ಇಸ್ರೊದಿಂದ ‘ಮಾನವ ಬಾಹ್ಯಾಕಾಶ ಕೇಂದ್ರ’ ಸ್ಥಾಪನೆ

7

ಇಸ್ರೊದಿಂದ ‘ಮಾನವ ಬಾಹ್ಯಾಕಾಶ ಕೇಂದ್ರ’ ಸ್ಥಾಪನೆ

Published:
Updated:

 ಬೆಂಗಳೂರು: ಭಾರತೀಯ ಬಾಹ್ಯಾಕಾಶ ವಿಜ್ಞಾನದಲ್ಲಿ ಇತಿಹಾಸ ಸೃಷ್ಟಿಸಲಿರುವ ‘ಗಗನಯಾನ’ವೂ ಸೇರಿ ಭವಿಷ್ಯದ ಎಲ್ಲ ಮಾನವ ಸಹಿತ ಬಾಹ್ಯಾಕಾಶ ಯಾನ ಯೋಜನೆಗಳಿಗೆಂದೇ ಪ್ರತ್ಯೇಕ ‘ಮಾನವ ಬಾಹ್ಯಾಕಾಶ ಕೇಂದ್ರ’ವನ್ನು ಇಸ್ರೊ ಸ್ಥಾಪಿಸಿದೆ.

ಬಾಹ್ಯಾಕಾಶ ನಿಲ್ದಾಣ ನಿರ್ಮಾಣ, ಚಂದ್ರನ ಅಂಗಳಕ್ಕೆ ಮಾನವನನ್ನು ಕಳುಹಿಸುವ ಪರಿಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಕೇಂದ್ರ ಕಾರ್ಯ ನಿರ್ವಹಿಸುತ್ತದೆ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್‌ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಗಗನಯಾನ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದರಿಂದ ಬಾಹ್ಯಾಕಾಶ ವಿಜ್ಞಾನ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳ ವ್ಯಾಪ್ತಿಯನ್ನು ವಿಸ್ತರಿಸಲು
ಸಹಾಯಕವಾಗಲಿದೆ. ಆದ್ದರಿಂದ ಪ್ರತ್ಯೇಕ ಕೇಂದ್ರ ಹೊಂದಲು ನಿರ್ಧರಿಸಲಾಯಿತು. ಭವಿಷ್ಯದ ಎಲ್ಲ ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಈ ಕೇಂದ್ರವೇ ಉಸ್ತುವಾರಿ ವಹಿಸಲಿದೆ ಎಂದರು.

ಈ ಕೇಂದ್ರಕ್ಕೆ ಡಾ.ಉನ್ನಿಕೃಷ್ಣ ನಾಯರ್‌ ನಿರ್ದೇಶಕರಾಗಿರುತ್ತಾರೆ. ‘ಗಗನಯಾನ’ ಯೋಜನೆಯ ನಿರ್ದೇಶಕರನ್ನಾಗಿ ಹಟ್ಟನ್‌ ಅವರನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದರು.

ಮಾಧ್ಯಮ ಗೋಷ್ಠಿಯ ಪ್ರಮುಖ ಅಂಶ

- ‘ಗಗನಯಾನ’ ಯೋಜನೆಗೆ ₹ 10,000 ಕೋಟಿ ವೆಚ್ಚವಾಗಲಿದೆ. ಇದಕ್ಕಾಗಿ ಜಿಎಸ್‌ಎಲ್‌ವಿ ಮಾರ್ಕ್‌–3 ಬೃಹತ್‌ ರಾಕೆಟ್‌ ಬಳಸಲಾಗುವುದು. ಇದನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟದಿಂದ ಉಡಾವಣೆ ಮಾಡಲಾಗುವುದು.

- ಗಗನಯಾನದಿಂದ ಬೃಹತ್‌ ರಾಕೆಟ್‌ಗಳನ್ನು ಬಾಹ್ಯಾಕಾಶಕ್ಕೆ ಕಳಿಸುವ ಸಾಮರ್ಥ್ಯವನ್ನು ಹೊಂದಿದ ರಾಷ್ಟ್ರವಾಗಿ ಭಾರತ ಹೊರ ಹೊಮ್ಮಲಿದೆ. ಬಾಹ್ಯಾಕಾಶದಲ್ಲಿ ಜೀವ ವಿಜ್ಞಾನದ ಸಂಶೋಧನೆಗಳಿಗೆ ಹೆಚ್ಚಿನ ಉತ್ತೇಜನ ಸಿಗುತ್ತದೆ. ಇಸ್ರೊದಲ್ಲಿ ಬಾಹ್ಯಾಕಾಶ ಜೀವ ವಿಜ್ಞಾನಕ್ಕೆ ಸಂಬಂಧಿಸಿದ ಪ್ರತ್ಯೇಕ ವಿಭಾಗವನ್ನೂ ಆರಂಭಿಸಲಾಗುವುದು.

- ಮಾನವ ಸಹಿತ ‘ಗಗನಯಾನ’ 2021 ಡಿಸೆಂಬರ್‌ ಉಡಾವಣೆಗೆ ಮುನ್ನ 2020ರ ಡಿಸೆಂಬರ್‌ ಮತ್ತು 2021ರ ಜುಲೈನಲ್ಲಿ ಮಾನವರಹಿತ ನೌಕೆಗಳ ಪರೀಕ್ಷಾರ್ಥ ಉಡಾವಣೆ.

- ಮಾನವನನ್ನು ಬಾಹ್ಯಾಕಾಶಕ್ಕೆ ಕಳಿಸುವ ಅತ್ಯಂತ ಸಂಕೀರ್ಣ ತಂತ್ರಜ್ಞಾನಕ್ಕಾಗಿ ಈವರೆಗೆ ₹173 ಕೋಟಿ ಖರ್ಚು ಮಾಡಲಾಗಿದೆ.

- ಚಂದ್ರಯಾನ–2 ಯೋಜನೆಗೆ ₹800 ಕೋಟಿ ವೆಚ್ಚವಾಗಲಿದೆ. 10 ವರ್ಷಗಳ ಹಿಂದೆ ಚಂದ್ರಯಾನ–1 ಉಡಾವಣೆ ಮಾಡಲಾಗಿತ್ತು.

- 2019ರಲ್ಲಿ 32 ಉಡಾವಣೆಗಳು ನಡೆಯಲಿವೆ. ಕಾರ್ಟೋಸ್ಯಾಟ್‌ ಸೇರಿ ಅತ್ಯಂತ ಮಹತ್ವದ ಉಪಗ್ರಹಗಳನ್ನು ಉಡಾವಣೆ ಮಾಡಲಾಗುವುದು.

- ಜುಲೈನಲ್ಲಿ ಸಣ್ಣ ಉಪಗ್ರಹಗಳ ಉಡ್ಡಯನ ವಾಹನ (ಎಸ್‌ಎಸ್‌ಎಲ್‌ವಿ) ಯೋಜನೆಗೆ ಚಾಲನೆ. ಅತಿ ಸಣ್ಣ ಉಪಗ್ರಹಗಳನ್ನು 
ನಭಕ್ಕೆ ಒಯ್ಯುವ ಉಡ್ಡಯನ ವಾಹನಗಳನ್ನು 72 ಗಂಟೆಗಳಲ್ಲಿ ನಿರ್ಮಿಸಬಹುದು. 110 ಟನ್‌ ತೂಕದ ಎಸ್‌ಎಸ್‌ಎಲ್‌ವಿ ನಿರ್ಮಾಣಕ್ಕೆ ಆರು ಜನ ಸಾಕು. ಇದಕ್ಕೆ ತಗಲುವ ವೆಚ್ಚ ₹30 ಕೋಟಿ. 500 ಕೆ.ಜಿ ಪೇಲೋಡ್‌ ಒಯ್ಯಲಿದೆ.

- ಅಧಿಕ ಬ್ಯಾಂಡ್‌ವಿಡ್ತ್ ಸಾಮರ್ಥ್ಯದ ದೇಶದ ಡಿಜಿಟಲ್‌ ಇಂಡಿಯಾ ಯೋಜನೆಗೆ ಅನುಕೂಲವಾಗುವ ಉಪಗ್ರಹ ಜಿಸ್ಯಾಟ್‌–20 ಅನ್ನು ಸೆಪ್ಟಂಬರ್‌ ಅಥವಾ ಅಕ್ಟೋಬರ್‌ನಲ್ಲಿ ಉಡಾವಣೆ ಮಾಡಲಾಗುವುದು.

- ಮರು ಬಳಕೆ ಮಾಡಲು ಸಾಧ್ಯವಾಗುವ ಉಡ್ಡಯನ ವಾಹನದ ಪರೀಕ್ಷಾರ್ಥ ಪ್ರಾತ್ಯಕ್ಷಿಕೆ ಇದೇ ವರ್ಷ ನಡೆಯಲಿದೆ.

- 2020ರ ಜನವರಿಯಲ್ಲಿ ಸೂರ್ಯನ ಅಧ್ಯಯನಕ್ಕೆ ಆದಿತ್ಯ ಎಲ್‌–1 ಉಪಗ್ರಹ ಉಡಾವಣೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !