ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌– ಜೆಡಿಎಸ್‌ ಪ್ರಮುಖರ ಸಭೆ: ಒಡಕು ಬಿಟ್ಟು ಒಗ್ಗಟ್ಟಿನ ಮಂತ್ರ

ಡಿಸಿಎಂ ಪರಮೇಶ್ವರ ಗೈರು
Last Updated 19 ಮಾರ್ಚ್ 2019, 19:50 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ 20:8 ಕ್ಷೇತ್ರಗಳ ಹಂಚಿಕೆಗೆ ಬದ್ಧರಾಗಿ ಎಲ್ಲ ಬಿಕ್ಕಟ್ಟುಗಳನ್ನೂ ಬದಿಗಿಟ್ಟು ಜಂಟಿ ಪ್ರಚಾರ ನಡೆಸಲು ಕಾಂಗ್ರೆಸ್‌–ಜೆಡಿಎಸ್‌ ನಾಯಕರು ತೀರ್ಮಾನಿಸಿದ್ದಾರೆ. ಒಡಕಿನ ಮಾತು ಆಡದಂತೆ ತಮ್ಮ ಶಾಸಕರು ಹಾಗೂ ಮುಖಂಡರಿಗೆ ಉಭಯ ಪಕ್ಷಗಳ ನಾಯಕರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಆದರೆ, ಚುನಾವಣಾ ರಣತಂತ್ರ, ಅಭ್ಯರ್ಥಿಗಳ ಆಯ್ಕೆ, ಕ್ಷೇತ್ರಗಳಿಗೆ ವೀಕ್ಷಕರ ನೇಮಕ ಸೇರಿದಂತೆ ಮಹತ್ವದ ವಿಷಯಗಳ ಕುರಿತು ಚರ್ಚಿಸಲು ಮಂಗಳವಾರ ನಡೆದ ಮೈತ್ರಿ ಪಕ್ಷಗಳ ಪ್ರಮುಖರ ಸಭೆಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಗೈರಾದರು.

ಹಾಲಿ ಸಂಸದರಿರುವ ತುಮಕೂರು ಕ್ಷೇತ್ರವನ್ನು ಕಾಂಗ್ರೆಸ್‌ಗೆ ವಾಪಸು ನೀಡಬೇಕೆಂದು ಪಟ್ಟು ಹಿಡಿದಿರುವ ಪರಮೇಶ್ವರ ಮಾತಿಗೆ ಜೆಡಿಎಸ್‌ ನಾಯಕರು ಸ್ಪಂದಿಸಿಲ್ಲ. ಇದರಿಂದ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ. ಆದರೆ, ‘ಕುಟುಂಬದಲ್ಲಿ ಪೂರ್ವನಿಯೋಜಿತ ಕಾರ್ಯಕ್ರಮ ಇದ್ದುದರಿಂದ ಭಾಗವಹಿಸಲು ಸಾಧ್ಯವಾಗಿಲ್ಲ’ ಎಂದು ಪರಮೇಶ್ವರ ಟ್ವೀಟ್‌ ಮಾಡಿದ್ದಾರೆ.

‘ಒಗ್ಗಟ್ಟಿನ ಬಗ್ಗೆ ಮೈತ್ರಿಕೂಟದ ನಾಯಕರು ಸಂದೇಶ ರವಾನಿಸಲು ಯತ್ನಿಸಿದ್ದಾರೆ. ಈ ಮಹತ್ವದ ಸಭೆಗೆ ಪರಮೇಶ್ವರ ಬಂದಿಲ್ಲ. ಇದು ವಧು ಇಲ್ಲದ ವಿವಾಹದಂತೆ’ ಎಂದು ಬಿಜೆಪಿ ಲೇವಡಿ ಮಾಡಿದೆ.

‘ಪ್ರಚಾರದ ವೇಳೆ ಭಿನ್ನಾಭಿಪ್ರಾಯ ಉಂಟಾಗದಂತೆ ಎಚ್ಚರಿಕೆ ವಹಿಸಲು ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಎರಡೂ ಪಕ್ಷಗಳ ತಲಾ ಒಬ್ಬರು ಹಿರಿಯ ಮುಖಂಡರನ್ನು ವೀಕ್ಷಕರಾಗಿ ನೇಮಿಸಲು ನಿರ್ಧರಿಸಲಾಗಿದೆ. ಕೋಮುವಾದಿ ಬಿಜೆಪಿಯನ್ನು ಸೋಲಿಸಿ ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದು ನಮ್ಮ ಗುರಿ’ ಎಂದು ಎರಡೂ ಪಕ್ಷಗಳ ನಾಯಕರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.

ಗೆಲ್ಲಲು ‘ಮೈತ್ರಿ’ ಪಂಚ ಸೂತ್ರ

*31ರಂದು ರಾಹುಲ್‌ ಗಾಂಧಿ ಉಪಸ್ಥಿತಿಯಲ್ಲಿ ಮೈತ್ರಿ ಸಮಾವೇಶ

*ಒಡಕಿಗೆ ಆಸ್ಪದ ನೀಡದೆ ಒಗ್ಗಟ್ಟು ಪ್ರದರ್ಶನ

*ಬಿಜೆಪಿ ಸೋಲಿಸುವ ಗುರಿಯೊಂದಿಗೆ ‌ದೇಶಕ್ಕೇ ಮೈತ್ರಿ ಸಂದೇಶ

*ಉಭಯ ಪಕ್ಷಗಳಿಂದ ಪ್ರತಿ ಕ್ಷೇತ್ರಗಳಿಗೆ ತಲಾ ಒಬ್ಬರು ಹಿರಿಯ ನಾಯಕರನ್ನು ವೀಕ್ಷಕರಾಗಿ ನೇಮಕ

*ಭಿನ್ನಾಭಿಪ್ರಾಯಗಳನ್ನು ಆರಂಭದಲ್ಲೇ ಶಮನಗೊಳಿಸಲು ಒತ್ತು

***
* ಕ್ಷೇತ್ರಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸಲು ಸಿದ್ದರಾಮಯ್ಯ–ದೇವೇಗೌಡ ಸಮರ್ಥರಿದ್ದಾರೆ. ನಾವು ಜೊತೆಯಾಗಿ ಕೆಲಸ ಮಾಡುತ್ತೇವೆ

-ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

* ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಜಾತ್ಯತೀತ ಸಿದ್ಧಾಂತದಲ್ಲಿ ನಂಬಿಕೆ ಇರುವವರು ಒಟ್ಟಾಗಬೇಕಿದೆ. ನಮ್ಮ ಹೊಂದಾಣಿಕೆಯ ಉದ್ದೇಶವೂ ಅದೇ

-ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ

ಗುಟ್ಟು ಬಿಟ್ಟು ಕೊಡದ ದೇವೇಗೌಡ

‘ಸ್ವಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್‌ ರೇವಣ್ಣನಿಗೆ ಮೂರು ವರ್ಷಗಳ ಹಿಂದೆಯೇ ಬಿಟ್ಟುಕೊಟ್ಟಿದ್ದೇನೆ’ ಎಂದು ಪುನರುಚ್ಚರಿಸಿದ ಎಚ್‌.ಡಿ. ದೇವೇಗೌಡರು, ಈ ಬಾರಿ ಎಲ್ಲಿಂದ ಕಣಕ್ಕಿಳಿಯಲಿದ್ದೇನೆ ಎಂಬ ಗುಟ್ಟು ಬಿಟ್ಟುಕೊಡಲಿಲ್ಲ.

‘ನನಗೀಗ 87 ವರ್ಷ. 1996ರಲ್ಲಿದ್ದ ದೈಹಿಕ ಸಾಮರ್ಥ್ಯ ಈಗಲೂ ಇದೆ ಎಂದು ಹೇಳುವುದಿಲ್ಲ. ಆದರೆ, ಆ ಉತ್ಸಾಹ ಇದೆ. ರಾಹುಲ್‌ ಜೊತೆ ನಾನೂ ಇರುತ್ತೇನೆ’ ಎಂದರು.

ಮಾಧ್ಯಮ ಪ್ರತಿನಿಧಿಗಳು ಪದೇ ಪದೇ ಕೇಳಿದಾಗಲೂ, ‘ಕ್ಷೇತ್ರ ಹಂಚಿಕೆ ಈಗಾಗಲೇ ಮುಗಿದುಹೋಗಿದೆ. ಅವರು (ಕಾಂಗ್ರೆಸ್‌) 20, ನಾವು ಎಂಟು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದೇವೆ. ಈ ಬಗ್ಗೆ ನಿಮಗೆ ಯಾವುದೇ ಅನುಮಾನ ಬೇಡ. ನಾನು ಎಲ್ಲಿಂದ ಸ್ಪರ್ಧಿಸಬೇಕೆಂದು ಇನ್ನೂ ತೀರ್ಮಾನ ಮಾಡಿಲ್ಲ’ ಎಂದು ನಕ್ಕರು.

ಮಂಡ್ಯದಲ್ಲೇ ಕುಮಾರ ಠಿಕಾಣಿ

ಪುತ್ರ ನಿಖಿಲ್‌ ಅವರನ್ನು ಗೆಲ್ಲಿಸಿಕೊಳ್ಳಲು ಪ್ರತಿಷ್ಠೆಯನ್ನು ಪಣಕ್ಕೊಡ್ಡಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಚುನಾವಣೆ ಮುಗಿಯುವವರೆಗೂ ಮಂಡ್ಯದಲ್ಲೇ ಠಿಕಾಣಿ ಹೂಡಲು ಮುಂದಾಗಿದ್ದಾರೆ. ಆದಿಚುಂಚನಗಿರಿ ಮಠದಲ್ಲಿ ಬುಧವಾರ ಪೂಜೆ ಸಲ್ಲಿಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಮಾರ್ಚ್‌ 25ರಂದು ನಿಖಿಲ್‌ ನಾಮಪತ್ರ ಸಲ್ಲಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT