ಒಡೆಯುವ ಧ್ವನಿ ಧಿಕ್ಕರಿಸೋಣ, ಒಂದಾಗಿ ದುಡಿಯೋಣ: ಎಚ್.ಡಿ.ಕುಮಾರಸ್ವಾಮಿ ಕರೆ

7
63ನೇ ಕರ್ನಾಟಕ ರಾಜ್ಯೋತ್ಸವ

ಒಡೆಯುವ ಧ್ವನಿ ಧಿಕ್ಕರಿಸೋಣ, ಒಂದಾಗಿ ದುಡಿಯೋಣ: ಎಚ್.ಡಿ.ಕುಮಾರಸ್ವಾಮಿ ಕರೆ

Published:
Updated:

ಬೆಂಗಳೂರು: ‘ಅಖಂಡ ಕರ್ನಾಟಕವನ್ನು ಒಡೆಯುವ ಧ್ವನಿಗಳು ಆಗಾಗ ಕೇಳಿ ಬರುತ್ತಿವೆ. ಅವುಗಳನ್ನು ನಾವೆಲ್ಲ ಒಗ್ಗಟ್ಟಿನಿಂದ ಧಿಕ್ಕರಿಸಬೇಕು’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕರೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ‘63ನೇ ಕರ್ನಾಟಕ ರಾಜ್ಯೋತ್ಸವ’ದಲ್ಲಿ ಅವರು ಮಾತನಾಡಿದರು.

‘ಹಲವಾರು ಗಣ್ಯರ ಹೋರಾಟದ ಫಲವಾಗಿ ನಮ್ಮ ನಾಡು ಏಕೀಕರಣಗೊಂಡಿದೆ. ಈ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ನಾವೆಲ್ಲ ಒಂದಾಗಿ ಇರಬೇಕು. ಒಡೆಯುವ ಧ್ವನಿಗಳಿಗೆ, ಅಪಪ್ರಚಾರಗಳಿಗೆ ನಾವು ಕಿವಿಗೊಡಬಾರದು’ ಎಂದು ಕಿವಿಮಾತು ಹೇಳಿದರು.

‘ಉತ್ತರ ಕರ್ನಾಟಕ, ಹೈದರಾಬಾದ್‌ ಕರ್ನಾಟಕ, ಕರಾವಳಿ ಕರ್ನಾಟಕ, ಮಧ್ಯಕರ್ನಾಟಕ, ಹಳೆ ಕರ್ನಾಟಕ ಎಂದು ಭೇದ ಭಾವ ತೋರದೆ ನಾಡು ಕಟ್ಟಲು ಒಂದೇ ಕುಟುಂಬದ ಮಕ್ಕಳಂತೆ ದುಡಿಯಬೇಕು’ ಎಂದು ಮನವಿ ಮಾಡಿದರು.

‘ಕನ್ನಡದ ಸಾರ್ವಭೌಮತ್ವಕ್ಕೆ ದಕ್ಕೆ ಆಗದಂತೆ, ಶಾಲೆಗಳಲ್ಲಿ ಒಂದನೆ ತರಗತಿಯಿಂದ ಇಂಗ್ಲಿಷ್‌ ಕಲಿಕೆಯನ್ನು ಕಾರ್ಯರೂಪಕ್ಕೆ ತರುತ್ತೇವೆ. ಇದಕ್ಕೆ ಅಪಸ್ವರಗಳು ಕೇಳಿಬರುತ್ತಿವೆ. ಕನ್ನಡದ ಮಕ್ಕಳು ಸಹ ವ್ಯವಹಾರಿಕ ದೃಷ್ಟಿಯಿಂದ ಇಂಗ್ಲಿಷ್‌ ಕಲಿಯಬೇಕು ಎಂಬ ಸದುದ್ದೇಶ ಮಾತ್ರ ಈ ಕಲಿಕೆಯಲ್ಲಿದೆ’ ಎಂದು ಸಿ.ಎಂ. ಸಮರ್ಥಿಸಿಕೊಂಡರು.

ರಾಜ್ಯದಲ್ಲಿನ 153 ವಿಶೇಷ ಚೇತನರ ಶಾಲೆಗಳಲ್ಲಿ ಕಲಿಯುತ್ತಿರುವ ಬುದ್ದಿಮಾಂಧ್ಯ ಮಕ್ಕಳಿಗೆ ಮಧ್ಯಾಹ್ನ ಬಿಸಿಹಾಲು ವಿತರಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದರು. ಇದರ ಉಪಯೋಗವನ್ನು 10,567 ಮಕ್ಕಳು ಪಡೆಯಲಿದ್ದಾರೆ.

ನಾಡಿನ ಗುಣಗಾನ, ಆರೋಗ್ಯ ಮಂತ್ರ ಪಠಣ

ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆ, ಹೋರಾಟಗಾರರ ಛಲವಂತಿಕೆ, ಶಿಕ್ಷಣ ಇಲಾಖೆಯ ಯೋಜನೆಗಳು, ಆರೋಗ್ಯ ಸಂಪಾದಿಸುವ ಮಾರ್ಗಗಳನ್ನು ಶಾಲಾ ಮಕ್ಕಳು ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರಸ್ತುತ ಪಡಿಸಿದರು.

ಬಾಗಲಗುಂಟೆ, ಮಂಜನಾಥನಗರದ 800 ಶಾಲಾ ವಿದ್ಯಾರ್ಥಿಗಳು ಕೆಂಪೇಗೌಡರ ಆಡಳಿತ ಕ್ರಮವನ್ನು ನೃತ್ಯ ರೂಪಕದಲ್ಲಿ ತೋರ್ಪಡಿಸಿದರು. ಚಿಕ್ಕಬಿದರಕಲ್ಲು ಶಾಲಾ ಮಕ್ಕಳು ಸರ್ಕಾರ ಜಾರಿ ಮಾಡಿರುವ ಉಚಿತ ಶಿಕ್ಷಣ, ಸಮವಸ್ತ್ರ, ಸೈಕಲ್‌, ಬಿಸಿಯೂಟ, ಕ್ಷೀರಭಾಗ್ಯ ಹಾಗೂ ವಸತಿ ಶಾಲೆಯಂತ ಯೋಜನೆಗಳನ್ನು ಪರಿಚಯಿಸಿದರು.

‘ಕರುನಾಡು ನಮ್ಮ ಗುಡಿ, ಕನ್ನಡ ನಮ್ಮ ನುಡಿ’ ಎಂಬ ಸಾಲುಗಳಿಗೆ ಹೆಜ್ಜೆ ಹಾಕಿದ ಇಂಡಿಯನ್‌ ಹೈಸ್ಕೂಲ್‌ ಮಕ್ಕಳು ಕವಿ, ಸಾಹಿತಿಗಳ ಕನ್ನಡ ಸೇವೆ ಸ್ಮರಿಸಿದರು. ಪೂರ್ಣಪ್ರಜ್ಞಾ ಶಾಲೆಯಿಂದ ಪ್ರದರ್ಶನಗೊಂಡ ರೂಪಕದಲ್ಲಿ ಹಳ್ಳಿಗಾಡಿನ ಉಡುಪುಗಳನ್ನು ಧರಿಸಿದ್ದ, ಹುಲಿ, ನವಿಲುಗಳ ವೇಷಧಾರಿಯಾಗಿದ್ದ ಮಕ್ಕಳು ರಾಜ್ಯದ ಜನಪದ ಸಂಸ್ಕೃತಿಯ ಝಲಕ್‌ ತೋರಿಸಿದರು.

‘ಮಾಡಬೇಕು ಯೋಗ, ತೊಡೆಯಬೇಕು ರೋಗ’ ಎಂಬ ಸುಶ್ರಾವ್ಯ ಪಂಕ್ತಿಗಳನ್ನು ಕೇಳುತ್ತಲೇ 2 ಸಾವಿರ ವಿದ್ಯಾರ್ಥಿಗಳು ಯೋಗದ ವಿವಿಧ ಆಸನಗಳನ್ನು ಹಾಕಿದರು. ಮರಿಯಂ ನಿಲಯ ಶಾಲೆ, ನ್ಯೂ ಫ್ಲಾರೆನ್ಸ್‌ ಶಾಲೆಯ ಮಕ್ಕಳು ಪ್ರಸ್ತುತ ಪಡಿಸಿದ  ಏರೋಬಿಕ್ಸ್‌ ನೃತ್ಯ ಕೂಡ ಸಭಿಕರ ಚಿತ್ತ ಸೆಳೆಯಿತು. ಈ ಮೂಲಕ ದೈಹಿಕ ದೃಢತೆ, ಮಾನಸಿಕ ಏಕಾಗ್ರತೆಯ ಸಂದೇಶವನ್ನು ಮಕ್ಕಳು ಸಾರಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !