ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದಿ ಅರೆಬಿಯಾದಲ್ಲಿ ಕನ್ನಡಿಗರ ಸಂಕಷ್ಟ

ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಅನಿವಾಸಿ ಕನ್ನಡಿಗರು
Last Updated 29 ಮೇ 2020, 19:34 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಘೋಷಿಸಿರುವುದರಿಂದ ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರು, ತವರಿಗೆ ಮರಳಲು ಆಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಳಲು ತೋಡಿಕೊಂಡಿರುವ ಅವರು, ತಮ್ಮನ್ನು ಕರೆಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಕ್ಯಾನ್ಸರ್, ಹೃದ್ರೋಗದಂತಹ ಗಂಭೀರ ಕಾಯಿಲೆಗೆ ತುತ್ತಾಗಿರುವವರು, ನೂರಾರು ಗರ್ಭಿಣಿಯರು, ನಿರುದ್ಯೋಗಿಗಳು ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಇವರು ಹೇಳಿಕೊಂಡಿದ್ದಾರೆ.

ಮಂಗಳೂರಿನ ಸುರತ್ಕಲ್‌ನ ಇಡ್ಯಾ ನಿವಾಸಿ ಜಬ್ಬಾರ್ ಅಹ್ಮದ್ ಒಂದೂವರೆ ವರ್ಷಗಳಿಂದ ರಿಯಾದ್‌ನ ಖರ್ಜ್‌ನಲ್ಲಿ ಹೌಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಇದೀಗ ಕಳೆದ ಒಂದು ತಿಂಗಳಿಂದ ತೀವ್ರ ಅಸ್ವಸ್ಥಗೊಂಡಿದ್ದು ಕ್ಯಾನ್ಸರ್ ಪೀಡಿತರಾಗಿದ್ದಾರೆ.

ಮಂಗಳೂರಿನ ಪಾಂಡೇಶ್ವರ ನಿವಾಸಿ ಸವನ್ ಡಿಸೋಜಾ (31) ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿ ಒಂದು ವರ್ಷದಿಂದ ಕಂಪನಿಯೊಂದರಲ್ಲಿ ದುಡಿಯುತ್ತಿದ್ದು, ಒಂದೂವರೆ ತಿಂಗಳಿಂದ ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.ಬೆಂಗಳೂರು ಮೂಲದ ಫಜರುಲ್ ‌ರೆಹಮಾನ್ ಸೌದಿ ಅರೇಬಿಯಾದ ರಿಯಾದ್ ನಲ್ಲಿ ದುಡಿಯುತ್ತಿದ್ದರು. ಇತ್ತೀಚೆಗೆ ಮನೆ ಕೆಲಸದ ವೇಳೆ ಕುಸಿದು‌ ಬಿದ್ದು ಎರಡೂ ಕಾಲುಗಳು ತೀವ್ರವಾಗಿ ಗಾಯಗೊಂಡಿದ್ದು ಓಡಾಡಲು ಇತರರ ನೆರವಿನ ಅಗತ್ಯವಿದೆ.

ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮತ್ತು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರೊಂದಿಗೆ ವಿಡಿಯೊ ಸಂವಾದ ನಡೆಸಿ, ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

‘ಸೌದಿ ಅರೇಬಿಯಾ ಸೇರಿದಂತೆ ವಿದೇಶಗಳಲ್ಲಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆತರಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ನೂರಾರು ಜನರನ್ನು ಕರೆತರಲಾಗಿದ್ದು, ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಹಂತ–ಹಂತವಾಗಿ ವ್ಯವಸ್ಥೆ ಮಾಡಬೇಕಾಗಿರುವುದರಿಂದ ಕೆಲವು ದಿನ ಕಾಯಬೇಕಾದುದು ಅನಿವಾರ್ಯವಾಗಿದೆ. ಅನಿವಾಸಿ ಕನ್ನಡಿಗರನ್ನು ಕರೆತರಲು ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ’ ಎಂದು ಅಶ್ವತ್ಥ್ ನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT