ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಾರ್ಥ ಅವರ ಭಾರಿ ಮೊತ್ತದ ಅಘೋಷಿತ ಆದಾಯ | ಕಿರುಕುಳವಲ್ಲ, ಕಾನೂನು ಕ್ರಮ: ಐಟಿ

Last Updated 30 ಜುಲೈ 2019, 20:09 IST
ಅಕ್ಷರ ಗಾತ್ರ

ಬೆಂಗಳೂರು: ‘ಹವಾಲಾ ವಹಿವಾಟು ನಡೆಸಿರುವ ಉದ್ಯಮಿ ಸಿದ್ಧಾರ್ಥ ಅವರು ಭಾರಿ ಮೊತ್ತದ ಅಘೋಷಿತ ಆದಾಯ ಹೊಂದಿದ್ದಾರೆ. ಈ ಬಾಬ್ತು ಅವರು ಪಾವತಿಸಬೇಕಿದ್ದ ನೂರಾರು ಕೋಟಿ ರೂಪಾಯಿ ತೆರಿಗೆಗಾಗಿ ಕೆಫೆ ಕಾಫಿ ಡೇ ಎಂಟರ್‌ಪ್ರೈಸಸ್‌ ಷೇರುಗಳನ್ನು ಜಪ್ತಿ ಮಾಡಲಾಗಿತ್ತು. ಈ ಕ್ರಮದ ಹಿಂದೆ ಕಿರುಕುಳ ನೀಡುವ ಉದ್ದೇಶ ಇರಲಿಲ್ಲ’ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

‘ಪರಿಷ್ಕೃತ ಆದಾಯ ವಿವರಗಳನ್ನು ಒಳಗೊಂಡ ಪರಿಷ್ಕೃತ ಲೆಕ್ಕಪತ್ರಗಳನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ್ದರೂ, ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ನಮ್ಮ ಷೇರುಗಳನ್ನು ಜಪ್ತಿ ಮಾಡಲಾಯಿತು.ಮೈಂಡ್‌ ಟ್ರೀ ಮಾರಾಟ ವ್ಯವಹಾರ ತಡೆಯಲು ಅದರ ಷೇರುಗಳನ್ನು ಜಪ್ತಿ ಮಾಡಲಾಗಿತ್ತು. ಆನಂತರ, ಕೆಫೆ ಕಾಫಿ ಡೇ ಷೇರುಗಳನ್ನು ವಶಕ್ಕೆ ಪಡೆಯಲಾಯಿತು’ ಎಂದು ಸಿದ್ಧಾರ್ಥ ಅವರು ಕೆಫೆ ಕಾಫಿ ಡೇ ಆಡಳಿತ ಮಂಡಳಿ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದರು. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ,ಆದಾಯ ತೆರಿಗೆ ಇಲಾಖೆ ವಿಸ್ತೃತವಾದ ಸ್ಪಷ್ಟನೆ ನೀಡಿದೆ.

ಈ ಮೂಲಗಳು ಹೇಳಿರುವುದಿಷ್ಟು

‘2017ರ ಆಗಸ್ಟ್‌ 2ರಂದು ಆದಾಯ ತೆರಿಗೆ ಅಧಿಕಾರಿಗಳು ಪ್ರಭಾವಿ ಕಾಂಗ್ರೆಸ್‌ ಮುಖಂಡ ಡಿ.ಕೆ. ಶಿವಕುಮಾರ್‌ ಹಾಗೂ ಅವರ ಹಣಕಾಸು ಸಹಾಯಕ ಚಂದ್ರಶೇಖರ ಸುಖಪುರಿ ಅವರ ಮನೆಗಳಲ್ಲಿ ಶೋಧ ನಡೆಸಿದ ಸಮಯದಲ್ಲಿ ಶಿವಕುಮಾರ್‌ ಅವರ ಪುತ್ರಿ, ಕೆಫೆ ಕಾಫಿ ಡೇ ಮತ್ತು ಮೆಸರ್ಸ್‌ ಸೋಲ್‌ ಸ್ಪೇಸ್‌ ಜತೆ ಹಣಕಾಸು ವಹಿವಾಟು ನಡೆಸಿದ್ದ ದಾಖಲೆ ಪತ್ತೆಯಾಯಿತು. ಬಳಿಕ ಸುಖಪುರಿ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ₹ 20 ಕೋಟಿಯನ್ನು ಕಾಂಗ್ರೆಸ್‌ ಮುಖಂಡರ ಖಾತೆಗೆ ಗೋಪ್ಯವಾಗಿ ಮರಳಿಸಿದ ಮಾಹಿತಿ ದೊರೆಯಿತು.

ಸಿಂಗಪುರದ ಪೌರತ್ವ ಹೊಂದಿರುವ ರಜನೀಶ್‌ ಗೋಪಿನಾಥ್‌ ಎಂಬುವರು ಈ ವಹಿವಾಟಿನಲ್ಲಿ ಭಾಗಿಯಾಗಿದ್ದು, ಶಿವಕುಮಾರ್‌ ಅವರ ಮನೆ ಶೋಧನೆ ಸಮಯದಲ್ಲೇ ಇವರ ಮನೆಯನ್ನೂ ಶೋಧಿಸಲಾಯಿತು. ರಜನೀಶ್‌ ಅವರ ಮನೆಯಲ್ಲಿ ₹ 1.2 ಕೋಟಿ ಹಣ ಸಿಕ್ಕಿತು. ಈ ಹಣ ಸಿದ್ಧಾರ್ಥ ಅವರಿಗೆ ಸೇರಿದ್ದು ಎಂದು ಅವರು ಹೇಳಿಕೆ ಕೊಟ್ಟರು. ಅಲ್ಲದೆ, ಗಡಿಯಾಚೆಗಿನ ದೇಶಗಳಲ್ಲಿ ನಡೆದಿರುವ ಹವಾಲ ವಹಿವಾಟುಗಳಿಗೆ ಸಂಬಂಧಿಸಿದಂತೆ ಹಲವಾರು ಮೆಸೇಜ್‌ಗಳು ಅವರ ಮೊಬೈಲ್‌ನಲ್ಲಿ ಪತ್ತೆಯಾಯಿತು. ಫೋನ್‌ ಸಂಭಾಷಣೆಗಳಲ್ಲೂ ಪ್ರಬಲವಾದ ಸಾಕ್ಷ್ಯಗಳು ದೊರೆತವು.

ಆದಾಯ ತೆರಿಗೆ ಇಲಾಖೆ ಸಂಗ್ರಹಿಸಿದ ಸಾಕ್ಷ್ಯಗಳು ಸಿದ್ಧಾರ್ಥ ಹಾಗೂ ಕೆಫೆ ಕಾಫಿ ಡೇ ಎಂಟರ್‌ಪ್ರೈಸಸ್‌ ವಶದಲ್ಲಿ ₹ 362.11 ಕೋಟಿ ಹಾಗೂ ₹ 118.02 ಕೋಟಿ ಲೆಕ್ಕ ತೋರಿಸದ ಆದಾಯ ಇರುವುದಾಗಿ ಖಚಿತಪಡಿಸಿದವು. ಸಿದ್ಧಾರ್ಥ ಅವರೂ ಇದನ್ನು ಒಪ್ಪಿಕೊಂಡಿದ್ದರು. ಆದರೆ, ಆನಂತರ ಐ.ಟಿಗೆ ಸಲ್ಲಿಸಿದ ಆದಾಯ ವಿವರವುಳ್ಳ ಲೆಕ್ಕಪತ್ರದಲ್ಲಿ ಈ ಅಘೋಷಿತ ಆದಾಯ ಕುರಿತು ಉಲ್ಲೇಖಿಸಿಲ್ಲ. ವೈಯಕ್ತಿಕವಾಗಿ ₹ 35 ಕೋಟಿ ನಗದು ಹೊಂದಿರುವುದಾಗಿ ತಿಳಿಸಿದ್ದರು. ಆದರೆ, ಸ್ವಯಂ ಘೋಷಿತ ಯೋಜನೆಯಡಿ ಪಾವತಿಸಬೇಕಾದ ₹ 14.5 ಕೋಟಿ ತೆರಿಗೆಯನ್ನು ಇದುವರೆಗೂ ಕಟ್ಟಿಲ್ಲ. ಕೆಫೆ ಕಾಫಿ ಡೇ ಎಂಟರ್‌ಪ್ರೈಸಸ್‌ ಘೋಷಿಸಿಕೊಂಡ ಆದಾಯ ತೆರಿಗೆಯನ್ನೂ ಪಾವತಿಸಿಲ್ಲ.

ಈ ಮಧ್ಯೆ, ಮೈಂಡ್‌ ಟ್ರೀ ಕಂಪನಿಯಲ್ಲಿ ಸಿದ್ಧಾರ್ಥ ಹಾಗೂ ಕೆಫೆ ಕಾಫಿ ಡೇ ಹೊಂದಿರುವಶೇ 21ರಷ್ಟು ಷೇರುಗಳನ್ನು ಮಾರುತ್ತಿರುವುದಾಗಿ ಕೆಲವು ಪತ್ರಿಕೆಗಳಲ್ಲಿ ಜನವರಿ 21ರಂದು ಸುದ್ದಿ ಪ್ರಕಟವಾಯಿತು. ಜನವರಿಯಲ್ಲೇ ಮಾರಾಟ ವ್ಯವಹಾರ ಅಂತಿಮಗೊಳ್ಳುವುದಿತ್ತು. ಈ ಬಗ್ಗೆ ತೆರಿಗೆ ಅಧಿಕಾರಿಗೆ ಅವರು ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಲಾಖೆಗೆ ಬರಬೇಕಿದ್ದ ತೆರಿಗೆಗಾಗಿ ಮೈಂಡ್‌ ಟ್ರೀ ಕಂಪನಿಯ 7.90 ಲಕ್ಷ ಷೇರುಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಯಿತು. ವಾಸ್ತವವಾಗಿ ಸಿದ್ಧಾರ್ಥ ಹಾಗೂ ಸಿಸಿಡಿ 2.30 ಲಕ್ಷ ಷೇರು ಹೊಂದಿದ್ದವು.

ಆನಂತರ, ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದ ಸಿದ್ಧಾರ್ಥ, ಮೈಂಡ್‌ ಟ್ರೀ ಷೇರುಗಳನ್ನು ಬಿಡುಗಡೆ ಮಾಡಿ. ಇದಕ್ಕೆ ಪರ್ಯಾಯವಾಗಿ ಕೆಫೆ ಕಾಫಿ ಡೇ ಷೇರುಗಳನ್ನು ಭದ್ರತೆಯಾಗಿ ನೀಡುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪಿ, ಫೆಬ್ರುವರಿ 13ರಂದು ಮೈಂಡ್‌ ಟ್ರೀ ಷೇರುಗಳನ್ನು ಬಿಡುಗಡೆ ಮಾಡಲಾಯಿತು. ಷೇರು ಮಾರಾಟದಿಂದ ಬರುವ ಹಣವನ್ನು ಮೈಂಡ್‌ ಟ್ರೀಗಾಗಿ ಪಡೆದಿರುವ ಸಾಲದ ಮರುಪಾವತಿ ಮಾಡಬೇಕು. ಉಳಿದಿದ್ದನ್ನು ತೆರಿಗೆ ಬಾಕಿಗೆ ಕಟ್ಟಬೇಕು ಎಂದು ಷರತ್ತು ಹಾಕಲಾಯಿತು. ಇದಕ್ಕೆ ಪ್ರತಿಯಾಗಿ ಫೆಬ್ರುವರಿ 13 ಮತ್ತು 14ರಂದು ಕೆಫೆ ಕಾಫಿ ಡೇಗೆ ಸೇರಿದ 2.50 ಲಕ್ಷ ಷೇರುಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಯಿತು.

ಸಿದ್ಧಾರ್ಥ ಏಪ್ರಿಲ್‌ 28ರಂದು ಮೈಂಡ್‌ ಟ್ರೀ ಷೇರುಗಳನ್ನು ಎಲ್‌ ಅಂಡ್‌ ಟಿ ಇನ್ಫೋಟೆಕ್‌ಗೆ ₹ 3,200 ಕೋಟಿಗೆ ಮಾರಾಟ ಮಾಡಿದರು. ಇದರಲ್ಲಿ ₹ 3,000 ಕೋಟಿ ಸಾಲ ಮರುಪಾವತಿ ಮಾಡಿದರು. ₹ 154 ಕೋಟಿಯನ್ನು ಷೇರು ವರ್ಗಾವಣೆ ವೆಚ್ಚಗಳಿಗೆ ಭರಿಸಿದರು. ಉಳಿದ ₹ 46 ಕೋಟಿಯನ್ನು ಕನಿಷ್ಠ ಪರ್ಯಾಯ ತೆರಿಗೆಯ ಮೊದಲ ಕಂತು ಕಟ್ಟಿದರು. ಕಾಫಿ ಡೇ ಪಾವತಿಸಬೇಕಿದ್ದ ಕನಿಷ್ಠ ಪರ್ಯಾಯ ತೆರಿಗೆ ₹ 300 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT