ಶುಕ್ರವಾರ, ಫೆಬ್ರವರಿ 26, 2021
31 °C

ಕಪ್ಪತ್ತಗುಡ್ಡಕ್ಕೆ ವನ್ಯಜೀವಿಧಾಮ ಸ್ಥಾನಮಾನ: ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡಂಬಳ (ಗದಗ ಜಿಲ್ಲೆ): ‘ಕಪ್ಪತ್ತಗುಡ್ಡಕ್ಕೆ ವನ್ಯಜೀವಿಧಾಮದ ಸ್ಥಾನಮಾನ ನೀಡಿರುವುದನ್ನು ವಿರೋಧಿಸುತ್ತೇನೆ’ ಎಂದು ಬಿಜೆಪಿ ಶಾಸಕ ಕಳಕಪ್ಪ ಬಂಡಿ ಮಂಗಳವಾರ ಹೇಳಿದರು.

ಇಲ್ಲಿಗೆ ಸಮೀಪದ ಶಿವಾಜಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅವರು ಮಾತನಾಡಿದರು.

‘ಕಪ್ಪತ್ತಗುಡ್ಡದಲ್ಲಿ ಹುಲಿ, ಸಿಂಹ ವಾಸವಾಗಿಲ್ಲ. ಈ ಭಾಗದಲ್ಲಿ ಹಲವು ದಶಕಗಳಿಂದ ವಾಸಿಸುತ್ತಿರುವ ಗ್ರಾಮಸ್ಥರಿಂದಲೂ ಈ ಗುಡ್ಡಕ್ಕೆ ಯಾವುದೇ ಹಾನಿಯಾಗಿಲ್ಲ. ವನ್ಯಧಾಮ ಸ್ಥಾನಮಾನದಿಂದ ರೈತರಿಗೆ ಅನುಕೂಲವಾಗುವ ಬದಲು ತೊಂದರೆಯಾಗುವ ಸಾಧ್ಯತೆಗಳೇ ಹೆಚ್ಚು’ ಎಂದು ಅಭಿಪ್ರಾಯಪಟ್ಟರು.

‘ವನ್ಯಜೀವಿಧಾಮ ಸ್ಥಾನಮಾನ ಲಭಿಸಿದ ನಂತರ ಕಪ್ಪತಗುಡ್ಡದಲ್ಲಿ ಜಾನುವಾರುಗಳನ್ನು ಮೇಯಿಸಲು ಹೋದವರ ವಿರುದ್ಧ ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸಿ, ದಂಡ ವಿಧಿಸುತ್ತಿದ್ದಾರೆ. ಇದರಿಂದ ಈ ಭಾಗದಲ್ಲಿ ವಾಸ ಮಾಡುವವರಿಗೆ ತೊಂದರೆ ಆಗುತ್ತಿದೆ. ಕೃಷಿ ಕೆಲಸ ಹಾಗೂ ಅಭಿವೃದ್ಧಿ ಕಾರ್ಯಗಳಿಗೂ ಅಡಚಣೆ ಆಗುತ್ತಿದೆ’ ಎಂದು ದೂರಿದರು.

ಉದ್ಯೋಗ ಇಲ್ಲ: ‘ಜಿಲ್ಲೆಯಲ್ಲಿ ಪೊಸ್ಕೊ ಕಂಪನಿ ಸ್ಥಾಪನೆ ಆಗಿದ್ದರೆ ಸಾವಿರಾರು ಯುವಕರಿಗೆ ಉದ್ಯೋಗ ಲಭಿಸುತ್ತಿತ್ತು. ಆದರೆ, ಕೆಲ ಬುದ್ಧಿಜೀವಿಗಳು, ಹೋರಾಟಗಾರರು ಜನರನ್ನು ದಿಕ್ಕುತಪ್ಪಿಸಿ, ಆ ಕಂಪನಿ ಇಲ್ಲಿ ಸ್ಥಾಪನೆಯಾಗದಂತೆ ಮಾಡಿದರು. ಇದರಿಂದ ಈ ಭಾಗದ ಜನರು ಉದ್ಯೋಗ ಹುಡುಕಿಕೊಂಡು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳು ಸ್ಥಾಪನೆಯಾದರೆ ಜಿಲ್ಲೆ ಅಭಿವೃದ್ಧಿ ಹೊಂದುತ್ತದೆ, ಜನರ ಆರ್ಥಿಕಮಟ್ಟ ಸುಧಾರಣೆ ಆಗುತ್ತದೆ ಎಂದು ದಿವಂಗತ ಕೆ.ಎಚ್.ಪಾಟೀಲ ಹೇಳುತ್ತಿದ್ದರು. ಆದರೆ, ಅವರ ಮಕ್ಕಳೇ ಈಗ ಕೈಗಾರಿಕೆಗಳ ಸ್ಥಾಪನೆಯನ್ನು ವಿರೋಧಿಸುತ್ತಿರುವುದು ವಿಪರ್ಯಾಸ. ಈ ಕುರಿತು ಸಾರ್ವಜನಿಕರು ಜಾಗೃತರಾಗಬೇಕು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು