ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪೂರ್ಣ ಸಾಲ ಚುಕ್ತಾ:ಸಿ.ಎಂ

ರೈತರ ₹46 ಸಾವಿರ ಕೋಟಿ ಸಾಲ
Last Updated 3 ಜನವರಿ 2019, 19:54 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ರೈತರ ₹ 46 ಸಾವಿರ ಕೋಟಿ ಸಾಲವನ್ನು ಫೆಬ್ರುವರಿಯಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ಒಂದೇ ಸಲಕ್ಕೆ ಚುಕ್ತಾ ಮಾಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಇಲ್ಲಿನ ಜೆ.ಪಿ ಭವನದಲ್ಲಿ ಗುರುವಾರ ನಡೆದ ಪಕ್ಷದ ಶಾಸಕರು, ಪದಾಧಿಕಾರಿಗಳು ಹಾಗೂ ನಾಯಕರ ಸಭೆಯಲ್ಲಿ ಅವರು ಮಾತನಾಡಿದರು.

‘ಫೆಬ್ರುವರಿ 8ರಂದು ಬಜೆಟ್‌ ಮಂಡಿಸುವ ಆಲೋಚನೆ ಇದೆ. ಆದರೆ, ರೇವಣ್ಣನವರು ಶಾಸ್ತ್ರ ಕೇಳಿ ಬಜೆಟ್‌ ಮಂಡನೆಗೆ ದಿನ ನಿಗದಿ ಮಾಡಲಿದ್ದಾರೆ’ ಎಂದು ಕುಮಾರಸ್ವಾಮಿ ಹೇಳುತ್ತಿದ್ದಂತೆ ಸಭೆಯಲ್ಲಿ ನಗೆ ಹೊನಲು ಎದ್ದಿತು.

‘ರೈತರ ಸಾಲ ಮನ್ನಾ ಕುರಿತು ಆಗಸ್ಟ್‌ 8ರಂದು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದಾಗ ನಾಲ್ಕು ಹಂತಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮ‌ನ್ನಾ ತೀರ್ಮಾನ ಮಾಡಲಾಯಿತು. ಗದಗದಲ್ಲಿ ಈಚೆಗೆ ಮೂವರು ರೈತರಿಗೆ ಬ್ಯಾಂಕ್‌ ನೋಟಿಸ್‌ ನೀಡಿದಾಗ ಜಿಲ್ಲಾಧಿಕಾರಿಯನ್ನು ಕಳುಹಿಸಿದ್ದೆ. ಆನಂತರ ನೋಟಿಸ್‌ ವಾಪಸ್‌ ಪಡೆಯಲಾಯಿತು. ರೈತರ ಉಳಿದ ₹5 ಲಕ್ಷ ಸಾಲವನ್ನು ಒಂದೇ ಸಲಕ್ಕೆ ಚುಕ್ತಾ ಮಾಡಿದರೆ ಶೇ50 ರಿಯಾಯಿತಿ ಕೊಡುವುದಾಗಿ ಬ್ಯಾಂಕ್‌ ಪತ್ರ ಬರೆದಿದೆ. ಆದರೆ, ಮಾಧ್ಯಮಗಳು ಇದನ್ನು ಮರೆಮಾಚಿ ವರದಿ ಮಾಡುತ್ತಿವೆ’ ಎಂದರು.

‘ಮಹಾರಾಷ್ಟ್ರದಲ್ಲಿ ರಾಜ್ಯಪಾಲರೂ ಆಗಿದ್ದ ಮಾಜಿ ಮುಖ್ಯಮಂತ್ರಿಗಳು ರೈತರ ಸಾಲ ಮನ್ನಾ ಬರೀ ಬುಕ್‌ ಅಡ್ಜಸ್ಟ್‌ಮೆಂಟ್‌ ಎಂದಿದ್ದಾರೆ. ಅವರಿಗೆ ಮಾಹಿತಿ ಕೊರತೆ ಇದ್ದಂತಿದೆ. ಅವರಿಗೆ ಮಾಹಿತಿ ಕಳುಹಿಸಿಕೊಡುತ್ತೇನೆ. ಈಗಲಾದರೂ ಅವರಿಗೆ ರೈತರ ನೆನಪಾಗಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಎಸ್‌.ಎಂ. ಕೃಷ್ಣ ಅವರ ಹೆಸರನ್ನು ಹೇಳದೆ ಕುಮಾರಸ್ವಾಮಿ ಲೇವಡಿ ಮಾಡಿದರು.

ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯನ್ನು ದೇಶದಲ್ಲೇ ಮಾದರಿ ಮಾಡುವುದಾಗಿಯೂ ಪ್ರಕಟಿಸಿದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ರಾಜ್ಯ ಜೆಡಿಎಸ್‌ ಅಧ್ಯಕ್ಷ ಎಚ್‌. ವಿಶ್ವನಾಥ್‌, ಪಕ್ಷದ ವಕ್ತಾರ ವೈಎಸ್‌ವಿ ದತ್ತ, ಸಚಿವ ಎಚ್‌.ಡಿ. ರೇವಣ್ಣ ಹಾಜರಿದ್ದರು.

‘ವಿಶ್ವನಾಥ್ ರಾಜೀನಾಮೆ ಇಲ್ಲ’

ಅನಾರೋಗ್ಯದ ಕಾರಣದಿಂದ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಹೇಳಿದ್ದ ಎಚ್.ವಿಶ್ವನಾಥ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

‘ಬೆಳಿಗ್ಗೆಯೇ ದೇವೇಗೌಡ ರನ್ನು ಭೇಟಿ ಮಾಡಿ ನನ್ನ ಕಷ್ಟ ಹೇಳಿಕೊಂಡೆ. ಲೋಕಸಭೆ ಚುನಾವಣೆ ಬರಲಿದ್ದು, ಇದು ಬಹಳ ಸವಾಲಿನ ಕಾಲ. ಇಂತಹ ಸಮಯದಲ್ಲಿ ಜವಾಬ್ದಾರಿಯಿಂದ ಹಿಂದೆ ಸರಿಯುವುದು ಬೇಡ. ನಾವಿಬ್ಬರೂ ಹಳ್ಳಿ ಹಳ್ಳಿ ತಿರುಗಿ ಪಕ್ಷ ಕಟ್ಟೋಣ. ಮುಂದುವರಿಯಬೇಕು ಎಂದು ಗೌಡರು ಹೇಳಿದರು. ಅವರ ಮಾತನ್ನು ತೆಗೆದು ಹಾಕಲಾಗದೇ ಹುದ್ದೆಯಲ್ಲಿ ಮುಂದುವರಿಯಲು ಒಪ್ಪಿಕೊಂಡೆ’ ಎಂದರು.

ಪ್ರಚಾರ ಸಮಿತಿಗೆ ದತ್ತ: ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಜಿ ಶಾಸಕ ವೈ.ಎಸ್‌.ವಿ. ದತ್ತ ಅವರನ್ನು ನೇಮಕ ಮಾಡಲಾಗಿದೆ.

‘ಸರ್ಕಾರ ಉರುಳಿಸಲು ಅಡ್ಡಿಯಾಗಬಾರದೆಂದು ವಿದೇಶಕ್ಕೆ!’

‘ಬಿಜೆಪಿಯವರು ಸರ್ಕಾರ ಉರುಳಿಸುವುದಕ್ಕೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ನಾನು ವಿದೇಶ ಪ್ರವಾಸ ಹೋಗಿದ್ದೆ’ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

‘ಜನವರಿ 2 ಅಥವಾ 3 ರಂದು ಸರ್ಕಾರ ಬಿದ್ದು ಹೋಗುತ್ತದೆ. 6ನೇ ತಾರೀಖು ಹೊಸ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮಾಧ್ಯಮಗಳು ಭವಿಷ್ಯ ಹೇಳಿದ್ದವು. ನಾನಿದ್ದರೆ ಸರ್ಕಾರ ಬೀಳಿಸುವ ಕುತಂತ್ರಕ್ಕೆ ಅಡ್ಡಿ ಆಗುತ್ತದೆ ಎಂದೇ ದೂರ ಹೋಗಿದ್ದೆ’ ಎಂದರು.

‘ಮನುಷ್ಯ ಒಂದು ಬಯಸಿದರೆ, ದೇವರು ಮತ್ತೊಂದು ಮಾಡುತ್ತಾನೆ. ಸರ್ಕಾರ ಕಾಪಾಡುವವನು ಮೇಲಿದ್ದಾನೆ. ಮೇಲಿದ್ದಾನೆ ಎಂದರೆ ಕಾಂಗ್ರೆಸ್‌ ಹೈಕಮಾಂಡ್‌ ಅಲ್ಲ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT