ಶುಕ್ರವಾರ, ಫೆಬ್ರವರಿ 26, 2021
30 °C
ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ ದಾಸ್ ಕಳವಳ

‘ಆರ್ಥಿಕ, ಸಾಮಾಜಿಕ ಭಯೋತ್ಪಾದನೆ ಸೃಷ್ಟಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮಂಗಳೂರು: ದೇಶದಲ್ಲಿ ಈಗ ಆರ್ಥಿಕ ಮತ್ತು ಸಾಮಾಜಿಕ ಭಯೋತ್ಪಾದನೆ ಯುಗ ಆರಂಭವಾಗಿದೆ. ಆ ಮೂಲಕ ಅರಾಜಕತೆ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಕಳವಳ ವ್ಯಕ್ತಪಡಿಸಿದರು.

ಎರಡು ದಿನಗಳ ‘ಜನನುಡಿ– 2018’ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಸಂವಿಧಾನೇತರ ಶಕ್ತಿಗಳು ಸಂಪತ್ತು ಮತ್ತು ಸಂಸ್ಕೃತಿಯ ಮೇಲೆ ಹತೋಟಿ ಸಾಧಿಸುವ ಮೂಲಕ ಆರ್ಥಿಕ, ಸಾಮಾಜಿಕ ಭಯೋತ್ಪಾದನೆಗೆ ನಾಂದಿ ಹಾಡುತ್ತಿವೆ’ ಎಂದರು.

ಸಂವಿಧಾನೇತರ ಶಕ್ತಿಗಳು ಜನರ ಬದುಕನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿವೆ. ಏಕ ಸಂಸ್ಕೃತಿಯನ್ನು ಪ್ರತಿಪಾದಿಸುತ್ತಿರುವ ಈ ಶಕ್ತಿಗಳು ಬಹುತ್ವವನ್ನು ನಾಶ ಮಾಡಲು ಪ್ರಯತ್ನಿಸುತ್ತಿವೆ. ಆಹಾರ, ಉಡುಗೆ, ಸಂಚಾರ ಎಲ್ಲವನ್ನೂ ನಿಯಂತ್ರಿಸುವ ಪ್ರಯತ್ನಕ್ಕೆ ಅಧಿಕಾರದಲ್ಲಿ ಕುಳಿತವರು ಬೆಂಬಲಿಸುತ್ತಿರುವುದು ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು.

'ಹಿಂದೆ ಸಂವಿಧಾನೇತರ ಶಕ್ತಿಗಳು ಕ್ರೈಸ್ತರ, ಮುಸ್ಲಿಮರ, ದಲಿತರ ಮೇಲೆ ದಾಳಿ ಮಾಡಿದವು. ಆಗ ಜನರು ಸುಮ್ಮನಿದ್ದರು. ಆದರೆ ಈಗ ಸಂವಿಧಾನದ ಮೇಲೆ ಆ ಶಕ್ತಿಗಳು ದಾಳಿ ಮಾಡುತ್ತಿವೆ. ಇದರಿಂದ ಇಡೀ ದೇಶ ಬಿಕ್ಕಟ್ಟಿನಲ್ಲಿದೆ' ಎಂದರು.

ನ್ಯಾಯಾಂಗದ ಮೇಲೂ ಬಾಹ್ಯ ಒತ್ತಡ ಹೇರಲಾಗುತ್ತಿದೆ. ಇದೇ ರೀತಿಯ ತೀರ್ಪು ನೀಡಬೇಕು, ವಿರುದ್ಧವಾದ ತೀರ್ಪು ನೀಡಿದರೆ ಒಪ್ಪುವುದಿಲ್ಲ ಎಂಬ ಬೆದರಿಕೆಗಳನ್ನು ಹಾಕಲಾಗುತ್ತಿದೆ. ಅಯೋಧ್ಯೆಯ ಪ್ರಕರಣದಲ್ಲೂ ಹೀಗೆಯೇ ಮಾಡಲಾಗುತ್ತಿದೆ ಎಂದು ಹೇಳಿದರು.

ಸರ್ಕಾರ ಜನರ ಸಂಕಟಗಳನ್ನು ಪರಿಹರಿಸಬೇಕು. ಆದರೆ, ಈಗ ಸರ್ಕಾರವೇ ಸಂಕಟಗಳನ್ನು ಸೃಷ್ಟಿಸುತ್ತಿದೆ. ದೇಶದ ಜನರಿಗೆ ಗತಿ ಯಾರು? ಭ್ರಷ್ಟಾಚಾರ ನಿಯಂತ್ರಣದ ಹೆಸರಿನಲ್ಲಿ ನೋಟುಗಳನ್ನು ನಿಷೇಧ ಮಾಡಿ ಜನರು ತಮ್ಮ ಹಣವನ್ನು ಬಳಕೆ ಮಾಡಲಾರದ ಸ್ಥಿತಿ ತಂದಿಟ್ಟಿದ್ದು ಇದಕ್ಕೆ ಉದಾಹರಣೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು