ಬುಧವಾರ, ನವೆಂಬರ್ 20, 2019
25 °C
ಮುಖ್ಯ ಮಾಹಿತಿ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ದೂರು

ಆಯೋಗದ ಶೀತಲ ಸಮರ ಬಹಿರಂಗ

Published:
Updated:

ಬೆಂಗಳೂರು: ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರು ಮತ್ತು ಇತರ ಮಾಹಿತಿ ಆಯುಕ್ತರ ಮಧ್ಯದ ಮುಸುಕಿನ ಗುದ್ದಾಟ ರಾಜ್ಯಪಾಲರ ಅಂಗಳ ಪ್ರವೇಶಿಸಿದೆ.

ಆಯೋಗದ ಎಲ್ಲ 9 ಮಂದಿ ಆಯುಕ್ತರು ಮುಖ್ಯ ಆಯುಕ್ತ ಎನ್.ಸಿ. ಶ್ರೀನಿವಾಸ್‌ ವಿರುದ್ಧ ರಾಜ್ಯಪಾಲರಿಗೆ ಶನಿವಾರ ದೂರು ಸಲ್ಲಿಸಿ, ತನಿಖೆಗೆ ಆದೇಶಿಸುವಂತೆ ಮನವಿ ಮಾಡಿದ್ದಾರೆ. 

‘ಮುಖ್ಯ ಆಯುಕ್ತರು ಅಸಮರ್ಥರಾಗಿದ್ದು, ಅಸಭ್ಯ ವರ್ತನೆ ಮಾಡುತ್ತಿದ್ದಾರೆ. ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಅನಗತ್ಯವಾಗಿ ಎಲ್ಲ ವಿಚಾರದಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ 2005ರ ಸೆಕ್ಷನ್‌ 17ರ ಅಡಿ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ. 

ಈ ಬಗ್ಗೆ 9 ಮಂದಿ ರಾಜ್ಯ ಮಾಹಿತಿ ಆಯುಕ್ತರೂ ಸುದ್ದಿಗೋಷ್ಠಿ ನಡೆಸಿ, ಮುಖ್ಯ ಆಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಅಧಿಕಾರ ಸ್ವೀಕರಿಸಿ ನಾಲ್ಕು ತಿಂಗಳಾದರೂ ಮುಖ್ಯ ಆಯುಕ್ತರು ನಮ್ಮ ಜತೆ ಒಂದೇ ಒಂದು ಸಭೆ ನಡೆಸಿಲ್ಲ. ಬ್ರಿಟಿಷರ ಆಡಳಿತ ವ್ಯವಸ್ಥೆಯನ್ನು ತರುತ್ತಿದ್ದು, ಆಯೋಗದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅವರಿಗೆ ಆಯೋಗದ ಆಡಳಿತ ವ್ಯವಸ್ಥೆ ಬಗ್ಗೆ ಕನಿಷ್ಠ ಜ್ಞಾನ ಕೂಡಾ ಇಲ್ಲ’ ಎಂದು ರಾಜ್ಯ ಮಾಹಿತಿ ಆಯುಕ್ತ ಎಲ್‌. ಕೃಷ್ಣಮೂರ್ತಿ ದೂರಿದರು. 

ರಾಜ್ಯ ಮಾಹಿತಿ ಆಯುಕ್ತ ಎಚ್‌.ಪಿ. ಸುಧಾಮದಾಸ್, ‘ಕೇಂದ್ರ ಮಾಹಿತಿ ಆಯೋಗವು ನವದೆಹಲಿಯ ವಿಜ್ಞಾನ ಭವನದಲ್ಲಿ ಮಾಹಿತಿ ಆಯುಕ್ತರುಗಳ ರಾಷ್ಟ್ರೀಯ ಸಮ್ಮೇಳನವನ್ನು ಪ್ರತಿವರ್ಷ ನಡೆಸುತ್ತದೆ. ಈ ಸಮ್ಮೇಳನಕ್ಕೆ ಮುಖ್ಯ ಆಯುಕ್ತರು ಹಾಗೂ ಉಳಿದ ಆಯುಕ್ತರು ಹೋಗುವ ಸಂಪ್ರದಾಯವಿದೆ. ಆದರೆ, ಈ ಬಾರಿ ಇದೇ 12ರಂದು ನಡೆದ ಸಮ್ಮೇಳನಕ್ಕೆ ನಮಗೆ ಮಾಹಿತಿ ನೀಡದೆ ತಾವೊಬ್ಬರೆ ಹೋಗಿ ಬಂದಿದ್ದಾರೆ’ ಎಂದು ಆರೋಪಿಸಿದರು.

ಕಾನೂನಿನ ಅಡಿ ಅಧಿಕಾರ ಚಲಾವಣೆ’

 ‘ಕಾನೂನಿನ ಅಡಿಯಲ್ಲಿ ಯಾವೆಲ್ಲ ಅಧಿಕಾರಗಳಿವೆಯೋ ಅವನ್ನು ಚಲಾಯಿಸುತ್ತಿರುವೆ. ಅಧಿಕಾರ ಸ್ವೀಕರಿಸಿದ ಬಳಿಕ ಆಯುಕ್ತರ ಜತೆಗೆ ನಾಲ್ಕು ಸಭೆಗಳನ್ನು ನಡೆಸಿರುವೆ. ಅದರಲ್ಲಿ ಎರಡು ಸಭೆಗಳು ಅಧಿಕೃತ’ ಎಂದು ಮುಖ್ಯ ಆಯುಕ್ತ ಎನ್‌.ಜಿ. ಶ್ರೀನಿವಾಸ್ ಹೇಳಿದರು.

ಆಯುಕ್ತರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು ಸಭೆ ನಡೆಸಿರುವ ದಾಖಲೆಗಳನ್ನು ಸುದ್ದಿಗಾರರ ಮುಂದೆ ಹಾಜರುಪಡಿಸಿದರು. 

‘ನವದೆಹಲಿಯಲ್ಲಿ ನಡೆಯುವ ಸಮಾವೇಶಕ್ಕೆ ಆಯೋಗದ ಎಲ್ಲ ಆಯುಕ್ತರೂ ಹೋಗಬೇಕೆಂಬ ನಿಯಮವಿಲ್ಲ. ಆಯೋಗಕ್ಕೆ ಆಗುತ್ತಿದ್ದ ಹೊರೆ ತಡೆಯಲು ನಾನೊಬ್ಬನೆ ಹೋಗಿ ಬಂದೆ’ ಎಂದು ಸ್ಪಷ್ಟಪಡಿಸಿದರು. 

ಪ್ರತಿಕ್ರಿಯಿಸಿ (+)