದ್ದರೆ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಪ್ರಮುಖ ಪತ್ರಿಕೆಗಳಿಗೆ ಜಾಹಿರಾತು ನೀಡಲಾಗಿತ್ತು. ಕನ್ನಡ, ಇಂಗ್ಲಿಷ್‌ ಹಾಗೂ ಉರ್ದು ಪತ್ರಿಕೆಗಳಲ್ಲಿ ಜಾಹಿರಾತು ಪ್ರಕಟವಾಯಿತು. ಯಾರೂ ದೂರು ನೀಡಲಿಲ್ಲ. ಬದಲಿಗೆ, ಕಂಪನಿ ನಮಗೆ ಕಾಲಕಾಲಕ್ಕೆ ಲಾಭಾಂಶ ನೀಡುತ್ತಿದೆ. ನೀವು ಹಸ್ತಕ್ಷೇಪ ಮಾಡುವ ಮೂಲಕ ನಮಗೆ ತೊಂದರೆ ಮಾಡುತ್ತಿದ್ದೀರಿ ಎಂದು ಹೂಡಿಕೆದಾರರು ಕಚೇರಿಗೆ ಬಂದು ಕೂಗಾಡಿದ್ದರು. ಅಲ್ಲದೆ, ದುಬೈನಿಂದಲೂ ಹೂಡಿಕೆದಾರರು ಕರೆ ಮಾಡಿದ್ದರು. ಈ ಪ್ರಕರಣದಲ್ಲಿ ಕೆಲವರು ನನಗೆ ಬೆದರಿಕೆ ಹಾಕಿದ್ದರು’ ಎಂದೂ ನಾಗರಾಜ್‌ ದೂರಿದ್ದರು.

ಕೆಪಿಐಡಿ ಕಾಯ್ದೆ ಹಾಗೂ ಸಿಆರ್‌ಪಿಸಿ ಸೆಕ್ಷನ್‌ 109ರ ಅನ್ವಯ ಐಎಂಎ ವಿರುದ್ಧ ಕ್ರಮ ಕೈಗೊಳ್ಳಲು ಬಂಧಿತ ಅಧಿಕಾರಿಗೆ ಅವಕಾಶ ಇತ್ತು. ಅವರು ವಾಸ್ತವ ಸಂಗತಿಯನ್ನು ಮರೆ ಮಾಚಿದರು. ಉಪ ವಿಭಾಗಾಧಿಕಾರಿ ಲಂಚ ಪಡೆದಿರುವುದಕ್ಕೆ ಸೂಕ್ತ ಸಾಕ್ಷ್ಯಾಧಾರ ಸಿಕ್ಕಿವೆ ಎಂದೂ ಮೂಲಗಳು ಹೇಳಿವೆ.

ಫ್ರಂಟ್‌ಲೈನ್‌ ಮಳಿಗೆಗಳ ಮೇಲೆ ದಾಳಿ: ಈ ಮಧ್ಯೆ, ಎಸ್‌ಐಟಿ ಡಿವೈಎಸ್‌ಪಿ ಅನಿಲ್‌ ಭೂಮಿರೆಡ್ಡಿ ನೇತೃತ್ವದ ಎಸ್‌ಐಟಿ ತಂಡ ಶಾಂತಿನಗರ ಹಾಗೂ ಬಿಟಿಎಂ ಬಡಾವಣೆಯಲ್ಲಿರುವ ಐಎಂಎ ಸಮೂಹ ಕಂಪನಿಗೆ ಸೇರಿದ ನಾಲ್ಕು ಫ್ರಂಟ್‌ ಲೈನ್‌ ಮಳಿಗೆಗಳ ಮೇಲೆ ದಾಳಿ ನಡೆಸಿ ₹ 1.20 ಕೋಟಿ ಮೌಲ್ಯದ ಔಷಧ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಎಸ್‌ಐಟಿ ಮುಖ್ಯಸ್ಥ ಬಿ.ಆರ್‌. ರವಿಕಾಂತೇಗೌಡ ಹಾಗೂ ಅಪರಾಧ ವಿಭಾಗದ ಡಿಸಿಪಿ ಗಿರೀಶ್‌ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT