ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐಎಂಎ ಸಮೂಹ ಕಂಪನಿ’ ವಂಚನೆ ಪ್ರಕರಣ: ಎಸ್‌ಐಟಿ ದಾಳಿ; ಚಿನ್ನ, ವಜ್ರ, ನಗದು ಜಪ್ತಿ

ಮನ್ಸೂರ್ ಖಾನ್ ಮನೆ, ನಿರ್ದೇಶಕರ ಮನೆ ಮೇಲೆ ದಾಳಿ
Last Updated 17 ಜೂನ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಐಎಂಎ ಸಮೂಹ ಕಂಪನಿ’ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು, ಜಯನಗರದಲ್ಲಿರುವ ‘ಐಎಂಎ ಜ್ಯುವೆಲ್ಸ್’ ಮಳಿಗೆ ಮೇಲೆ ಸೋಮವಾರ ದಾಳಿ ನಡೆಸಿದರು.

ಎಸ್‌ಐಟಿ ಮುಖ್ಯಸ್ಥ ಬಿ.ಆರ್.ರವಿಕಾಂತೇಗೌಡ ನೇತೃತ್ವದ ತಂಡ ಮಧ್ಯಾಹ್ನ ಮಳಿಗೆಗೆ ಹೋಗಿ ರಾತ್ರಿಯವರೆಗೂ ಪರಿಶೀಲನೆ ನಡೆಸಿತು. ಕಂಪನಿ ಸಿಬ್ಬಂದಿ ಸಮ್ಮುಖದಲ್ಲಿ ಚಿನ್ನ ಮತ್ತು ವಜ್ರದ ಆಭರಣ, ಹಾಗೂ ನಗದು ಜಪ್ತಿ ಮಾಡಿತು.

ಸಾವಿರಾರು ಜನರಿಂದ ಷೇರು ಸಂಗ್ರಹಿಸಿದ್ದ ಕಂಪನಿಯ ಮಾಲೀಕ ಮನ್ಸೂರ್ ಖಾನ್, ಹೂಡಿಕೆದಾರರನ್ನು ವಂಚಿಸಿ ಪರಾರಿಯಾಗಿದ್ದಾನೆ. ಆ ಬಗ್ಗೆ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ, ಕಂಪನಿಯ ಆಸ್ತಿಗಳ ಮೇಲೆ ಪೊಲೀಸರು ದಾಳಿ ಮಾಡಿದರು.

ಜಯನಗರ ಹಾಗೂ ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯಲ್ಲಿರುವ ಚಿನ್ನದ ಆಭರಣ ಮಳಿಗೆ, ಗೋಲ್ಡ್‌ ಲೋನ್ ಮಳಿಗೆ, ಬನ್ನೇರುಘಟ್ಟದ ಮಾಲ್‌ಗೆ ಪೊಲೀಸರೇ ಬೀಗ ಜಡಿದಿದ್ದರು. ಜಯನಗರದ ಆಭರಣ ಮಳಿಗೆಗೆ ಹಾಕಿದ್ದ ಬೀಗವನ್ನು ಸೋಮವಾರ ತೆರೆದ ಎಸ್‌ಐಟಿ ಅಧಿಕಾರಿಗಳು, ಮಳಿಗೆಯೊಳಗಿದ್ದ ಆಭರಣ, ವಜ್ರ ಲೆಕ್ಕ ಮಾಡಿದರು.

‘ಕಂಪನಿಯ ಮಾಲೀಕ ಮನ್ಸೂರ್ ಖಾನ್ ಮನೆ ಹಾಗೂ ನಿರ್ದೇಶಕರ ಮನೆ ಮೇಲೆ ದಾಳಿ ಮಾಡಿ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಅದನ್ನು ಆಧರಿಸಿ ಜಯನಗರದ ಮಳಿಗೆ ಮೇಲೆ ದಾಳಿ ಮಾಡಲಾಯಿತು. ಮಳಿಗೆಯಲ್ಲಿದ್ದ ಚಿನ್ನದ ಆಭರಣ, ಡೈಮಂಡ್‌ ಜಪ್ತಿ ಮಾಡಿ ಸುಪರ್ದಿಗೆ ಪಡೆಯಲಾಗಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

‘ಚಿನ್ನದ ಆಭರಣ ಹಾಗೂ ಡೈಮಂಡ್‌ಗಳ ಮೌಲ್ಯವೆಷ್ಟು ಎಂಬುದನ್ನು ಇನ್ನಷ್ಟೇ ಲೆಕ್ಕ ಮಾಡಬೇಕಿದೆ. ನಂತರ, ನ್ಯಾಯಾಲಯಕ್ಕೆ ಮಾಹಿತಿ ನೀಡಿ ಅದರ ನಿರ್ದೇಶನದಂತೆ ಮುಂದುವರಿಯಲಿದ್ದೇವೆ’ ಎಂದು ಮೂಲಗಳು ಹೇಳಿವೆ.

ಡಿಸಿಪಿಗೆ ದೂರು ನೀಡಿದ ಶಿಕ್ಷಕರು: ‘ಐಎಂಎ ಸಮೂಹ’ ಕಂಪನಿ ದತ್ತು ಪಡೆದಿದ್ದ ‘ವಿಕೆಓ’ ಶಾಲೆಯ 900ಕ್ಕೂ ಹೆಚ್ಚು ಮಕ್ಕಳು ಅತಂತ್ರ ಸ್ಥಿತಿಯಲ್ಲಿದ್ದು, ಅದರ ಜೊತೆಗೆ ಶಿಕ್ಷಕರು ಸಹ ಕಂಗಾಲಾಗಿದ್ದಾರೆ. ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದು, ಭಯಗೊಂಡಿರುವ ಶಿಕ್ಷಕರು ಪೂರ್ವ ವಿಭಾಗದ ಡಿಸಿಪಿ ರಾಹುಲ್‌ಕುಮಾರ್ ಅವರಿಗೆ ದೂರು ನೀಡಿದ್ದಾರೆ.

‘ಕೆಲಸಕ್ಕೆ ಸೇರುವ ವೇಳೆಯಲ್ಲಿ ಕಂಪನಿಯವರು ಅಸಲಿ ಅಂಕಪಟ್ಟಿಗಳನ್ನು ಪಡೆದಿದ್ದರು. ಅವೆಲ್ಲವೂ ಕಂಪನಿ ಕಚೇರಿಯಲ್ಲಿವೆ. ಈಗ ಕಚೇರಿಗೆ ಬೀಗ ಹಾಕಲಾಗಿದ್ದು, ನಮಗೆ ಅಂಕಪಟ್ಟಿ ಕೊಡಿಸಿ’ ಎಂದು ದೂರಿನಲ್ಲಿ ಕೋರಿದ್ದಾರೆ.

‘70ಕ್ಕೂ ಹೆಚ್ಚು ಶಿಕ್ಷಕರು ಕೆಲಸ ಮಾಡುತ್ತಿದ್ದರು. ಈಗ ಶಾಲೆ ಸಂಕಷ್ಟದಲ್ಲಿದ್ದು, ತರಗತಿಗಳು ಸಹ ನಡೆಯುತ್ತಿಲ್ಲ. ಬೇರೆ ಕಡೆ ಕೆಲಸಕ್ಕೆ ಹೋಗಬೇಕಾದರೆ ಅಸಲಿ ಅಂಕಪಟ್ಟಿಗಳನ್ನು ಕೇಳುತ್ತಿದ್ದಾರೆ. ಅವು ಸಹ ನಮ್ಮ ಬಳಿ ಇಲ್ಲ. ಜೊತೆಗೆ, ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದೀರಾ ಎಂದು ಹೇಳಿಕೊಂಡು ಅಪರಿಚಿತರು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ’ ಎಂದು ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.

ಪತ್ನಿ ಮನೆಯಲ್ಲೂ ಜಪ್ತಿ

ಮನ್ಸೂರ್ ಖಾನ್‌ ಮದುವೆಯಾಗಿದ್ದ ಎನ್ನಲಾದ ಮೂರನೇ ಪತ್ನಿ ಮನೆ ಮೇಲೂ ಎಸ್‌ಐಟಿ ಅಧಿಕಾರಿಗಳು ಸೋಮವಾರ ದಾಳಿ ಮಾಡಿದ್ದು, ನಗದು ಹಾಗೂ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ‘ಆರೋಪಿ ಮನ್ಸೂರ್ ಖಾನ್‌ಗೆ ಎರಡು ಮದುವೆಯಾಗಿರುವ ಅಧಿಕೃತ ಮಾಹಿತಿ ಇದೆ. ಮೂರನೇ ಮದುವೆಯಾಗಿರುವ ಮಾಹಿತಿ ಸಿಗುತ್ತಿದ್ದಂತೆ ಆ ಮಹಿಳೆ ಮನೆ ಮೇಲೆ ದಾಳಿ ನಡೆಸಲಾಯಿತು. ದಾಖಲೆ ಇಲ್ಲದ ₹3 ಲಕ್ಷ ನಗದು, ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಮನ್ಸೂರ್‌ ಬಂಧನ ಶೀಘ್ರ

ಮೈಸೂರು: ಐಎಂಎ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮನ್ಸೂರ್‌ನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

‘ಪೊಲೀಸರು ಈಗಾಗಲೇ ಮನ್ಸೂರ್‌ ಹಾಗೂ ಐಎಂಎಗೆ ಸಂಬಂಧಿಸಿದವರ ಕೆಲ ಕಚೇರಿ, ಅಂಗಡಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಆಸ್ತಿ ಪತ್ತೆಯಾದರೆ ಅದನ್ನೂ ಮುಟ್ಟುಗೋಲು ಹಾಕಿಕೊಂಡು, ಜನರಿಗೆ ದುಡ್ಡು ವಾಪಸ್ ಕೊಡಿಸಲಾಗುವುದು’ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಈ ಪ್ರಕರಣದಲ್ಲಿ ಸಚಿವ, ಶಾಸಕ ಯಾರೇ ಇದ್ದರೂ ಪಾರಾಗಲು ಅವಕಾಶ ನೀಡಲ್ಲ. ನಮ್ಮ ಪೊಲೀಸರ ಮೇಲೆ ನಂಬಿಕೆಯಿದ್ದು, ಸಿಬಿಐಗೆ ವಹಿಸುವ ಪ್ರಶ್ನೆಯೇ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT