ಶುಕ್ರವಾರ, ಡಿಸೆಂಬರ್ 6, 2019
20 °C
ಗೋಲಿಯಾಥ್‌ ದುಂಬಿಯ ಆಕರ್ಷಣೆ: ಮಾಹಿತಿ ಪಡೆದ ಮಕ್ಕಳು

ಜಿಕೆವಿಕೆಯಲ್ಲಿ ‘ಕೀಟ ಲೋಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ಇಲ್ಲಿನ ಜಿಕೆವಿಕೆ ಆವರಣದಲ್ಲಿ ಶುಕ್ರವಾರ ಕೀಟ ಲೋಕ ಅನಾವರಣಗೊಂಡಿದೆ. ಸಂಸ್ಕರಿಸಿದ ಐದು ಸಾವಿರ ಕೀಟಗಳು, ಎರಡು ಸಾವಿರ ಜೀವಂತ ಕೀಟಗಳು, ಕೀಟದ ವರ್ಣಚಿತ್ರಗಳು, ಅದರ ವಾಸಸ್ಥಳ, ಹುಳುಗಳ ಹುತ್ತ, ಕಣಜ, ಗೂಡು ಸೇರಿದಂತೆ ಕೀಟಕ್ಕೆ ಸಂಬಂಧಿಸಿದ ಸಂಪೂರ್ಣ ಚಿತ್ರಣ ನೀಡುವ ‘ಕೀಟ ವಿಸ್ಮಯ’ ‍ಪ್ರದರ್ಶನ ಮಕ್ಕಳನ್ನು ಆಕರ್ಷಿಸುತ್ತಿದೆ. 

ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ವತಿಯಿಂದ ಜಿಕೆವಿಕೆಯ ಡಾ.ಬಾಬು ರಾಜೇಂದ್ರಪ್ರಸಾದ್ ಸಭಾಂಗಣದಲ್ಲಿ ಆಯೋಜಿಸಿರುವ ಮೂರು ದಿನಗಳ ‘ಕೀಟ ವಿಸ್ಮಯ’ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಪ್ರಪಂಚದ ಅತ್ಯಂತ ಭಾರವಾದ ಗೋಲಿಯಾಥ್ ದುಂಬಿ ಮತ್ತು ಅದರ ಮಾದರಿ ಜನರ ಗಮನ ಸೆಳೆಯುತ್ತಿದೆ. ಆಫ್ರಿಕಾ ಮೂಲದ ಈ ಕೀಟವು 42 ಗ್ರಾಂ ಭಾರವಿದ್ದು, 192 ಮಿಲಿ ಮೀಟರ್ ಉದ್ದವಿದೆ. ಇದರ ಜೊತೆಗೆ ಪ್ರಪಂಚದ ಅತಿಚಿಕ್ಕ ಕೀಟ ‘ಫೇರಿ ಫ್ಲೈ’ ಜನರನ್ನು ಆಕರ್ಷಿಸುತ್ತಿದೆ.

ತಸಾರ್ ಮತ್ತು ಎರಿ ಜಾತಿಯ ರೇಷ್ಮೆ ಹುಳುಗಳು, ಎಲೆಯನ್ನು ಹೋಲುವ ಕೀಟದ ಭಿತ್ತಿ ಚಿತ್ರ, ಸೊಳ್ಳೆ ಮತ್ತು ನೊಣದಿಂದ ಮನುಷ್ಯನಿಗೆ ಹರಡುವ ರೋಗಗಳ ಕುರಿತ ಪ್ರದರ್ಶನ, ವಲಸೆಗೆ ಪ್ರಸಿದ್ಧವಾಗಿರುವ ಮೊನಾರ್ಕ್‌ ಕೀಟ, ಜೇನು ನೊಣಗಳ ವಿವಿಧ ಪ್ರಭೇದ
ಗಳು ಹಾಗೂ ರಾಜ್ಯದ ಸಹ್ಯಾದ್ರಿಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಚಿಟ್ಟೆಗಳೂ ವಿಶೇಷ ಆಕರ್ಷಣೆಯಾಗಿವೆ.

ವಿದ್ಯಾರ್ಥಿಗಳು, ಶಿಕ್ಷಕರು, ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರು, ಕುತೂಹಲದಿಂದ ಪ್ರದರ್ಶನವನ್ನು ವೀಕ್ಷಿಸುವುದರ ಜೊತೆಗೆ ತಜ್ಞರಿಂದ ಮಾಹಿತಿ ಪಡೆದರು. ಅಲ್ಲದೆ ಮಕ್ಕಳು ಕೀಟಗಳ ಪಕ್ಕದಲ್ಲಿ ನಿಂತು ಛಾಯಾಚಿತ್ರಗಳನ್ನು ತೆಗೆಸಿಕೊಂಡರೆ ಕೆಲವರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು