ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆನೀರು ಕೊಯ್ಲು: ನಾಗರಿಕರಿಗಿಲ್ಲ ಆಸಕ್ತಿ, ಆಡಳಿತಕ್ಕೂ ನಿರಾಸಕ್ತಿ

Last Updated 13 ಏಪ್ರಿಲ್ 2019, 20:01 IST
ಅಕ್ಷರ ಗಾತ್ರ

ಬೇಸಿಗೆಯ ತಾಪ ಏರುತ್ತಿರುವಂತೆಯೇ ನೀರಿನ ಕೊರತೆ ಹೆಚ್ಚಾಗಿದೆ. ಗುಣಮಟ್ಟವೂ ಕುಸಿದಿದೆ. ನೀರು ಮಾರಾಟ ಉದ್ಯಮಗಳು ಕೊಳವೆಬಾವಿಗಳ ಮೂಲಕ ನೀರನ್ನು ಬಸಿದು ಅಂತರ್ಜಲವನ್ನು ಬರಿದುಮಾಡುತ್ತಿವೆ.

ಮಳೆನೀರು ಕೊಯ್ಲನ್ನುಸ್ಥಳೀಯ ಆಡಳಿತ ಗಳು ಕಡ್ಡಾಯ ಮಾಡಿದ್ದರೂ ನಿರ್ಲಕ್ಷಿಸಲಾಗುತ್ತಿದೆ. ನೀರಿನ ಟ್ಯಾಂಕರ್‌ಗಳು, ಕೊಳವೆ ಬಾವಿಗಳನ್ನೇ ಅವಲಂಬಿಸಿರುವ ನಾಗರಿಕರು ಇನ್ನೂ ಪರಿಸ್ಥಿತಿಯ ತೀವ್ರತೆಯನ್ನು ಅರ್ಥಮಾಡಿಕೊಂಡಂತಿಲ್ಲ.

ಮಳೆನೀರು ಕೊಯ್ಲಿಗೆ ಸಂಬಂಧಿಸಿ ಜಲಮಂಡಳಿ 2016ರಲ್ಲಿ ನಿಯಮ ರೂಪಿಸಿತ್ತು. ಆ ಬಳಿಕ 2019ರವರೆಗೆ ಮಳೆನೀರು ಕೊಯ್ಲು ವ್ಯವಸ್ಥೆ ಮಾಡಿಕೊಳ್ಳದವರಿಂದ ದಂಡವಾಗಿ ₹30 ಕೋಟಿ ಸಂಗ್ರಹಿಸಲಾಗಿದೆ. ಮಂಡಳಿಯ ಪ್ರಕಾರ, ನೀರು ಸರಬರಾಜು ಸಂಪರ್ಕ ಹೊಂದಿರುವ 1,12,375 ಕಡೆ ಮಳೆನೀರು ಕೊಯ್ಲು ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು,76,231 ಕಡೆ ಬಾಕಿ ಇದೆ. ಇವರಿಗೆ ದಂಡ ವಿಧಿಸಲಾಗಿದೆ.

2016ರ ಅಧಿಸೂಚನೆ ಪ್ರಕಾರ 30X40 ಚದರ ಅಡಿ, ಇದಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ನಿರ್ಮಾಣವಾಗುವ ಹೊಸ ಕಟ್ಟಡಗಳಲ್ಲಿ ಮತ್ತು 40–60 ಚದರ ಅಡಿ, ಇದಕ್ಕಿಂತ ಹೆಚ್ಚಿನ ಪ‍್ರದೇಶಗಳಲ್ಲಿ ನಿರ್ಮಾಣವಾಗಿರುವ ಹಳೇ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ ಮಾಡಿಕೊಳ್ಳುವುದು ಕಡ್ಡಾಯ. ಇದರ ಬದಲು ದಂಡ ತೆರುವುದೇ ಆರಾಮದಾಯಕ ಎಂದು ನಾಗರಿಕರು ಭಾವಿಸಿರುವಂತಿದೆ.

‘ಶೇ 90ರಷ್ಟು ಸರ್ಕಾರಿ ಕಟ್ಟಡಗಳೇ ಮಳೆನೀರು ಕೊಯ್ಲು ವ್ಯವಸ್ಥೆ ಹೊಂದಿಲ್ಲ. ಹೀಗಿರುವಾಗ ಖಾಸಗಿ ಕಟ್ಟಡಗಳಲ್ಲಿ ಮಳೆನೀರು ಸಂಗ್ರಹ ಇರಬೇಕು ಎಂದು ಹೇಗೆ ಬಯಸಲು ಸಾಧ್ಯ? ಪುರಸಭೆಯ ಕಡೆಗಣನೆ ಮತ್ತು ನಾಗರಿಕರನಿರ್ಲಕ್ಷ್ಯ ಈಗಿನ ಪರಿಸ್ಥಿತಿಗೆ ಕಾರಣ’ ಎಂದು ಕೋಲಾರದ ಹೋರಾಟಗಾರ ಆಂಜನೇಯ ರೆಡ್ಡಿ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡಿದ್ದಾರೆ.

ಮಳೆ ನೀರು ಸಂಗ್ರಹದ ವ್ಯವಸ್ಥೆ ಇರುವ ಕಟ್ಟಡ -ಪ್ರಜಾವಾಣಿ ಚಿತ್ರ
ಮಳೆ ನೀರು ಸಂಗ್ರಹದ ವ್ಯವಸ್ಥೆ ಇರುವ ಕಟ್ಟಡ -ಪ್ರಜಾವಾಣಿ ಚಿತ್ರ

ದಂಡದ ಮೊತ್ತವೂ ಕಡಿಮೆ: ‘ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳದವರಿಗೆ ಜಲಮಂಡಳಿಯ ಮಾರ್ಗದರ್ಶನದಂತೆ ದಂಡ ವಿಧಿಸುತ್ತಿದ್ದೇವೆ. ದಂಡವು ತೀರಾ ಕಡಿಮೆ ಮೊತ್ತದ್ದು ಪ್ರಯೋಜನವಾಗುತ್ತಿಲ್ಲ. ಅನೇಕ ವಸತಿಸಮುಚ್ಛಯಗಳುಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸುವುದನ್ನು ಲಘುವಾಗಿ ಪರಿಗಣಿಸುತ್ತಿವೆ’ ಎಂದು ತಿಳಿಸಿದ್ದಾರೆ ಜಲಮಂಡಳಿಯ ಅಧ್ಯಕ್ಷ ತುಷಾರ್ ಗಿರಿನಾಥ್.

‘ಕಟ್ಟಡ ಯೋಜನೆಗೆ ಅನುಮತಿ ದೊರೆತ ಕೂಡಲೇ ನಮ್ಮ ಎಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ ನಿಯಮಗಳ ಪ್ರಕಾರ ಇದೆಯೇ ಎಂದು ಪರಿಶೀಲಿಸುತ್ತಾರೆ. ಇಲ್ಲದಿದ್ದಲ್ಲಿ ಸಂಪರ್ಕ ಒದಗಿಸದಂತೆ ಜಲಮಂಡಳಿ ಮತ್ತು ಬೆಸ್ಕಾಂಗೆ ಪತ್ರ ಬರೆಯುತ್ತಾರೆ’ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸು ವುದು ದುಬಾರಿ ಎಂದು ಕೆಲವು ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ. ‘40–60 ಚದರ ಅಡಿ ಪ್ರದೇಶದಲ್ಲಿ ನಿರ್ಮಾಣವಾಗಿರುವ ಮನೆಯಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಲು ನಾವು ₹30ರಿಂದ ₹40 ಸಾವಿರ ಖರ್ಚು ಮಾಡಬೇಕು. ಜಲಮಂಡಳಿಯು ಕೈಗೆಟುಕುವ ದರದಲ್ಲಿ ನೀರು ಪೂರೈಸುತ್ತಿರುವಾಗ ನಾವ್ಯಾಕೆಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಬೇಕು?’ ಎಂದು ಬೊಮ್ಮನಹಳ್ಳಿಯ ನಿವಾಸಿಯೊಬ್ಬರು ಪ್ರಶ್ನಿಸಿದರು.

ಬಲವಂತದಿಂದ ಮಳೆನೀರು ಕೊಯ್ಲು ವ್ಯವಸ್ಥೆ ಜಾರಿಗೊಳಿಸುವುದು ಅಸಾಧ್ಯ. ಆದರೆ ಸ್ವ ಇಚ್ಛೆಯಿಂದ ಭಾಗವಹಿಸುವಂತೆ ಮಾಡುವ ಮೂಲಕ ಅನುಷ್ಠಾನಕ್ಕೆ ತರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ನಗರದಲ್ಲಿ ನೀರಿನ ಬಳಕೆ ಅತಿಯಾಗಿದೆ. ಇಲ್ಲಿ ಸುಮಾರು 22 ಲಕ್ಷ ತೆರಿಗೆ ಪಾವತಿಸುವವರಿದ್ದಾರೆ. ಜಲಮಂಡಳಿಯು ಪ್ರತಿ ಸಾವಿರ ಲೀಟರ್ ನೀರಿಗೆ ₹14ರಂತೆ ಪ್ರತಿ ಕುಟುಂಬಕ್ಕೆ ತಿಂಗಳಿಗೆ 10 ಸಾವಿರ ಲೀಟರ್‌ ನೀರು ಪೂರೈಸುತ್ತಿದೆ. ಆದರೆ ಕೆಲವು ಕುಟುಂಬಗಳು ತಿಂಗಳಿಗೆ10 ಸಾವಿರ ಲೀಟರ್‌ಗಿಂತಲೂ ಹೆಚ್ಚು ನೀರು ಪೂರೈಸುತ್ತಿವೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ಬಳಸುವ ಕುಟುಂಬಗಳಿಗೆ ಮಂಡಳಿಯು ಹೆಚ್ಚು ದರ ನಿಗದಿಪಡಿಸಬೇಕು. ಹೀಗೆ ಮಾಡುವುದರಿಂದ ಅಂತಹ ಕುಟುಂಬಗಳು ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸುವತ್ತ ಮನ ಮಾಡುವಂತೆ ಪ್ರೇರೇಪಿಸಬಹುದು’ ಎನ್ನುವುದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿಜ್ಞಾನಿ ಎ.ಆರ್.ಶಿವಕುಮಾರ್ ಅವರ ಅಭಿಪ್ರಾಯ.

ಈ ಕುರಿತು ಜಲಮಂಡಳಿಗೆ ಸಲಹೆ ನೀಡಲಾಯಿತು. ಆದರೆ ದರಪಟ್ಟಿಯಲ್ಲಿ ಬದಲಾವಣೆ ಮಾಡಲು ಮಂಡಳಿ ನಿರಾಕರಿಸಿತು ಎಂದು ಅವರು ತಿಳಿಸಿದ್ದಾರೆ. ಜಲ ಮಂಡಳಿಯು ಓವರ್‌ಹೆಡ್‌ ಟ್ಯಾಂಕ್‌ಗಳಿಗೆ ‘ನೀರಿನ ಮಟ್ಟ ನಿಯಂತ್ರಕ (ವಾಟರ್ ಲೆವೆಲ್ ಕಂಟ್ರೋಲರ್‌)‘ ಅಳವಡಿಸಬೇಕು. ಮಿತಿಗಿಂತ ಹೆಚ್ಚು ನೀರು ಬಳಸುವವರಿಗೆ ದಂಡ ವಿಧಿಸಬೇಕು. ಇದರಿಂದ ಅಪಾರ ಪ್ರಮಾಣದಲ್ಲಿ ನೀರಿನ ಉಳಿತಾಯ ಮಾಡಬಹುದು ಎಂದೂ ಅವರು ಸಲಹೆ ನೀಡಿದ್ದಾರೆ.

ನಿಯಮಗಳ ಪ್ರಕಾರ ಕಾಲಕ್ಕನುಗುಣವಾಗಿ ದರ ಪರಿಷ್ಕರಣೆ ಮಾಡುತ್ತೇವೆ. ದಂಡಗಳು ಸಮಂಜಸವಾಗಿದೆ ಎಂಬುದು ನಮಗೆ ತಿಳಿದಿದೆ. ಮಳೆನೀರು ಕೊಯ್ಲು ಮತ್ತು ನೀರಿನ ಸಂಗ್ರಹದ ಇತರ ವಿಧಾನಗಳ ಬಗ್ಗೆ ತಿಳಿವಳಿಕೆ ಮೂಡಿಸುವ ಬಗ್ಗೆ ಗಮನಹರಿಸಲಿದ್ದೇವೆ ಎಂದು ಜಲಮಂಡಳಿ ಅಧ್ಯಕ್ಷರು ಹೇಳಿದ್ದಾರೆ.

ಇತರ ನಗರಗಳಲ್ಲೂ ಇದೇ ಪರಿಸ್ಥಿತಿ: ರಾಜ್ಯದ ಇತರ ಕೆಲವು ನಗರಗಳಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಹಲವು ನಗರಗಳಲ್ಲಿ ಮಳೆನೀರು ಇಂಗಿಸುವಿಕೆ ಕೊಯ್ಲು ಅಳವಡಿಕೆ ಬಗ್ಗೆ ಗಮನಹರಿಸಲು ವಿಭಾಗಗಳೇ ಇಲ್ಲ. ‘ಹೊಸ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸದವರಿಗೆ ವಾಸ ಪ್ರಮಾಣಪತ್ರ ನೀಡಬಾರದೆಂಬ ನಿಯಮವಿದೆ. ಆದರೆ ಇದರ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ದಂಡವನ್ನೂ ವಿಧಿಸಲಾಗುತ್ತಿಲ್ಲ’ ಎಂದು ಹುಬ್ಬಳ್ಳಿ–ಧಾರವಾಡ ಪುರಸಭೆ ಆಯುಕ್ತ ಶಕೀಲ್ ಅಹ್ಮದ್ ತಿಳಿಸಿದ್ದಾರೆ.

ಕಲಬುರ್ಗಿಯಂತಹ ನಗರಗಳಲ್ಲಿ ಮಳೆ ಪ್ರಮಾಣವೂ ಕಡಿಮೆ ಇದೆ. ಮಳೆನೀರುಕೊಯ್ಲಿನಿಂದ ಹೆಚ್ಚು ಪ್ರಯೋಜನ ಇಲ್ಲವೆಂಬುದು ಇಲ್ಲಿನ ನಿವಾಸಿಗಳ ಭಾವನೆ. ಆದರೆ, ಮಂಗಳೂರು ನಗರದಲ್ಲಿ ಮಳೆನೀರುಕೊಯ್ಲನ್ನು ಪರಿಣಾಮಕಾರಿಯಾಗಿ ಅಳವಡಿಸಲಾಗುತ್ತಿದೆ. ಇಂತಹ ಕಟ್ಟಡಗಳ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡುವ ಪ್ರಸ್ತಾಪವೂ ಅಲ್ಲಿದೆ.

ಮಿತಿಮೀರುತ್ತಿದೆ ಅಂತರ್ಜಲ ಬಳಕೆ: ಬಾಗೆಪಲ್ಲಿಯ ಮಾರಸನಪಲ್ಲಿ ಗ್ರಾಮದಲ್ಲಿ 70 ಮನೆಗಳಿದ್ದು, 100 ಬರಿದಾದ ಕೊಳವೆಬಾವಿಗಳಿವೆ. ಎರಡರಲ್ಲಿ ನೀರಿದ್ದು ಯಾವುದೇ ಕ್ಷಣದಲ್ಲಿ ಬರಿದಾಗುವ ಸಾಧ್ಯತೆ ಇದೆ. ಕೆಲವು ತಾಲ್ಲೂಕುಗಳನ್ನು ಹೊರತುಪಡಿಸಿ ರಾಜ್ಯದ ಬಹುತೇಕ ಕಡೆಗಳಲ್ಲಿ ಅಂತರ್ಜಲ ಪ್ರಮಾಣ ನಿರ್ಣಾಯಕ ಹಂತಕ್ಕಿಂತ ಕೆಳಮಟ್ಟದಲ್ಲಿದೆ.

2013ರ ಅಂದಾಜಿನ ಪ್ರಕಾರ ಕೆಲವು ತಾಲ್ಲೂಕುಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಅಂತರ್ಜಲವನ್ನು ಹೊರತೆಗೆಯಲಾಗುತ್ತಿದೆ. ಈ ಪೈಕಿ ಕೆಲವು ಕಡೆ ವಾರ್ಷಿಕ ಮರುಪೂರಣ ಪ್ರಮಾಣಕ್ಕಿಂತಲೂ ಹೆಚ್ಚು ಅಂತರ್ಜಲ ಬಳಸಲಾಗುತ್ತಿದೆ ಎಂದು ಕೇಂದ್ರ ಅಂತರ್ಜಲ ಮಂಡಳಿ (ಸಿಜಿಡಬ್ಲ್ಯುಬಿ) ಎಚ್ಚರಿಕೆ ನೀಡಿತ್ತು.

‘ಮುಳಬಾಗಲು ಮತ್ತು ಬಂಗಾರಪೇಟೆ ತಾಲ್ಲೂಕುಗಳಲ್ಲಿಮರುಪೂರಣ ಪ್ರಮಾಣಕ್ಕಿಂತಲೂ ಶೇ 201ರಷ್ಟು ಹೆಚ್ಚು ಅಂತರ್ಜಲ ಹೊರತೆಗೆಯಲಾಗುತ್ತಿದೆ. 14 ತಾಲ್ಲೂಕುಗಳಲ್ಲಿ ಶೇ 90ಕ್ಕಿಂತಲೂ ಹೆಚ್ಚು (ಕ್ರಿಟಿಕಲ್), 21 ತಾಲ್ಲೂಕುಗಳಲ್ಲಿ ಶೇ 70ರಿಂದ 90 (ಸೆಮಿ ಕ್ರಿಟಿಕಲ್) ಮತ್ತು 43 ತಾಲ್ಲೂಕುಗಳಲ್ಲಿ ಶೇ 50ರಿಂದ 70ರವರೆಗೆ ಅಂತರ್ಜಲ ಹೊರತೆಗೆಯಲಾಗುತ್ತಿದೆ’ ಎಂದು ಸಿಜಿಡಬ್ಲ್ಯುಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕ್ರಿಟಿಕಲ್ ಮತ್ತು ಸೆಮಿ ಕ್ರಿಟಿಕಲ್ ತಾಲ್ಲೂಕುಗಳ ಸಂಖ್ಯೆ ದುಪ್ಪಟ್ಟಾಗಿದೆ ಎಂದು 2017ರ ಅಧ್ಯಯನ ವರದಿಯನ್ನು ಸಿದ್ಧಪಡಿಸುತ್ತಿರುವ ರಾಜ್ಯ ಅಂತರ್ಜಲ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಕ್ಷೀಣಿಸುತ್ತಿದೆ ನೀರಿನ ಮಟ್ಟ: ಅತಿಯಾದ ಬಳಕೆಯಿಂದಾಗಿ ಹೆಚ್ಚಿನ ತಾಲ್ಲೂಕುಗಳ ಕೊಳವೆಬಾವಿಗಳಲ್ಲಿ ‘ನೀರಿನ ಸ್ಥಿರ ಮಟ್ಟ’ (ಬಳಸಿದ ನಂತರ ಇರಬೇಕಾದ ಮಟ್ಟ) ಇಳಿಕೆಯಾಗುತ್ತಿದೆ. ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲ್ಲೂಕಿನಲ್ಲಿ 2009ರಲ್ಲಿ 10.45 ಮೀಟರ್‌ನಲ್ಲಿದ್ದ ‘ನೀರಿನ ಸ್ಥಿರ ಮಟ್ಟ’ 2018ರಲ್ಲಿ 50.49 ಮೀಟರ್ ಆಳಕ್ಕಿಳಿದಿದೆ. ನೀರಿನ ಆಳ ಮತ್ತು ಸ್ಥಿರಮಟ್ಟದ ತುಲನೆ ಮಾಡಲು ಸಿದ್ಧಸೂತ್ರವಿಲ್ಲ. ಆದರೂ ಪ್ರತಿ ಅಡಿಯಷ್ಟು ನೀರು ಇಳಿಕೆಯಾಗುವುದೆಂದರೆ ಕೊಳವೆಬಾವಿ 30 ಅಡಿ ಇನ್ನಷ್ಟು ಆಳಕ್ಕಿಳಿದಂತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ತಾಂತ್ರಿಕವಾಗಿ ಈ ತುಲನೆ ಸರಿಯಲ್ಲ. ಆದರೆ ಅಂತರ್ಜಲ ಕುಸಿತದ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಿದೆ’ ಎಂದು ರಾಜ್ಯ ಅಂತರ್ಜಲ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಳಕೆ, ಮರುಪೂರಣದಲ್ಲಿ ಸಾಕಷ್ಟು ಅಂತರ

ಮಳೆ ನೀರು ಸಂಗ್ರಹಕ್ಕೆ ಸಂಬಂಧಿಸಿಐಐಎಸ್‌ಸಿಬೆಂಗಳೂರಿನಸಿವಿಲ್‌ ಎಂಜಿನಿಯರಿಂಗ್‌ ವಿಭಾಗದಪ್ರೊ. ಎಂ.ಎಸ್‌.ಮೋಹನ್‌ ಕುಮಾರ್‌ ಅಭಿಪ್ರಾಯ...

* ಅಂತರ್ಜಲದ ಮಟ್ಟ ಕುಸಿಯಲು ಕಾರಣವೇನು?

ಅಂತರ್ಜಲ ಈ ಮಟ್ಟಕ್ಕೆ ಕುಸಿ ಯಲು ಮನುಷ್ಯರ ದುರಾಸೆ ಮತ್ತು ಭೌಗೋಳಿಕ ಕಾರಣಗಳೂ ಸಹ ಕುಸಿಯಲು ತನ್ನದೇ ಆದ ಕೊಡುಗೆ ನೀಡಿವೆ. ನೆಲದ ಮೇಲ್ಮೈ ನೀರು ಮತ್ತು ನೆಲದಡಿಯ ನೀರಿನ ನಡುವೆ ಸಂಪರ್ಕ ಕಡಿತಗೊಂಡಿರುವುದೂ ಅಂತರ್ಜಲ ಮಟ್ಟ ಕುಸಿಯಲು ಕಾರಣವಾಗಿದೆ.

* ಅಂತರ್ಜಲ ಕಲುಷಿತಗೊಳ್ಳುವ ಬಗೆ ಹೇಗೆ?– ತಿಳಿಸಿ

ಜಿಯೋಜೆನಿಕ್‌ (ಭೌಗೋಳಿಕ ರೀತಿಯ) ಮತ್ತು ಆಂತ್ರಪೊಜೆನಿಕ್‌ (ಮನುಷ್ಯರಿಂದ ಉಂಟಾಗುವ)– ಎರಡು ರೀತಿಯಲ್ಲಿ ಅಂತರ್ಜಲ ಕಲುಷಿತ ಗೊಳ್ಳುವುದನ್ನು ವರ್ಗೀಕರಿಸಬಹುದು. ನೆಲದ ಅಡಿಯಲ್ಲಿನ ಕಲ್ಲುಗಳಿಂದಾಗಿ ನೀರು ಕಲುಷಿತಗೊಳ್ಳುವುದು ಜಿಯೋಜೆನಿಕ್‌. ಫ್ಲೋರೈಡ್‌ನಂತಹ ಅಂಶಗಳಿಂದ ನೀರು ಕಲುಷಿತಗೊಳ್ಳುತ್ತದೆ. ಹಾರುಬೂದಿ ಮತ್ತು ಇತರೆ ವಿಷಕಾರಿ (ಆರ್ಸೆನೋಪ್ರೈಟ್‌) ವಸ್ತುಗಳ ಬೆರೆಯುವಿಕೆಯಿಂದಾಗಿ ನೀರು ಕಲುಷಿತಗೊಳ್ಳುತ್ತಿದೆ. ಚರಂಡಿ ನೀರಿನೊಂದಿಗೆ ಭಾರ ಲೋಹಗಳಾದ ಪರಿಣಾಮವಾಗಿ ನೈಟ್ರೇಟ್‌, ಫಾಸ್ಫೇಟ್‌, ಸೀಸ ಹಾಗೂ ಪಾದರಸದ ಅಂಶಗಳು ಅಂತರ್ಜಲದೊಂದಿಗೆ ಬೆರೆತು ಹೋಗಿರುವುದನ್ನು ಗಮನಿಸಬಹುದಾಗಿದೆ.

ಕುಸಿತದತ್ತ ಅಂತರ್ಜಲ ಮಟ್ಟ

ಅಂತರ್ಜಲ ನಿರ್ದೇಶನಾಲಯದನಿರ್ದೇಶಕರಾಮಕೃಷ್ಣ ಎಚ್‌.ಆರ್‌. ಅಭಿಪ್ರಾಯ...

* ಅಂತರ್ಜಲ ಮಟ್ಟ ಕ್ಷೀಣಿಸುತ್ತಿರುವುದರಿಂದ ಉಂಟಾಗಿರುವ ತಲ್ಲಣಕ್ಕೆ ಪ್ರಮುಖ ಕಾರಣವೇನು?

2013ರಿಂದ 2017ರ ಅವಧಿಯಲ್ಲಿ ಅಂತರ್ಜಲ ಹೊರತೆಗೆಯುವ ಪ್ರಮಾಣ ಶೇ 66ರಿಂದ ಶೇ 70ರಷ್ಟು ಹೆಚ್ಚಾಗಿದೆ. ರಾಜ್ಯ ಕ್ರಮೇಣ ಅರೆ ಗಂಭೀರ ಮಟ್ಟಕ್ಕೆ ಜಾರುತ್ತಿದ್ದು, ನಿಜಕ್ಕೂ ತಲ್ಲಣದ ಸಂಗತಿ. ಬೆಂಗಳೂರು, ಕೋಲಾರ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ 1000–1350 ಅಡಿ ಆಳಕ್ಕೆ ಕುಸಿದಿದೆ.

* ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಜನರು ಹಿಂಜರಿಯುತ್ತಿರುವುದೇಕೆ?

ಮಳೆ ನೀರು ಸಂಗ್ರಹಿಸುವುದು ಬಹಳ ಕಷ್ಟವಾದ ಕೆಲಸವೇನೂ ಅಲ್ಲ. ಎಲ್ಲ ಮನೆಗಳು ಹಾಗೂ ವಾಣಿಜ್ಯ ಕಟ್ಟಡಗಳಲ್ಲಿಯೂ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಚಾವಣಿ ನೀರು ಸಂಗ್ರಹಿಸುವ ವ್ಯವಸ್ಥೆಯನ್ನು ಯಾವುದೇ ಕಟ್ಟಡದಲ್ಲಿ ಮಾಡಬಹುದಾಗಿದೆ.

ಮಳೆ ನೀರು ಸಂಗ್ರಹ ದುಬಾರಿ– ಇದೊಂದು ತಪ್ಪು ಕಲ್ಪನೆ:ಜಲ ತಜ್ಞವಿಶ್ವನಾಥ ಶ್ರೀಕಂಠಯ್ಯ

* ಬೆಂಗಳೂರು ಹಾಗೂ ರಾಜ್ಯದ ಇತರ ಭಾಗಗಳಲ್ಲಿ ಮಳೆ ನೀರು ಸಂಗ್ರಹ ವೇಗ ಪಡೆದುಕೊಂಡಿದೆಯೇ?

ಮಳೆ ನೀರು ಸಂಗ್ರಹದ ಕುರಿತಂತೆ ಜನರಲ್ಲಿ ಸಾಕಷ್ಟು ತಪ್ಪುಕಲ್ಪನೆಗಳಿವೆ. ಬೆಂಗಳೂರು ನಗರದಲ್ಲಿ ಸರ್ಕಾರ ಮತ್ತು ಖಾಸಗಿ ಸ್ವಾಮ್ಯದ ಸುಮಾರು ಒಂದು ಲಕ್ಷ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ನಡೆಯುತ್ತಿದೆ. ಈ ಪ್ರಮಾಣ ಮತ್ತಷ್ಟು ಹೆಚ್ಚಬೇಕಿದೆ. 2016ರಿಂದ 2018ರ ಅವಧಿಯಲ್ಲಿ ನಗರದಲ್ಲಿ 1.2 ಲಕ್ಷ ಮನೆಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಕೆಗೆ ’ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ’ ಗುರಿ ನಿಗದಿಪಡಿಸಿತ್ತು. ಈ ಪೈಕಿ ಒಂದು ಲಕ್ಷ ಮನೆಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ರೂಪುಗೊಂಡಿದೆ.

* ಯಾವುದರ ಕಡೆಗೆ ಗಮನ ಕೇಂದ್ರೀಕರಿಸಬೇಕಿದೆ?

ಕಟ್ಟಡದ ವಿಸ್ತೀರ್ಣ 30*40 ಅಡಿಗಿಂತಲೂ ಹೆಚ್ಚಿದ್ದರೆ ಮಳೆ ನೀರು ಸಂಗ್ರಹ ವ್ಯವಸ್ಥೆ ರೂಪಿಸಿಕೊಳ್ಳುವುದು ಬೆಂಗಳೂರಿನಲ್ಲಿ ಕಡ್ಡಾಯ. ಹುಬ್ಬಳ್ಳಿ, ಮೈಸೂರು, ಧಾರವಾಡದಂತಹ ನಗರಗಳಲ್ಲಿ 40*60 ಅಡಿ ವಿಸ್ತೀರ್ಣಕ್ಕೂ ದೊಡ್ಡದಾದ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ಮಾಡಬೇಕಿದೆ. ನಿಷ್ಕ್ರಿಯಗೊಂಡಿರುವ ಹಲವು ಕೊಳವೆ ಬಾವಿಗಳಿದ್ದು, ಅವುಗಳನ್ನೂ ಮಳೆ ನೀರು ಸಂಗ್ರಹಕ್ಕೆ ಬಳಸಿಕೊಳ್ಳಬಹುದಾಗಿದೆ. ಮಳೆ ನೀರು ಸಂಗ್ರಹ ವ್ಯವಸ್ಥೆ ರೂಪಿಸಿಕೊಂಡಿರುವ ಜನರನ್ನು ವಾರ್ಡ್‌ ಸಮಿತಿಗಳು ಗುರುತಿಸಬೇಕು. ಈ ವ್ಯವಸ್ಥೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಅವರಿಗೆ ಪ್ರೋತ್ಸಾಹ ನೀಡಬೇಕು.

* ಪರಿಸ್ಥಿತಿ ಉತ್ತಮಗೊಳಿಸಲು ಸರ್ಕಾರ ಮತ್ತು ಜನರು ಯಾವ ರೀತಿ ಕಾರ್ಯೋನ್ಮುಖರಾಗಬಹುದು?

ಇಂಥ ಕಾರ್ಯಕ್ಕೆ ಜನರನ್ನು ಪ್ರೇರೇಪಿಸಬೇಕು. ಪರಿಸ್ಥಿತಿ ಉತ್ತಮಗೊಳಿಸಲು ನಾವೆಲ್ಲರೂ ನಮ್ಮಿಂದ ಸಾಧ್ಯವಾದುದನ್ನು ಮಾಡಬೇಕು. ಮಳೆ ನೀರು ಸಂಗ್ರಹ ಮಾಡುವುದು ದುಬಾರಿ ಕೆಲಸ ಎಂಬುದು ತಪ್ಪು ಕಲ್ಪನೆ. ಯಾರು ಬೇಕಾದರೂ, ಎಲ್ಲಿ ಬೇಕಾದರೂ, ಚಿಕ್ಕ ಜಾಗಗಳಲ್ಲಿಯೂ ಮಳೆ ನೀರು ಸಂಗ್ರಹ ಮಾಡಲು ಸಾಧ್ಯವಿದೆ. ಕಟ್ಟಡದ ಚಾವಣಿ ಸ್ವಚ್ಛವಾಗಿದೆಯೇ ಹಾಗೂ ಸೂಕ್ತ ಫಿಲ್ಟರ್‌ಗಳಿವೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT