ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೋಲ್ಟ್‌ಗಿಂತಲೂ ಕೋಣವೇ ವೇಗ: ಹೋಲಿಕೆ ಸಲ್ಲದು’

ಶ್ರೀನಿವಾಸ್ ಗೌಡ ಸಾಧನೆಯಿಂದ ಮುನ್ನೆಲೆಗೆ ಬಂದ ‘ಕಂಬಳದ ಓಟ’
Last Updated 17 ಫೆಬ್ರುವರಿ 2020, 22:49 IST
ಅಕ್ಷರ ಗಾತ್ರ

ಮಂಗಳೂರು: ಕೋಣಗಳು ಮನುಷ್ಯನಕ್ಕಿಂತ ವೇಗವಾಗಿ ಓಡುವ ಸಾಮರ್ಥ್ಯ ಹೊಂದಿದ್ದು, ಕಂಬಳದಲ್ಲಿನ ಅವುಗಳ ಜೊತೆಗಿನ ಓಟವನ್ನು ಅಥ್ಲೀಟ್ ಟ್ರ್ಯಾಕ್‌ ಓಟಕ್ಕೆ ಹೋಲಿಸುವುದು ಸಮಂಜಸವಲ್ಲ. ಅದನ್ನು ಪರೀಕ್ಷಿಸಬೇಕು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೂಡುಬಿದಿರೆ ಸಮೀಪದ ಅಶ್ವತ್ಥಪುರದ ಶ್ರೀನಿವಾಸ್‌ ಗೌಡ 142.50 ಮೀಟರ್ ಕರೆ (ಕಂಬಳ ಕೋಣಗಳ ಟ್ರ್ಯಾಕ್)ಯನ್ನು 13.62 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದು, ವೇಗದ ಓಟಗಾರ ಉಸೇನ್ ಬೋಲ್ಟ್ ಜತೆಗೆ ಹೋಲಿಸಲಾಗುತ್ತಿದೆ.

‘ಕೋಣಗಳು ಸಹಜವಾಗಿಯೇ ಬೋಲ್ಟ್‌ಗಿಂತಲೂ ವೇಗವಾಗಿ ಓಡುತ್ತವೆ. ಅವುಗಳ ದೇಹ ರಚನೆ, ಮಾಂಸಖಂಡಗಳು ಮತ್ತಿತರ ಕಾರಣಗಳಿವೆ. ಅಂತಹ ಕೋಣಗಳ ಜೊತೆ ಓಡುವುದಕ್ಕೂ ಟ್ರ್ಯಾಕ್‌ನಲ್ಲಿ ಓಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ’ ಎನ್ನುತ್ತಾರೆ ಉಪ ಅರಣ್ಯಾಧಿಕಾರಿ ಗಿರೀಶ್‌ ಎಚ್.

‘ಟ್ರ್ಯಾಕ್‌ನಲ್ಲಿ ಓಟಗಾರ ಏಕಾಂಗಿಯಾಗಿ ಓಡಬೇಕು. ಕಂಬಳದಲ್ಲಿ ಕೋಣಗಳ ಎಳೆತ ಸಿಗಬಹುದು ಅಥವಾ ಅಡ್ಡಿಯೂ ಆಗಬಹುದು. ಆಗ ಹೆಜ್ಜೆಗಳ ನಡುವಿನ ಅಂತರದಲ್ಲಿ ವ್ಯತ್ಯಯವಾಗುತ್ತದೆ. ಕೆಸರು ಗದ್ದೆಯಲ್ಲಿ ಓಡುವುದೂ ಸುಲಭದ ಮಾತಲ್ಲ. ಆದರೆ, ಎರಡನ್ನೂ ಹೋಲಿಕೆ ಮಾಡುವುದು ಸಮಂಜಸವಲ್ಲ’ ಎಂದು ವಿವರಿಸಿದರು.

‘ಚಿರತೆ, ಹುಲಿ, ಕೋಣ ಮಾತ್ರವಲ್ಲ, ಸಮತಟ್ಟಾದ ಪ್ರದೇಶದಲ್ಲಿ ಆನೆಗಳೂ ಮನುಷ್ಯನಗಿಂತ ವೇಗವಾಗಿ ಓಡುತ್ತವೆ. ಹೀಗಾಗಿ, ಪ್ರಾಣಿಗಳ ಜೊತೆಗಿನ ಓಟ ಮತ್ತು ಟ್ರ್ಯಾಕ್ ಮೇಲಿನ ಓಟವನ್ನು ಹೋಲಿಕೆ ಮಾಡುವುದು ಸರಿಯಲ್ಲ. ವಿಶ್ವ ವೇಗದ ಓಟಗಾರ ಕಂಬಳದ ಕರೆಯಲ್ಲಿ ಓಡುವುದು ಹಾಗೂ ಕಂಬಳದ ಓಟಗಾರನ ವೇಗವನ್ನು ಟ್ರ್ಯಾಕ್‌ನಲ್ಲಿ ನಿರೀಕ್ಷಿಸುವುದೂ ತಪ್ಪಾಗಬಹುದು. ಅದಕ್ಕೆ ಅವಕಾಶ ನೀಡಿ ಪರೀಕ್ಷಿಸಬೇಕು’ ಎನ್ನುತ್ತಾರೆ ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ.

‘ಓಟ–ಆಟಗಳೆಲ್ಲವೂ ಒಂದಕ್ಕಿಂತ ಒಂದು ವಿಭಿನ್ನ. ಓಟದಲ್ಲೂ ಹಿಮ್ಮಡಿ ಇಡುತ್ತಾರಾ? ಅಥವಾ ಮುಂಗಾಲು ಇಡುತ್ತಾರಾ? ಎಂಬುದೂ ಮುಖ್ಯ.ಹೋಲಿಕೆ ಸರಿಯಲ್ಲ. ಜಮೈಕಾದ ಬೋಲ್ಟ್ ಸಾಧನೆಯನ್ನು ನೋಡಿ, ಉತ್ತರ ಕನ್ನಡದ ಸಿದ್ಧಿ ಜನಾಂಗದ ಪ್ರತಿಭೆಗಳಿಗೆ ತರಬೇತಿ ನೀಡಲಾಗಿತ್ತು. ನಿರೀಕ್ಷಿತ ಫಲಿತಾಂಶ ಸಿಕ್ಕಿರಲಿಲ್ಲ. ಅಂದ ಮಾತ್ರಕ್ಕೆ ಕಂಬಳದ ಓಟಗಾರರನ್ನು ನಿರಾಕರಿಸಲೂ ಸಾಧ್ಯವಿಲ್ಲ’ ಎಂದು ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ.ಕೆ. ತಿಳಿಸಿದರು.

‘ಆದರೆ, ಕಂಬಳದಂತಹ ಸಾಂಪ್ರದಾಯಿಕ ಕ್ರೀಡೆಯೂ ವೇಗದ ಓಟಗಾರನನ್ನು ನೀಡಬಲ್ಲದು. ಅಲ್ಲಿ ಶ್ರೀನಿವಾಸ್‌ ಗೌಡ ಮಾಡಿದ ಸಾಧನೆಗೆ ಆದ್ಯತೆ ಸಲ್ಲಲೇಬೇಕು’ ಎಂದು ತಜ್ಞರು ಸಹಮತ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT