‘ನೀರಾವರಿ ಬಳಕೆಗೆ ಕೆ.ಸಿ.ವ್ಯಾಲಿ ನೀರು ಯೋಗ್ಯ’

7

‘ನೀರಾವರಿ ಬಳಕೆಗೆ ಕೆ.ಸಿ.ವ್ಯಾಲಿ ನೀರು ಯೋಗ್ಯ’

Published:
Updated:
Prajavani

ಬೆಂಗಳೂರು: ‘ಕೆ.ಸಿ. ವ್ಯಾಲಿ ಯೋಜನೆಯ ಮೂಲಕ ಕೋಲಾರದ ನಾಲ್ಕು ಕೆರೆಗಳಿಗೆ ಪೂರೈಸಿದ ನೀರಿನ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರ ಗುಣಮಟ್ಟವು ‘ಡಿ’ ಮತ್ತು ‘ಇ’ ಶ್ರೇಣಿಗಳ ಪರಿಮಿತಿಯಲ್ಲಿದೆ. ಹೀಗಾಗಿ ಆ ನೀರು ನೀರಾವರಿ ಬಳಕೆಗೆ ಯೋಗ್ಯವಾಗಿದೆ’ ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಮುಖ್ಯ ಎಂಜಿನಿಯರ್‌ ಎಂ.ರವೀಂದ್ರಪ್ಪ ಸ್ಪಷ್ಟಪಡಿಸಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಫೆ. 10ರಂದು ಪ್ರಕಟವಾಗಿರುವ ‘ನೀರಿನ ಬದಲು ಹರಿದ ವಿಷ’ ಒಳನೋಟ ವರದಿಗೆ ಸಂಬಂಧಿಸಿದಂತೆ ಅವರು ಸ್ಪಷ್ಟನೆ ನೀಡಿದ್ದಾರೆ.

‘ಜಲಮಂಡಳಿ ಪ್ರತಿದಿನ ಸಂಸ್ಕರಿಸಿದ ತ್ಯಾಜ್ಯ ನೀರಿನ ಮಾದರಿಗಳನ್ನು ಪರೀಕ್ಷಿಸಿ, ಗುಣಮಟ್ಟ ಖಾತ್ರಿಪಡಿಸಿಕೊಂಡ ನಂತರವೇ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಆ ನೀರನ್ನು ತುಂಬಿಸಲಾದ ಕೆರೆಗಳು ಹಾಗೂ ಆ ಕೆರೆಗಳ ಸುತ್ತಲಿನ ಕೊಳವೆ ಬಾವಿಗಳ ನೀರಿನ ಮಾದರಿಯನ್ನೂ ಪರೀಕ್ಷೆಗೆ ಒಳಪಡಿಸಿ ಫಲಿತಾಂಶವನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ’ ಎಂದು ವಿವರಿಸಿದ್ದಾರೆ.

‘ಗ್ರಾಮಾಂತರ ಭಾಗಗಳಲ್ಲಿ ಕೊಳವೆ ಬಾವಿಗಳಿಂದ ಕುಡಿಯುವ ನೀರು ಪೂರೈಸಲು ಕೋಲಾರದ ಜಿಲ್ಲಾಧಿಕಾರಿಗಳು 1,300 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವುದಾಗಿ ತಿಳಿಸಿದ್ದಾರೆ’ ಎಂದೂ ಮಾಹಿತಿ ನೀಡಿದ್ದಾರೆ.

‘ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮತ್ತು ಪರಿಸರ ಆರೋಗ್ಯ ಸುರಕ್ಷತಾ ಹಾಗೂ ಅಭಿವೃದ್ಧಿ ಕೇಂದ್ರ (ಇಎಚ್‌ಎಸ್‌ ಆ್ಯಂಡ್‌ ಆರ್‌ಡಿ) ಎರಡೂ ಸಂಸ್ಥೆಗಳಿಂದ ನೀರಿನ ಗುಣಮಟ್ಟದ ಪರೀಕ್ಷೆ ಮಾಡಿಸಿ, ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಲಾಗಿದೆ. ಎರಡು ಹಂತಗಳಲ್ಲಿ ಸಂಸ್ಕರಣೆಯಾದ ನೀರಿನಲ್ಲಿ ಭಾರವಾದ ರಾಸಾಯನಿಕ ಇಲ್ಲವೆಂದು ಈ ಪರೀಕ್ಷೆಗಳಿಂದ ದೃಢಪಟ್ಟಿದೆ’ ಎಂದು ವಿವರಿಸಿದ್ದಾರೆ.

‘ಜಲಮೂಲವೇ ಇಲ್ಲದಾಗಿರುವ ಪ್ರದೇಶಗಳಿಗೆ ನೀರು ಪೂರೈಸಲು ಸಮರೋಪಾದಿಯಲ್ಲಿ ಕೈಗೊಂಡ ಯೋಜನೆ ಇದಾಗಿದ್ದು, ಹಲವಾರು ಅಡೆತಡೆ, ಅಡಚಣೆ, ಪ್ರತಿಕೂಲ ಹವಾಮಾನ ತೊಂದರೆಗಳನ್ನೆಲ್ಲ ಮೀರಿ ಕಡಿಮೆ ಅವಧಿಯಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಇದುವರೆಗೆ 12 ಕೆರೆಗಳಿಗೆ 984 ಕೋಟಿ ಲೀಟರ್‌ ನೀರು ಹರಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಯಾವ ಶ್ರೇಣಿ, ಎಂತಹ ನೀರು?

ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವರ್ಗೀಕರಿಸಿರುವ ನೀರಿನ ವಿವಿಧ ಮಾದರಿಗಳ ವಿವರ ಹೀಗಿದೆ: ‘ಎ’ ಶ್ರೇಣಿ–ಕುಡಿಯಲು ಯೋಗ್ಯ, ‘ಬಿ’ ಶ್ರೇಣಿ– ಸ್ನಾನ ಮತ್ತಿತರ ಚಟುವಟಿಕೆಗಳಿಗೆ ಬಳಕೆ ಯೋಗ್ಯ, ‘ಸಿ’ ಶ್ರೇಣಿ– ಸಂಸ್ಕರಿಸಿದ ಬಳಿಕ ಬಳಕೆ ಯೋಗ್ಯ, ‘ಡಿ’ ಶ್ರೇಣಿ–ಜಲಚರ ಹಾಗೂ ಮೀನು ಸಂತತಿಗಳ ಪ್ರಸರಣಕ್ಕೆ ಯೋಗ್ಯ, ‘ಇ’ ಶ್ರೇಣಿ– ನೀರಾವರಿಗೆ ಯೋಗ್ಯವಾದ ನಿಯಂತ್ರಿತ ತ್ಯಾಜ್ಯ ಮಿಶ್ರಿತ ನೀರು

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !