ಗುರುವಾರ , ಡಿಸೆಂಬರ್ 5, 2019
19 °C
ಐಎಂಎ: ₹ 1,640 ಕೋಟಿ ಮೋಸ

15 ವರ್ಷದಲ್ಲಿ 45 ಕಂಪನಿ ವಂಚನೆ:ಮೋಸ ಹೋದ ಪೈಕಿ ಯಾರೊಬ್ಬರಿಗೂ ಪರಿಹಾರ ಸಿಕ್ಕಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐಎಂಎ ಮಾದರಿಯಲ್ಲೇ ರಾಜ್ಯದಲ್ಲಿ 2004ರಿಂದ ಈವರೆಗೆ 45 ಕಂಪನಿಗಳು ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿವೆ. ಆದರೆ, ವಂಚನೆಗೆ ಒಳಗಾದವರ ಪೈಕಿ ಯಾರೊಬ್ಬರಿಗೂ ಪರಿಹಾರ ಸಿಕ್ಕಿಲ್ಲ.

ವಂಚನೆಗೆ ಸಂಬಂಧಿಸಿದ ಪ್ರಕರಣಗಳು ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿವೆ. ಕೆಲವು ಪ್ರಕರಣಗಳಲ್ಲಿ ಠಾಣಾ ಮಟ್ಟದಲ್ಲೇ ತನಿಖೆ ನಡೆಯುತ್ತಿದೆ. ಕೆಲವು ಪ್ರಕರಣಗಳನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ಮಾಡುತ್ತಿದೆ. ಬಹುತೇಕ ಪ್ರಕರಣಗಳಲ್ಲಿ ಈಗಾಗಲೇ ಆಸ್ತಿ ಜಪ್ತಿ ಮಾಡಲಾಗಿದೆ.

‘ಹೂಡಿಕೆದಾರರಿಗೆ ಭಾರಿ ಮೊತ್ತ ವಂಚಿಸಿದ 13 ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಯುತ್ತಿದೆ. ಕೆಲವು ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿಯೂ ಸಲ್ಲಿಕೆಯಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಐಎಂಎ ಸಮೂಹ ಸಂಸ್ಥೆಯ ಮಾಲೀಕ ಮೊಹ್ಮದ್‌ ಮನ್ಸೂರ್‌ ಖಾನ್‌ ನಡೆಸಿದ ವಂಚನೆಯ ಬಗ್ಗೆ ಇನ್ನೂ ದೂರುಗಳು ಸಲ್ಲಿಕೆಯಾಗುತ್ತಿವೆ’ ಎಂದು ಅವರು ವಿವರಿಸಿದರು.

ಐಎಂಎ: ₹ 1,640 ಕೋಟಿ ಮೋಸ

ಐಎಂಎ ಸಮೂಹ ಕಂಪನಿ ವಿರುದ್ಧ ಬುಧವಾರ ಅಂತ್ಯದವರೆಗೆ 45,400 ದೂರುಗಳು ದಾಖಲಾಗಿದ್ದು, ಅವರಿಗೆ ₹ 1,640 ಕೋಟಿಯಷ್ಟು ವಂಚನೆಯಾಗಿರುವುದು ತನಿಖೆಯಿಂದ ಗೊತ್ತಾಗಿದೆ.

ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಶಿವಾಜಿನಗರದ ಕಲ್ಯಾಣ ಮಂಟಪದಲ್ಲಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆದು ದೂರುಗಳನ್ನು ಸ್ವೀಕರಿಸುತ್ತಿದ್ದಾರೆ. ಬುಧವಾರ ಒಂದೇ ದಿನದಲ್ಲೇ 1200 ಮಂದಿ ದೂರು ನೀಡಿದ್ದು, ಅವರಿಗೆ ₹ 53 ಕೋಟಿ ವಂಚನೆಯಾಗಿರುವುದಾಗಿ ದಾಖಲೆಗಳ ಪರಿಶೀಲನೆಯಿಂದ ಗೊತ್ತಾಗಿದೆ.

‘ಕಂಪನಿಯಿಂದ ವಂಚನೆಗೊಳಗಾದವರು ದೂರು ನೀಡುತ್ತಿದ್ದಾರೆ. ಹೊರ ರಾಜ್ಯ ಹಾಗೂ ಹೊರ ದೇಶದಿಂದಲೂ ಬಂದು ದೂರು ಕೊಡುತ್ತಿದ್ದಾರೆ. ಹೀಗಾಗಿ ನಿತ್ಯವೂ ದೂರಿನ ಸಂಖ್ಯೆ ಸಾವಿರದ ಗಡಿ ದಾಟುತ್ತಿದೆ’ ಎಂದು ಪೊಲೀಸರು ಹೇಳಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು