ಮಂಗಳವಾರ, ಏಪ್ರಿಲ್ 7, 2020
19 °C
ಕಲಬುರ್ಗಿಯಲ್ಲಿ ಮತ್ತೊಂದು ಪ್ರಕರಣ l ಸೋಂಕಿತರ ಸಂಖ್ಯೆ ಏಳಕ್ಕೆ ಏರಿಕೆ

ಕೊರೊನಾ: ರಾಜ್ಯ ಭಾಗಶಃ ಸ್ತಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌–19 ರೋಗಕ್ಕೆ ಮೃತಪಟ್ಟ ಕಲಬುರ್ಗಿಯ ಮೊಹಮ್ಮದ್ ಹುಸೇನ್ ಸಿದ್ದಿಕಿ ಕುಟುಂಬದ 45 ವರ್ಷ ವಯಸ್ಸಿನ ಸದಸ್ಯರೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ 7ಕ್ಕೆ ಏರಿದೆ.

ಸೋಂಕು ಶಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಭಾನುವಾರ ಒಂದೇ ದಿನ 31 ಮಂದಿಯನ್ನು ವಿವಿಧ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಈ ಹಿಂದೆ, ಸೋಂಕು ದೃಢಪಟ್ಟ ಐವರಿಗೆ ಚಿಕಿತ್ಸೆ ಮುಂದುವರಿದಿದೆ. ಸೋಂಕು ಶಂಕೆಯಿಂದ ಒಟ್ಟು 56 ಮಂದಿಯ ಮೇಲೆ ನಿಗಾ ಇಡಲಾಗಿದೆ. 19 ಮಂದಿಯ ಪರೀಕ್ಷಾ ವರದಿ ಬಂದಿದ್ದು, ಯಾರಿಗೂ ಸೋಂಕು ತಗುಲಿಲ್ಲ ಎನ್ನುವುದು ಖಚಿತವಾಗಿದೆ. ಹೊಸದಾಗಿ 131 ಮಂದಿಯ ರಕ್ತ ಮತ್ತು ಗಂಟಲಿನ ದ್ರವದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ‍ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

ಸೋಂಕು ಹರಡುವ ಭೀತಿ ಇಡೀ ರಾಜ್ಯವನ್ನು ಆವರಿಸಿಕೊಂಡಿದ್ದು, ಬಹುತೇಕ ಕಡೆಗಳಲ್ಲಿ ಭಾನುವಾರ ಕೂಡಾ ಜನರ ಓಡಾಟ ಇಲ್ಲದೆ ಸ್ತಬ್ಧವಾಗಿತ್ತು. ನಿತ್ಯ ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ರಸ್ತೆಗಳಲ್ಲಿ ಸಂಚಾರ ವಿರಳವಾಗಿತ್ತು. ವಾರಾಂತ್ಯವಾಗಿದ್ದರೂ ಜನರು ಮನೆಯಿಂದ ಹೊರಬರಲಿಲ್ಲ. ಹೆಚ್ಚಿನ ಅಂಗಡಿ ಮುಂಗಟ್ಟುಗಳೂ ಮುಚ್ಚಿದ್ದವು. ರೈಲುಗಳು, ಬಸ್‌ಗಳಲ್ಲಿ ಪ್ರಯಾಣಿಕ ಸಂಖ್ಯೆ ಕ್ಷೀಣಿಸಿತ್ತು.

ಈ ಮಧ್ಯೆ, ಆರೋಗ್ಯ ಇಲಾಖೆಯ ನಿರ್ದೇಶಕ ಡಾ. ಓಂ ಪ್ರಕಾಶ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಸರ್ಕಾರಿ–ಖಾಸಗಿ ವಲಯದ ವೈದ್ಯಕೀಯ ಸಂಘಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮನ್ವಯ ಸಮಿತಿಯನ್ನು ಸರ್ಕಾರ ರಚಿಸಿದೆ. ಅಲ್ಲದೆ, ಸೋಂಕು ಹರಡುವಿಕೆ ತಡೆಗೆ ಕೈಗೊಂಡ ಕ್ರಮ ಮತ್ತು ಸದ್ಯದ ಪರಿಸ್ಥಿತಿಯ ಮಾಹಿತಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದೆ.

‘ಸಿದ್ದಿಕಿ ಕುಟುಂಬದ ನಾಲ್ವರು ಶಂಕಿತರ ಪೈಕಿ ಮೂವರಿಗೆ ಸೋಂಕು ತಗುಲಿಲ್ಲ ಎಂಬ ಪರೀಕ್ಷಾ ವರದಿ ಬಂದಿತ್ತು. ಆದರೆ, ನಾಲ್ಕನೇ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರನ್ನು ಪ್ರತ್ಯೇಕಿಸಿ, ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ಚೀನಾ, ಇಟಲಿ, ಇರಾನ್, ಕೊರಿಯಾ, ಫ್ರಾನ್ಸ್‌, ಸ್ಪೇನ್ ಮತ್ತು ಜರ್ಮನಿ ದೇಶಗಳನ್ನು ಕೊರೊನಾ ಬಾಧಿತ ದೇಶಗಳು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುತಿಸಿದೆ. ಹೀಗಾಗಿ ಈ ದೇಶಗಳಿಂದ ಬಂದ ಸೋಂಕು ಶಂಕಿತರನ್ನು ವಿಮಾನ ನಿಲ್ದಾಣಗಳಲ್ಲಿಯೇ ಪ್ರತ್ಯೇಕಿಸಿ, ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದೆ. ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆ ಹಾಗೂ 60 ವರ್ಷ ದಾಟಿದವರನ್ನೂ ಪ್ರತ್ಯೇಕಿಸಿ, ಮನೆಯಲ್ಲಿಯೇ ನಿಗಾ ವಹಿಸಲಾಗುತ್ತಿದೆ.

ಸೋಂಕು ಭೀತಿ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳು, ಬಂದರುಗಳ ಜತೆಗೆ ವಿಧಾನಸೌಧ, ವಿಕಾಸಸೌಧ, ಶಾಸಕರ ಭವನ, ಎಂ.ಎಸ್‌ ಬಿಲ್ಡಿಂಗ್‌, ಕೋರ್ಟ್‌ಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಲು ಆರೋಗ್ಯ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ರೈಲಿನಲ್ಲಿ ಹೊದಿಕೆ ಬಳಕೆ ಸ್ಥಗಿತ

ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ರೈಲಿನ ಹವಾನಿಯಂತ್ರಿತ ಬೋಗಿಗಳಲ್ಲಿ ಅಳವಡಿಸುವ ಪರದೆ ಹಾಗೂ ಪ್ರಯಾಣಿಕರಿಗೆ ನೀಡಲಾಗುವ ಹೊದಿಕೆಗಳನ್ನು ಕೆಲವು ದಿನಗಳ ಮಟ್ಟಿಗೆ ಬಳಸದಿರಲು ನೈಋತ್ಯ ಮತ್ತು ಪಶ್ಚಿಮ ರೈಲ್ವೆ ನಿರ್ಧರಿಸಿದೆ.

ಅದ್ಧೂರಿ ವಿವಾಹದಲ್ಲಿ ಸಿ.ಎಂ, ಎಚ್‌ಡಿಡಿ ಭಾಗಿ!

ಬೆಳಗಾವಿಯಲ್ಲಿ ಅದ್ಧೂರಿಯಾಗಿ ನಡೆದ ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಾಲ್ಗೊಂಡು ತಮ್ಮ ಆದೇಶವನ್ನು ತಾವೇ ಉಲ್ಲಂಘಿಸಿದರು. ಅಲ್ಲದೆ, ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಆರೋಗ್ಯ ಇಲಾಖೆಯವರು ಮುಂಜಾಗ್ರತಾ ಕ್ರಮವಾಗಿ ನಡೆಸುವ ತಪಾಸಣೆಗೂ ಮುಖ್ಯಮಂತ್ರಿ ಒಳಗಾಗಲಿಲ್ಲ.

ಹಿರಿಯೂರಿನಲ್ಲಿ ನಡೆದ ಜೆಡಿಎಸ್‌ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷನ ಪುತ್ರನ ಅದ್ಧೂರಿ ವಿವಾಹಕ್ಕೆ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಸಾಕ್ಷಿಯಾದರು. ಸಾವಿರಾರು ಜನರು ಈ ಎರಡೂ ವಿವಾಹದಲ್ಲಿ ಪಾಲ್ಗೊಂಡಿದ್ದರು.

ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ

ಬಾದಾಮಿ, ಐಹೊಳೆ, ಪಟ್ಟದಕಲ್ಲಿನ ಪುರಾತತ್ವ ಸ್ಮಾರಕಗಳಿಗೆ ಭಾನುವಾರದಿಂದ 22ರ ವರೆಗೆ ಪ್ರವಾಸಿಗರ ಭೇಟಿ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಬಂಡೀಪುರ ಸಫಾರಿ ಕ್ಯಾಂಪ್‌ ಹಾಗೂ ಈ ವ್ಯಾಪ್ತಿಯಲ್ಲಿನ ರೆಸಾರ್ಟ್‌, ಹೋಟೆಲ್‌ಗಳು ಮುಚ್ಚಿದ್ದು, ತಂಗಿದ್ದ ಪ್ರವಾಸಿಗರನ್ನು ವಾಪಸ್‌ ಕಳುಹಿಸಲಾಗಿದೆ. ದಾಂಡೇಲಿ ಹಾಗೂ ಜೊಯಿಡಾದಲ್ಲಿರುವ ಎಲ್ಲ ರೆಸಾರ್ಟ್, ಹೋಮ್‍ಸ್ಟೇ ಮತ್ತು ಲಾಡ್ಜ್‌ಗಳನ್ನು ಒಂದು ವಾರ ಕಡ್ಡಾಯವಾಗಿ ಮುಚ್ಚುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

‘ಶ್ರೀಶೈಲ ಜಾತ್ರೆಗೆ ಬರಬೇಡಿ’

ಆಂಧ್ರ ಪ್ರದೇಶದ ಶ್ರೀಶೈಲದಲ್ಲಿ ನಡೆಯುವ ಯುಗಾದಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಬರುತ್ತಿರುವ ಭಕ್ತರು ಯಾತ್ರೆಯನ್ನು ಸ್ಥಗಿತಗೊಳಿಸಬೇಕು ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕೋರಿದರು. ಉಕ್ಕಡಗಾತ್ರಿ ಕ್ಷೇತ್ರಕ್ಕೆ ಭೇಟಿ ನೀಡಲು ಬಯಸುವ ಭಕ್ತರು ಪ್ರವಾಸ ಮುಂದೂಡುವಂತೆ ಕ್ಷೇತ್ರದ ಆಡಳಿತ ಮಂಡಳಿ ಮನವಿ ಮಾಡಿದೆ.

7, 8, 9ನೇ ತರಗತಿ ಪರೀಕ್ಷೆ ಮುಂದೂಡಿಕೆ

ರಾಜ್ಯದಾದ್ಯಂತ 7,8 ಮತ್ತು 9ನೇ ತರಗತಿ ಪರೀಕ್ಷೆಗಳನ್ನು ಇದೇ 31 ರವರೆಗೆ ಮುಂದೂಡಲಾಗಿದೆ. ಮಾರ್ಚ್‌ 31ರ ಬಳಿಕ ಪರಿಸ್ಥಿತಿ ನೋಡಿಕೊಂಡು ದಿನಾಂಕ ಪ್ರಕಟಿಸಲಾಗುವುದು. ಈ ಆದೇಶ ಸಿಬಿಎಸ್‌ಇ, ಐಸಿಎಸ್‌ಇ, ಐಜಿಸಿಎಸ್‌ಇ, ಐಬಿ ಪಠ್ಯಕ್ರಮದ ಶಾಲೆಗಳಿಗೂ ಅನ್ವಯವಾಗುತ್ತದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಿಗದಿಯಂತೆ ಮಾರ್ಚ್‌ 27ರಿಂದ ಆರಂಭವಾಗಲಿವೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು