‘ಕೊಳವೆಬಾವಿಯ ಅಂತರ್ಜಲ ಕಲುಷಿತ ವರದಿ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ’

ಶನಿವಾರ, ಏಪ್ರಿಲ್ 20, 2019
25 °C

‘ಕೊಳವೆಬಾವಿಯ ಅಂತರ್ಜಲ ಕಲುಷಿತ ವರದಿ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ’

Published:
Updated:

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕೊಳವೆಬಾವಿಯ ಅಂತರ್ಜಲ ಕಲುಷಿತವಾದ ಕುರಿತು ‘ಪ್ರಜಾವಾಣಿ’ ಭಾನುವಾರ (ಏಪ್ರಿಲ್‌ 14) ಪ್ರಕಟಿಸಿದ ‘ಒಳನೋಟ’ ಸಮಗ್ರ ವರದಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಅದರ ಕೆಲವು ಅಭಿಪ್ರಾಯಗಳು ಇಲ್ಲಿವೆ.

‘ವರದಿ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ’

ಒಳನೋಟ ವರದಿ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ. ಆಮ್ಲಜನಕದಷ್ಟೇ ಕುಡಿಯುವ ನೀರು ಸಹ ಮನುಷ್ಯನಿಗೆ ಮುಖ್ಯ. ಸ್ವಾತಂತ್ರ್ಯ ಸಿಕ್ಕು 70 ವರ್ಷ ಕಳೆದರೂ, ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತಿಲ್ಲ. ಸರ್ಕಾರಗಳು ಜನರ ಆರೋಗ್ಯ ರಕ್ಷಣೆಗೆ ತಕ್ಷಣ ಮುಂದಾಗಬೇಕು.

-ಬೀರಣ್ಣ ನಾಯಕ ಮೊಗಟಾ, ಯಲ್ಲಾಪುರ

‘ನೀರಿನ ಮಹತ್ವದ ಕುರಿತು ಅರಿವು ಮೂಡಿಸಬೇಕು’

ತಪ್ಪದೇ ಮಳೆ ನೀರನ್ನು ಸಂಗ್ರಹಿಸಬೇಕು. ಹಾಗೆ ಮಾಡುವುದರಿಂದ ಮುಂದಿನ ಪೀಳಿಗೆಗೆ ಅಂತರ್ಜಲ ಉಳಿಸಬಹುದು. ಮಳೆ ನೀರು ಸಂಗ್ರಹದ ಕುರಿತು ಜನರಿಗೆ ಮಾಹಿತಿ ಕೊರತೆ ಇದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನೀರಿನ ಮಹತ್ವದ ಕುರಿತು ಸರ್ಕಾರ ಅರಿವು ಮೂಡಿಸಬೇಕು.

-ಎನ್‌. ಡಿಂಡಿಮ ಭೂಷಣ್, ಮೈಸೂರು 

ಇದನ್ನೂ ಓದಿ: ವಿಷ ಉಗುಳುವ ಕೊಳವೆಬಾವಿಗಳು

‘ತುಂಬಾ ಚೆನ್ನಾಗಿ ಮೂಡಿಬಂದಿದೆ’

‘ವಿಷ ಉಗುಳುವ ಕೊಳವೆ ಬಾವಿಗಳು’ ಎಂಬ ಶೀರ್ಷಿಕೆಯ ಸಮಗ್ರ ವರದಿ ತುಂಬಾ ಚೆನ್ನಾಗಿ ಮೂಡಿಬಂದಿದೆ. ‘ಪ್ರಜಾವಾಣಿ’ ಬಳಗಕ್ಕೆ ಧನ್ಯವಾದಗಳು. ಮಾನವನ ಸ್ವಾರ್ಥದಿಂದಾಗಿ ಪರಿಸರ ನಾಶವಾಗುತ್ತಿದೆ. ಇದರ ಪರಿಣಾಮ ಅಂತರ್ಜಲ ಕುಸಿತಗೊಂಡಿದೆ. ಜನರು ಇನ್ನಾದರೂ ಎಚ್ಚೆತ್ತು ಪರಿಸರ ರಕ್ಷಣೆಗೆ ಮುಂದಾಗಬೇಕು.

-ಎಂ.ಎಂ.ವಿನಾಯಕ, ಹಂಪಸಾಗರ, ಬಳ್ಳಾರಿ

‘ಇಚ್ಛಾಶಕ್ತಿ ಕೊರತೆಯೇ ಸಮಸ್ಯೆಗೆ ಕಾರಣ’

ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಜನರು ಕಲುಷಿತ ನೀರು ಕುಡಿಯುವಂತಾಗಿದೆ. ಅವೈಜ್ಞಾನಿಕ ಪೈಪ್‌ಲೈನ್‌ ಮತ್ತು ಚರಂಡಿ ವ್ಯವಸ್ಥೆ, ನದಿಗಳನ್ನು ಜೋಡಿಸದಿರುವುದು ಸಮಸ್ಯೆಯನ್ನು ಉಲ್ಬಣಿಸುವಂತೆ ಮಾಡಿದೆ. ವಿಷಕಾರಿ ಅಂಶಗಳು ಕುಡಿಯುವ ನೀರಿನ್ನು ಸೇರಿ, ಜನರ ಆರೋಗ್ಯವನ್ನು ಹದಗೆಡಿಸುತ್ತಿವೆ.

–ಭೀಮಾಶಂಕರ ಹಳಿಸಗರ, ಯಾದಗಿರಿ

 ‘ನೀರನ್ನು ಮಿತವಾಗಿ ಬಳಸಬೇಕು’

ಅವೈಜ್ಞಾನಿಕವಾಗಿ ಕೊಳವೆಬಾವಿ ಕೊರೆಯುವುದನ್ನು ಮೊದಲು ನಿಲ್ಲಿಸಬೇಕು. ನೀರಿನ ಮಹತ್ವ ಅರಿತು ಮಿತವಾಗಿ ಬಳಸಬೇಕು. ಕುಡಿಯುವ ನೀರಿನ ವಿಷಯವನ್ನು ಸರ್ಕಾರ ಆದ್ಯತೆಯಾಗಿ ಪರಿಗಣಿಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು.

–ಬೀರೇಶ ಹೀಲದಹಳ್ಳಿ, ರಾಣೇಬೆನ್ನೂರು

‘ಇಸ್ರೇಲ್‌ ಮಾದರಿ ನೀರಾವರಿ ಪದ್ಧತಿ ಪರಿಚಯಿಸಬೇಕು’

ಇಸ್ರೇಲ್‌ ಮಾದರಿಯಲ್ಲಿ ಹನಿ ನೀರಾವರಿ ಪದ್ಧತಿಯನ್ನು ಪರಿಚಯಿಸಬೇಕು. ಇಲ್ಲದಿದ್ದರೆ, ಜನರು ಅವೈಜ್ಞಾನಿಕವಾಗಿ ಮತ್ತಷ್ಟು ಕೊಳವೆಬಾವಿಗಳನ್ನು ಕೊರೆಯುತ್ತಾರೆ. ಇದರಿಂದ ನೀರು ವಿಷಯುಕ್ತವಾಗಿ ಭವಿಷ್ಯದಲ್ಲಿ ಮನುಷ್ಯನ ದೇಹ ರೋಗಗಳ ಗೂಡಾಗಲಿದೆ.

–ಕಿರಣ ಯಲಿಗಾರ, ಬೆಳಗಾವಿ

ಇದನ್ನೂ ಓದಿ: ಮಳೆನೀರು ಕೊಯ್ಲು: ನಾಗರಿಕರಿಗಿಲ್ಲ ಆಸಕ್ತಿ, ಆಡಳಿತಕ್ಕೂ ನಿರಾಸಕ್ತಿ

‘ವರದಿ ಓದಿ ಆತಂಕವಾಯಿತು’

ಕೊಳವೆಬಾವಿಗಳು ವಿಷ ಉಗುಳುತ್ತಿವೆ ಎನ್ನುವ ಸಮಗ್ರ ವರದಿಯನ್ನು ಓದಿ ಆತಂಕವಾಯಿತು. ಕಡಿಮೆಯಾಗುತ್ತಿರುವ ವಾರ್ಷಿಕ ಮಳೆಯ ಪ್ರಮಾಣ ಮತ್ತು ಪಾತಾಳ ಸೇರುತ್ತಿರುವ ಅಂತರ್ಜಲ ನಮ್ಮ ಮುಂದಿನ ಭವಿಷ್ಯವನ್ನು ನಿಧಾನವಾಗಿ ಬಿಕ್ಕಟ್ಟಿಗೆ ತಳ್ಳುತ್ತಿವೆ. ನೀರು ಪೋಲಾಗುವುದನ್ನು ತಡೆಯುವುದಷ್ಟೇ ಅಲ್ಲದೆ, ಮಳೆ ನೀರನ್ನು ಸಂರಕ್ಷಿಸಬೇಕಾದ ಅಗತ್ಯವಿದೆ.

–ರಮೇಶ ಶಿ.ಕಂಪ್ಲಿ, ಧಾರವಾಡ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !